ಬೆಂಗಳೂರು: ಬಡ್ತಿ, ವರ್ಗಾವಣೆಗೆ ಅಡ್ಡಿಯಾಗಿರುವ ವೃಂದ ಮತ್ತು ನೇಮಕಾತಿ ನಿಯಮ–2017ಕ್ಕೆ ತಿದ್ದುಪಡಿ ತಂದು ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ಆ. 12ರಂದು ರಜೆ ಹಾಕಿ, ಬೆಂಗಳೂರು ಚಲೋ ಹಮ್ಮಿಕೊಂಡಿದ್ದಾರೆ.
ಅತ್ತ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳು ‘ಸ್ವಾತಂತ್ರ್ಯ ಇಲ್ಲದ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಅಸಾಧ್ಯವಾಗಿದೆ. ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ’ ಎಂದು ಆರೋಪಿಸಿ ಆ.15ರಂದು ಕರಾಳ ದಿನ ಆಚರಿಸುತ್ತಿವೆ.
ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆ:
2016ಕ್ಕಿಂತ ಮೊದಲು ನೇಮಕವಾದ ಶಿಕ್ಷಕರಿಗೆ 2017ರ ನಿಯಮ ಅನ್ವಯಿಸಬಾರದು. 1ರಿಂದ 8ನೇ ತರಗತಿಯ ಪ್ರಾಥಮಿಕ ಶಾಲೆಗಳಿಗೆ ನೇಮಕವಾದ ಶಿಕ್ಷಕರನ್ನು 1ರಿಂದ 5ನೇ ತರಗತಿಗೆ ಸೀಮಿತಗೊಳಿಸಿರುವ ಆದೇಶವನ್ನು ಹಿಂಪಡೆಯಬೇಕು. ಪದವಿ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಿಕ್ಷಕರು (ಜಿಪಿಟಿ) ಎಂದು ಪರಿಗಣಿಸಬೇಕು. ಸೇವಾ ಜ್ಯೇಷ್ಠತೆ, ಬಡ್ತಿ, ವರ್ಗಾವಣೆ ಪ್ರಕ್ರಿಯೆಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಬಡ್ತಿಯಲ್ಲಿ ಮೊದಲ ಆದ್ಯತೆ ನೀಡಬೇಕು. ಮುಖ್ಯಶಿಕ್ಷಕರ ಹುದ್ದೆಗೆ ಸೇವಾ ಹಿರಿತನ ಪರಿಗಣಿಸಿ ಬಡ್ತಿ ನೀಡಬೇಕು. ಬಿ.ಇಡಿ ಪದವಿಧರರಿಗೆ ಪ್ರೌಢಶಾಲೆಗೆ ಪರಿಗಣಿಸಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ರಾಜ್ಯದ ಪ್ರಾಥಮಿಕ ಶಾಲೆಗಳ ಒಂದು ಲಕ್ಷಕ್ಕೂ ಹೆಚ್ಚಿನ ಶಿಕ್ಷಕರು ಬೆಂಗಳೂರು ಚಲೋ ಹಮ್ಮಿಕೊಂಡಿದ್ದಾರೆ.
ಆ.15ಕ್ಕೆ ಕರಾಳ ದಿನ:
ಶಾಲಾ ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಗಳಲ್ಲಿ ಯಾವ ನಿಯಮವನ್ನೂ ಪಾಲಿಸದೆ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಕಿರುಕುಳ ನೀಡುತ್ತಿದೆ. ಹೊಸ ಶಿಕ್ಷಣ ಸಂಸ್ಥೆಗಳಿಗೆ ರಚಿಸಿದ ನಿಯಮಗಳನ್ನು ನ್ಯಾಯಾಲಯದ ತೀರ್ಪು ಉಲ್ಲಂಘಿಸಿ ಹಳೆಯ ಶಿಕ್ಷಣ ಸಂಸ್ಥೆಗಳ ಮೇಲೂ ಹೇರುತ್ತಿದೆ. ಸಾಧ್ಯವಾಗದ ದಾಖಲೆಗಳನ್ನು ನೀಡಲು ಒತ್ತಡ ಹಾಕುವ ಮೂಲಕ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತಿದೆ. ಬಿಇಒ, ಡಿಡಿಪಿಐ ವರ್ಗಾವಣೆಯಲ್ಲೂ ಹಣಕಾಸಿನ ವ್ಯವಹಾರ ನಡೆಯುತ್ತಿದೆ. ಇಂಥವರು ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ವಸೂಲಿಗೆ ಇಳಿದಿದ್ದಾರೆ ಎಂಬ ಆರೋಪಿಸಿರುವ ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ, ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ಸಮನ್ವಯ ಸಮಿತಿ, ಖಾಸಗಿ ಶಾಲಾ ವ್ಯವಸ್ಥಾಪಕ ಮಂಡಳಿಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಆ. 15ರಂದು ಕರಾಳ ದಿನ ಆಚರಿಸುತ್ತಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳು ಸ್ವಾತಂತ್ರ್ಯದ ದಿನ ಕರಾಳ ದಿನ ಆಚರಿಸುವುದನ್ನು ಒಪ್ಪಲಾಗದು. ಸರ್ಕಾರ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ಸಮಸ್ಯೆಗಳಿಗೆ ಪರಿಹಾರ ಹುಡುಕಲಿಎಸ್. ಸುರೇಶ್‌ಕುಮಾರ್, ಬಿಜೆಪಿ ಶಾಸಕ
ರಾಜ್ಯದ 6,523 ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ಇದ್ದಾರೆ. ಶೈಕ್ಷಣಿಕ ವರ್ಷದ ಮಧ್ಯದಲ್ಲಿ ನಡೆಸುವ ಹೋರಾಟದಿಂದ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆವಿ.ಪಿ. ನಿರಂಜನಾರಾಧ್ಯ, ಶಿಕ್ಷಣ ತಜ್ಞ
ಶಿಕ್ಷಕರ ಬೇಡಿಕೆಯಲ್ಲಿ ಕಾನೂನಾತ್ಮಕ ಅಂಶಗಳಿದ್ದು, ವಿವಿಧ ಇಲಾಖೆಗಳಿಂದ ಅಭಿಪ್ರಾಯ ಸಂಗ್ರಹಿಸಿ, ಸಮಸ್ಯೆ ಬಗೆಹರಿಸಲಾಗುವುದುಮಧು ಬಂಗಾರಪ್ಪ, ಶಾಲಾ ಶಿಕ್ಷಣ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.