ADVERTISEMENT

ಈ ಶಾಲೆಯಲ್ಲಿ ಶಿಕ್ಷಕರೂ ಕಾರ್ಮಿಕರು!

ಶಿಕ್ಷಕರು, ಮಕ್ಕಳಿಂದ ವಾರಕ್ಕೆ ಒಮ್ಮೆ ಶೌಚಾಲಯ ಸ್ವಚ್ಛ

ಸಂಧ್ಯಾ ಹೆಗಡೆ
Published 31 ಜುಲೈ 2018, 20:39 IST
Last Updated 31 ಜುಲೈ 2018, 20:39 IST
ಶಿರಸಿಯ ಗಣೇಶನಗರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರೊಂದಿಗೆ ಶೌಚಾಲಯ ಸ್ವಚ್ಛಗೊಳಿಸುತ್ತಿರುವ ಶಿಕ್ಷಕಿ    ಪ್ರಜಾವಾಣಿ ಚಿತ್ರ
ಶಿರಸಿಯ ಗಣೇಶನಗರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರೊಂದಿಗೆ ಶೌಚಾಲಯ ಸ್ವಚ್ಛಗೊಳಿಸುತ್ತಿರುವ ಶಿಕ್ಷಕಿ    ಪ್ರಜಾವಾಣಿ ಚಿತ್ರ   

ಶಿರಸಿ: ಈ ಸರ್ಕಾರಿ ಶಾಲೆಯ ಶಿಕ್ಷಕರು ವಾರಕ್ಕೊಮ್ಮೆ ಕಾರ್ಮಿಕರಾಗುತ್ತಾರೆ. ತರಗತಿ ಮುಗಿಸಿ, ಮನೆಗೆ ಹೊರಡುವ ಮುನ್ನ ಶಾಲೆಯ ಶೌಚಾಲಯ ತೊಳೆಯುವ ಶಿಕ್ಷಕರಿಗೆ, ಮಕ್ಕಳು ಸಾಥ್ ನೀಡುತ್ತಾರೆ !

ತಾಲ್ಲೂಕಿನ ಹುತ್ಗಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಗಣೇಶನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಕಾಯಕ ಹಲವಾರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ.

‘ಶಾಲೆಯಲ್ಲಿ ಕ್ರೀಡಾ ಚಟುವಟಿಕೆಗೆಂದು ರಚನೆಯಾಗಿರುವ ಎಂಟು ತಂಡಗಳಿವೆ. ಮುಖ್ಯ ಶಿಕ್ಷಕರೂ ಒಳಗೊಂಡು, ಪ್ರತಿ ತಂಡಕ್ಕೆ ಒಬ್ಬರು ಶಿಕ್ಷಕರು ಮುಖ್ಯಸ್ಥರು. ಈ ತಂಡದ ನೇತೃತ್ವದಲ್ಲಿ ಪ್ರತಿ ಶನಿವಾರ ಶೌಚಾಲಯ ಸ್ವಚ್ಛತಾ ಕಾರ್ಯ ನಡೆಯುತ್ತದೆ. ಸರದಿ ಪ್ರಕಾರ ಪ್ರತಿ ತಂಡಕ್ಕೆ ನಾಲ್ಕು ವಾರಕ್ಕೊಮ್ಮೆ ಈ ಕೆಲಸ. ಆದರೆ, ದೈಹಿಕ ಶಿಕ್ಷಣ ಶಿಕ್ಷಕ ಎಸ್‌.ಪಿ.ಶ್ರೀಧರ, ‘ಡಿ’ ದರ್ಜೆ ನೌಕರ ಇರ್ಫಾನ್ ಅವರಿಗೆ ಇದು ಪ್ರತಿ ವಾರದ ಸೇವೆ’ ಎನ್ನುತ್ತಾರೆ ಮುಖ್ಯ ಶಿಕ್ಷಕ ಎಂ.ಎಚ್.ನಾಯ್ಕ.

ADVERTISEMENT

‘ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯಡಿ ಶಾಲೆಗಳಿಗೆ ವಾರ್ಷಿಕವಾಗಿ ದೊರೆಯುವ ₹ 50 ಸಾವಿರ ಅನುದಾನವು ವಿಜ್ಞಾನ, ಕ್ರೀಡೆ, ದಿನಪತ್ರಿಕೆ ಖರೀದಿ, ಕಚೇರಿ ನಿರ್ವಹಣೆಗೆ ಬಳಕೆಯಾಗುತ್ತದೆ. ಲಭ್ಯವಿರುವ ಅನುದಾನದಲ್ಲಿ ಪ್ರತಿ ವಾರ ಹೊರಗಿನವರನ್ನು ಕರೆತಂದು ಶೌಚಾಲಯ ಸ್ವಚ್ಛಗೊಳಿಸಲು ಕಷ್ಟ. ಒಮ್ಮೆ ಶೌಚಾಲಯ ತೊಳೆದರೆ ₹1,000 ಕೊಡಬೇಕು. ಶಿಕ್ಷಕರ ನಡುವೆ ಇದರ ಬಗ್ಗೆ ಚರ್ಚೆ ನಡೆದು, ನಾವೇ ಈ ಕಾರ್ಯಕ್ಕೆ ಮುಂದಾಗುವುದೆಂದು ನಿರ್ಧರಿಸಿದೆವು’ ಎಂದು ಪ್ರತಿಕ್ರಿಯಿಸಿದರು.

‘ನನಗೆ ಮನೆಯಲ್ಲಿ ಶೌಚಾಲಯ ತೊಳೆಯಲು ಅಸಹ್ಯವಾಗುತ್ತಿತ್ತು. ಶಾಲೆಯ ಸಾಮೂಹಿಕ ಕಾರ್ಯದಲ್ಲಿ ಭಾಗವಹಿಸುವುದರಿಂದ ನನ್ನಲ್ಲಿರುವ ನಕಾರಾತ್ಮಕ ಭಾವನೆ ಬದಲಾಗಿದೆ. ನಮ್ಮ ಮನೆಯಲ್ಲಿ ಈಗ ಶೌಚಾಲಯ ಸ್ವಚ್ಛತಾ ಕಾರ್ಯ ನನ್ನದೇ’ ಎನ್ನುತ್ತಾನೆ ವಿದ್ಯಾರ್ಥಿ ಮಂಜು ಪೂಜಾರಿ.

‘ಮಕ್ಕಳು ಶಾಲೆಯ ಶೌಚಾಲಯ ಹೆಚ್ಚು ಬಳಸುವ ಕಾರಣ, ಬಡ ಕೂಲಿಕಾರ್ಮಿಕರ ಕುಟುಂಬದವರೇ ವಾಸವಿರುವ ಗಣೇಶನಗರದಲ್ಲಿ ಎಲ್ಲ ಮನೆಗಳಲ್ಲೂ ಶೌಚಾಲಯ ನಿರ್ಮಾಣವಾಗಿದೆ’ ಎಂದರು ಎಂ.ಎಚ್. ನಾಯ್ಕ.

* ಸದಾ ಸ್ವಚ್ಛವಾಗಿರುವ ಶೌಚಾಲಯವನ್ನು ಮಕ್ಕಳು ಖುಷಿಯಿಂದ ಬಳಸುತ್ತಾರೆ.

ಎಂ.ಎಚ್.ನಾಯ್ಕ,ಗಣೇಶನಗರ ಪ್ರೌಢಶಾಲೆಯ ಮುಖ್ಯ ಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.