ಬೆಂಗಳೂರು: ಪದವೀಧರ ಪ್ರಾಥಮಿಕ ಶಿಕ್ಷಕ ವೃಂದದ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದ ಒಂದು ಸಾವಿರಕ್ಕೂ ಹೆಚ್ಚು ವಿವಾಹಿತ ಮಹಿಳೆಯರ ಉದ್ಯೋಗದ ಕನಸು, ಕಾನೂನು ಹೋರಾಟಕ್ಕೆ ಸಿಲುಕಿ ಅತಂತ್ರವಾಗಿದೆ.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ (6ರಿಂದ 8ನೇ ತರಗತಿ) ಖಾಲಿ ಇರುವ 15 ಸಾವಿರ ಶಿಕ್ಷಕರ ಹುದ್ದೆಗಳ ನೇಮಕಾತಿಗೆ 2022ರ ಮಾರ್ಚ್‌ನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಸೂಚನೆ ಹೊರಡಿಸಿತ್ತು.
ಮೀಸಲಾತಿ ಅನ್ವಯ ಹುದ್ದೆಗಳಿಗೆ ಆಯ್ಕೆ ಬಯಸುವವರು ಜಾತಿ ಮತ್ತು ಆದಾಯ ಪ್ರಮಾಣಪತ್ರ ಸಲ್ಲಿಸುವುದು ನಿಯಮ. ‘ಅವಿವಾಹಿತೆಯರು ತಂದೆಯ ಆದಾಯ, ವಿವಾಹಿತೆಯರು ಗಂಡನ ಆದಾಯ ಪ್ರಮಾಣಪತ್ರ ಸಲ್ಲಿಸಬೇಕಿತ್ತು. ಆದರೆ, ಮದುವೆಯಾಗಿದ್ದರೂ ತಂದೆಯ ಆದಾಯ ಪ್ರಮಾಣಪತ್ರ ಸಲ್ಲಿಸಿದ್ದಾರೆ’ ಎಂಬ ಕಾರಣ ನೀಡಿ ಒಂದು ಸಾವಿರಕ್ಕೂ ಹೆಚ್ಚು ಮಹಿಳಾ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಿ, ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಲಾಗಿತ್ತು.
ನೇಮಕಾತಿಗೆ ಹೊರಡಿಸಿದ್ದ ಅಧಿಸೂಚನೆಯಲ್ಲಿ ಮದುವೆಯಾದ ಮಹಿಳೆಯರು ಗಂಡನ ಆದಾಯ ಪ್ರಮಾಣ ಪತ್ರವನ್ನೇ ಸಲ್ಲಿಸಬೇಕು ಎನ್ನುವ ಕುರಿತು ಯಾವುದೇ ಸ್ಪಷ್ಟ ನಿರ್ದೇಶನ ಇರಲಿಲ್ಲ. ಈ ಅಂಶವನ್ನು ಇಟ್ಟುಕೊಂಡು ವಿವಾಹಿತೆಯರು ಹೈಕೋರ್ಟ್ ಮೊರೆ ಹೋಗಿದ್ದರು.
‘ಮಹಿಳೆ ಇತರೆ ಯಾವುದೇ ಜಾತಿಯ ಪುರುಷನನ್ನು ಮದುವೆಯಾದರೂ, ಜಾತಿ ತಂದೆಯದೇ ಆಗಿರುತ್ತದೆ. ಹಾಗಾಗಿ, ತಂದೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ಉದ್ಯೋಗ, ಚುನಾವಣೆ ಉಮೇದುವಾರಿಕೆಯ ಹಲವು ಪ್ರಕರಣಗಳಲ್ಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗಳು ತೀರ್ಪು ನೀಡಿವೆ. ಹಿಂದೆ ನಡೆದ ಶಿಕ್ಷಕರ ನೇಮಕಾತಿಯಲ್ಲೂ ಈ ಸಮಸ್ಯೆ ಇರಲಿಲ್ಲ’ ಎನ್ನುವುದನ್ನು ಮಹಿಳಾ ಅಭ್ಯರ್ಥಿಗಳು ಪ್ರತಿಪಾದಿಸಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್ ತಂದೆಯ ಆದಾಯ ಪ್ರಮಾಣಪತ್ರ ಸಲ್ಲಿಸಿರುವ ವಿವಾಹಿತ ಮಹಿಳೆಯರನ್ನೂ ಮೆರಿಟ್ ಆಧಾರದಲ್ಲಿ ಗಣನೆಗೆ ತೆಗೆದುಕೊಂಡು ಆಯ್ಕೆಪಟ್ಟಿ ಪ್ರಕಟಿಸಲು ಸೂಚಿಸಿತ್ತು. ಕೋರ್ಟ್ ಸೂಚನೆಯಂತೆ 2023ರ ಜನವರಿಯಲ್ಲಿ ಅಂತಿಮಪಟ್ಟಿ ಪ್ರಕಟಿಸಲಾಗಿತ್ತು.
