ADVERTISEMENT

ಶಿಕ್ಷಕರ ನೇಮಕಾತಿಗೆ ತೊಡಕು: ಫೆ. 23ರಂದು ಸಭಾಪತಿ ನೇತೃತ್ವದಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 16:27 IST
Last Updated 16 ಫೆಬ್ರುವರಿ 2023, 16:27 IST
   

ಬೆಂಗಳೂರು: ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ನಿವೃತ್ತಿ, ರಾಜೀನಾಮೆ ಮತ್ತಿತರ ಕಾರಣಗಳಿಂದ ಖಾಲಿಯಾದ ಹುದ್ದೆಗಳನ್ನು ಭರ್ತಿಮಾಡಲು ಇರುವ ತೊಡಕುಗಳ ನಿವಾರಣೆಗೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆಯಲ್ಲಿ ಇದೇ 23ರಂದು ಸಭೆ ನಡೆಸಲು ನಿರ್ಧರಿಸಲಾಗಿದೆ.

ವಿಧಾನ ಪರಿಷತ್‌ನಲ್ಲಿ ಗುರುವಾರ ಗಮನ ಸೆಳೆಯುವ ಸೂಚನೆ ಮಂಡಿಸಿದ ಜೆಡಿಎಸ್‌ನ ಮರಿತಿಬ್ಬೇಗೌಡ, 2015ರ ಡಿಸೆಂಬರ್‌ 31ರ ನಂತರ ಖಾಲಿಯಾದ ಹುದ್ದೆಗಳ ಭರ್ತಿಗೆ ವಿಧಿಸಿರುವ ನಿರ್ಬಂಧ ತೆರವುಗೊಳಿಸುವಂತೆ ಆಗ್ರಹಿಸಿದರು. ಬಿಜೆಪಿಯ ವೈ.ಎ. ನಾರಾಯಣಸ್ವಾಮಿ, ಶಶೀಲ್‌ ಜಿ. ನಮೋಶಿ, ಎಸ್‌.ವಿ. ಸಂಕನೂರ, ಜೆಡಿಎಸ್‌ನ ಎಸ್‌.ಎಲ್‌. ಭೋಜೇಗೌಡ ಈ ಬೇಡಿಕೆಗೆ ದನಿಗೂಡಿಸಿದರು.

ಉತ್ತರ ನೀಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್‌, ‘ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2015ರ ಡಿ.31ರವರೆಗೆ ಖಾಲಿಯಾದ ಹುದ್ದೆಗಳ ಭರ್ತಿಗೆ ಮಾತ್ರ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ. ನಂತರದಲ್ಲಿ ಖಾಲಿಯಾದ ಹುದ್ದೆಗಳ ಭರ್ತಿ ಕುರಿತು ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಸಮಸ್ಯೆ ಪರಿಹರಿಸಲಾಗುವುದು’ ಎಂದರು.

ADVERTISEMENT

ಉತ್ತರದಿಂದ ಸದಸ್ಯರಿಗೆ ಸಮಾಧಾನವಾಗಲಿಲ್ಲ. ನಿರ್ಬಂಧ ತೆರವುಗೊಳಿಸುವುದಾಗಿ ಘೋಷಿಸುವಂತೆ ಪಟ್ಟು ಹಿಡಿದರು. ತಮ್ಮ ನೇತೃತ್ವದಲ್ಲಿ ಸಭೆ ಕರೆಯುವಂತೆ ಸಭಾಪತಿ ಸಲಹೆ ನೀಡಿದರು. ಅದನ್ನು ನಾಗೇಶ್‌ ಒಪ್ಪಿಕೊಂಡರು.

ವಯೋಮಿತಿ ಹೆಚ್ಚಳಕ್ಕೆ ಪ್ರಸ್ತಾವ: ಕೋವಿಡ್‌ ಕಾರಣದಿಂದ ಸರ್ಕಾರಿ ಶಾಲೆಗಳ ಶಿಕ್ಷಕರ ನೇಮಕಾತಿಯಲ್ಲಿ ಎರಡು ವರ್ಷಗಳ ವಯೋಮಿತಿ ಹೆಚ್ಚಿಸಲಾಗಿತ್ತು. ಅದನ್ನು ಅನುದಾನಿತ ಪ್ರೌಢ ಶಾಲೆಗಳಿಗೂ ಅನ್ವಯಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವ ಕಳುಹಿಸಲಾಗಿದೆ ಎಂದು ಬಿಜೆಪಿಯ ಎಸ್‌.ವಿ. ಸಂಕನೂರ ಅವರ ಗಮನ ಸೆಳೆಯುವ ಸೂಚನೆಗೆ ನಾಗೇಶ್‌ ಉತ್ತರಿಸಿದರು.

ಪದವಿ ಕಾಲೇಜುಗಳವರೆಗೂ ಈ ರೀತಿ ವಯೋಮಿತಿ ಹೆಚ್ಚಿಸುವಂತೆ ಸದಸ್ಯರು ಆಗ್ರಹಿಸಿದರು. ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.