ಬೆಂಗಳೂರು: ಶಿಕ್ಷಕರು ಇನ್ನುಮುಂದೆ ಆನ್‌ಲೈನ್ ಮೂಲಕವೇ ರಜೆಗೆ ಅರ್ಜಿ ಸಲ್ಲಿಸಿ, ಅದಕ್ಕೆ ಮಂಜೂರಾತಿ ಪಡೆಯುವ ತಂತ್ರಾಂಶ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ರೂಪಿಸುತ್ತಿದೆ.
ಇದಕ್ಕಾಗಿ ಎಲ್ಲ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸೇವಾ ಮಾಹಿತಿ, ಬೋಧಕೇತರ ಸಿಬ್ಬಂದಿ, ಅಧಿಕಾರಿಗಳ ಸೇವಾ ಮಾಹಿತಿಯನ್ನು ಟೀಚರ್ಸ್ ಡೇಟಾ ಸಾಫ್ಟ್‌ವೇರ್(ಟಿಡಿಎಸ್)ನಲ್ಲಿ ಅಳವಡಿಸಲಾಗುತ್ತಿದೆ.
ಈ ತಂತ್ರಾಂಶದ ಮೂಲಕವೇ ರಜೆ ಮಂಜೂರಾತಿ, ಕಾಲಮಿತಿ ವೇತನ ಬಡ್ತಿ, ಪಾಸ್‌ಪೋರ್ಟ್ ಪಡೆಯಲು ಇಲಾಖೆಯ ನಿರಕ್ಷೇಪಣಾ ಪ್ರಮಾಣಪತ್ರ, ಅಧಿಕಾರಿಗಳ ತಾತ್ಕಾಲಿಕ ಪ್ರವಾಸ ಪಟ್ಟಿ, ಪ್ರವಾಸ ದಿನಚರಿಗೆ ಅನುಮೋದನೆ ನೀಡಲು ನಿರ್ಧರಿಸಲಾಗಿದೆ.
ಟಿಡಿಎಸ್‌ನಲ್ಲಿ ಸದ್ಯ ಇರುವ ಮಾಹಿತಿಯನ್ನು ಪರಿಶೀಲಿಸಿ, ದೋಷಗಳಿದ್ದರೆ ಫೆ.12ರೊಳಗೆ ಸರಿಪಡಿಸುವಂತೆ ಇಲಾಖೆಯ ಜಂಟಿ ನಿರ್ದೇಶಕರು ಡಿಡಿಒಗಳಿಗೆ ಇತ್ತೀಚಿನ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.ಶಿಕ್ಷಕರು ಸದ್ಯ ಪುಟವೊಂದರಲ್ಲಿ ರಜೆಯ ಅರ್ಜಿ ಬರೆದು, ಮುಖ್ಯ ಶಿಕ್ಷಕರಿಗೆ ನೀಡಿ, ಮಂಜೂರಾತಿಗೆ ಅನುಮೋದನೆ ಪಡೆಯುತ್ತಿದ್ದಾರೆ.
‘ಈಗ ಎಲ್ಲ ರಂಗದಲ್ಲೂ ಡಿಜಿಟಲೀಕರಣ ಹಾಸುಹೊಕ್ಕಾಗಿದೆ. ಇಲಾಖೆಯಲ್ಲಿ ಮತ್ತಷ್ಟು ಪಾರದರ್ಶಕತೆ ತರಲು ಈ ಆನ್‌ಲೈನ್ ವ್ಯವಸ್ಥೆ ತರುತ್ತಿದ್ದೇವೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ (ಪ್ರಾಥಮಿಕ) ಎಸ್.ಜಯಕುಮಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.