ಸುಪ್ರೀಂಕೋರ್ಟ್ ಮೆಟ್ಟಿಲೇರಿದ ವಿವಾದ:
ಹೈಕೋರ್ಟ್ ಆದೇಶದಂತೆ ತಂದೆಯ ಆದಾಯ ಪ್ರಮಾಣಪತ್ರ ಸಲ್ಲಿಸಿದ್ದ ವಿವಾಹಿತ ಮಹಿಳೆಯರನ್ನು ನೇಮಕಾತಿಗೆ ಪರಿಗಣಿಸಿ, ಅಂತಿಮಪಟ್ಟಿ ಪ್ರಕಟಿಸಿದ್ದರಿಂದಾಗಿ ಪತಿಯ ಆದಾಯ ಸಲ್ಲಿಸಿದ್ದ ಅಷ್ಟೇ ಸಂಖ್ಯೆಯ ಮಹಿಳಾ ಅಭ್ಯರ್ಥಿಗಳನ್ನು ಕೈಬಿಡಲಾಯಿತು. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿದ್ದ ತಮ್ಮನ್ನು ಅಂತಿಮಪಟ್ಟಿಯಿಂದ ಕೈಬಿಡಲಾಗಿದೆ ಎಂದು ಅವರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ 10 ತಿಂಗಳಿನಿಂದ ನಡೆಯುತ್ತಿದೆ.
ಈ ಮಧ್ಯೆ ಶಾಲೆಗಳು ಪುನರಾರಂಭವಾಗುತ್ತಿದ್ದು, ಶಿಕ್ಷಕರ ಕೊರತೆಯಿಂದ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುತ್ತದೆ ಎಂದು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟಿತ್ತು. ಹಾಗಾಗಿ, ತಾತ್ಕಾಲಿಕ ಆಯ್ಕೆಪಟ್ಟಿ ಮತ್ತು ಅಂತಿಮಪಟ್ಟಿಯಲ್ಲಿ ವ್ಯತ್ಯಾಸವಾಗಿದ್ದ ವಿವಾಹಿತ ಮಹಿಳೆಯರನ್ನು ಹೊರತುಪಡಿಸಿ, ಉಳಿದವರಿಗೆ ಅಂತಿಮ ತೀರ್ಪಿನ ಷರತ್ತಿಗೆ ಒಳಪಟ್ಟು ನೇಮಕಾತಿ ಆದೇಶ ನೀಡಲು ಕೋರ್ಟ್ ಸಮ್ಮತಿಸಿತ್ತು. ನಂತರ 11,494 ಅಭ್ಯರ್ಥಿಗಳನ್ನು ಸ್ಥಳ ನಿಯುಕ್ತಿ ಮಾಡಲಾಗಿತ್ತು. ವಿಚಾರಣೆ ಪೂರ್ಣಗೊಳ್ಳದ ಕಾರಣ ವಿವಾಹಿತ ಮಹಿಳೆಯರ ನೇಮಕಾತಿ ಅತಂತ್ರವಾಗಿಯೇ ಇದೆ.
ಎಲ್ಲರೂ ಹಿಂದುಳಿದ ವರ್ಗದವರು
ಸುಪ್ರೀಂಕೋರ್ಟ್‌ನ ಮಧ್ಯಂತರ ಆದೇಶದಂತೆ 11,494 ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿ ಆದೇಶ ನೀಡಿದ್ದ ಶಿಕ್ಷಣ ಇಲಾಖೆ, ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿ, ಸ್ಥಳ ಆಯ್ಕೆ ಮಾಡಿಕೊಂಡಿದ್ದರೂ, ಅಂಕಪಟ್ಟಿ, ಪೊಲೀಸ್ ದೃಢೀಕರಣ, ಸಿಂಧುತ್ವ ಪ್ರಮಾಣಪತ್ರ ಪರಿಶೀಲನೆ ಪೂರ್ಣಗೊಳಿಸದ ಅಭ್ಯರ್ಥಿಗಳ ನೇಮಕಾತಿ ಆದೇಶಗಳನ್ನು ತಡೆಹಿಡಿದಿತ್ತು.
ಸಾಮಾನ್ಯ ವರ್ಗದ ಅಂತಹ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ಸುಪ್ರೀಂಕೋರ್ಟ್ ಇದೇ ಅ.10ರಂದು ಸೂಚಿಸಿತ್ತು. ಅಂಥವರಿಗೆ ಈಗ ಸ್ಥಳ ನಿಯುಕ್ತಿ ಆದೇಶ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಆದರೆ, ಮೆರಿಟ್ ಇದ್ದರೂ ತಂದೆಯ ಆದಾಯ ಪ್ರಮಾಣಪತ್ರ ಸಲ್ಲಿಸಿ, ಅವಕಾಶ ವಂಚಿತರಾಗಿರುವ ವಿವಾಹಿತ ಮಹಿಳೆಯರು ಸುಪ್ರೀಂಕೋರ್ಟ್‌ನ ಅಂತಿಮ ತೀರ್ಪಿನ ನಿರೀಕ್ಷೆಯಲ್ಲಿದ್ದಾರೆ. ಈ ಎಲ್ಲರೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು.ತಂದೆಯ ಆದಾಯ ಪ್ರಮಾಣಪತ್ರ ಸಲ್ಲಿಸಿದ್ದ ನನಗೆ ಮೆರಿಟ್ ಆಧಾರದಲ್ಲಿ ಸಾಮಾನ್ಯ ವರ್ಗದಡಿ ಸ್ಥಳ ನಿಯುಕ್ತಿ ಆದೇಶ ನೀಡಲಾಗಿತ್ತು. ಎರಡು ತಿಂಗಳು ಕೆಲಸ ಮಾಡಿದ ನಂತರ ಮತ್ತೆ ರದ್ದು ಮಾಡಿದರು.
ಅಧಿಸೂಚನೆಯಲ್ಲಿ ಸ್ಪಷ್ಟತೆ ಇಲ್ಲದ ಕಾರಣ ತಂದೆಯ ಆದಾಯ ಪ್ರಮಾಣಪತ್ರವನ್ನೇ ಸಲ್ಲಿಸಿದ್ದೆ. ತಂದೆಗಿಂತ ಕಡಿಮೆ ಇರುವ ಪತಿಯ ಆದಾಯ ಪ್ರಮಾಣಪತ್ರವನ್ನೂ ಪರಿಶೀಲನೆ ವೇಳೆ ಸಲ್ಲಿಸಿದ್ದರೂ ನೇಮಕಾತಿ ಆದೇಶ ನೀಡಿಲ್ಲಕೆ.ಪಿ. ರತ್ನಾ, ವಿವಾಹಿತ ಮಹಿಳಾ ಅಭ್ಯರ್ಥಿ
ತಂದೆಯ ಆದಾಯ ಪ್ರಮಾಣಪತ್ರ ಸಲ್ಲಿಸಿದ್ದ ನನಗೆ ಮೆರಿಟ್ ಆಧಾರದಲ್ಲಿ ಸಾಮಾನ್ಯ ವರ್ಗದಡಿ ಸ್ಥಳ ನಿಯುಕ್ತಿ ಆದೇಶ ನೀಡಲಾಗಿತ್ತು. ಎರಡು ತಿಂಗಳು ಕೆಲಸ ಮಾಡಿದ ನಂತರ ಮತ್ತೆ ರದ್ದು ಮಾಡಿದರುಚೈತ್ರಾ, ತಂದೆಯ ಆದಾಯ ಪ್ರಮಾಣಪತ್ರ ಸಲ್ಲಿಸಿದ್ದ ಅಭ್ಯರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.