ಬೆಂಗಳೂರು: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಮತ್ತೊಮ್ಮೆ ಕಂಟಕ ಎದುರಾಗಿದೆ. ಮಂಗಳವಾರದಿಂದ (ಫೆ. 28) ನಡೆಯಬೇಕಿದ್ದ ಪ್ರಾಥಮಿಕ ಶಾಲಾ ಸಹಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌ಗೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ತಡೆಯಾಜ್ಞೆ ನೀಡಿದೆ. ಹೀಗಾಗಿ, ಕೌನ್ಸೆಲಿಂಗ್ ಅನ್ನು ಶಿಕ್ಷಣ ಇಲಾಖೆ ಸ್ಥಗಿತಗೊಳಿಸಿದೆ.
ಪ್ರಾಥಮಿಕ ಶಾಲಾ ಸಹಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಎರಡು ಹಂತದಲ್ಲಿ ನಡೆಸಲಾಗಿದೆ. ಮೊದಲ ಹಂತದಲ್ಲಿ ಈಗಾಗಲೇ ಸುಮಾರು 8 ಸಾವಿರ ಶಿಕ್ಷಕರಿಗೆ ವರ್ಗಾವಣೆ ದೊರೆತಿದೆ. ಆದರೆ, ಎರಡನೇ ಹಂತದ ಅಂತರ ಘಟಕ ವಿಭಾಗದ ಹೊರಗಿನ (ವಿಭಾಗದಿಂದ ಹೊರಗೆ) ವರ್ಗಾವಣೆಗೆ ತಡೆಯಾಜ್ಞೆ ನೀಡಿರುವುದರಿಂದ ಅರ್ಜಿ ಸಲ್ಲಿಸಿದ್ದ 645 ಶಿಕ್ಷಕರು ವರ್ಗಾವಣೆಯಿಂದ ವಂಚಿತರಾಗುವ ಆತಂಕದಲ್ಲಿದ್ದಾರೆ.
ಪ್ರಾಥಮಿಕ ಶಾಲಾಪದವೀಧರ ಶಿಕ್ಷಕ (ಜಿಪಿಟಿ) ಹುದ್ದೆಗಳಿಗೆ ಪ್ರಾಥಮಿಕ ಶಾಲಾ ಸಹ ಶಿಕ್ಷಕರನ್ನು (ಪಿಎಸ್‌ಟಿ) ಕೌನ್ಸೆಲಿಂಗ್‌ನಲ್ಲಿ ಸ್ಥಳ ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವುದನ್ನು ಪ್ರಶ್ನಿಸಿ ಶ್ರೀಶೈಲ (ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು) ಎಂಬವರು ಕೆಎಟಿ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೆಎಟಿ ಮಧ್ಯಂತರ ಆದೇಶ ನೀಡಿದ್ದು, ಅಂತಿಮ ತೀರ್ಪು ಬರುವವರೆಗೂ ಪ್ರಾಥಮಿಕ ಶಾಲಾ ಸಹಶಿಕ್ಷಕರ ವರ್ಗಾವಣೆಗೆ ಕೌನ್ಸೆಲಿಂಗ್ ನಡೆಸದಂತೆ ಆದೇಶಿಸಿದೆ. ವರ್ಗಾವಣೆ ಪ್ರಕ್ರಿಯೆಯನ್ನೇ ರದ್ದುಪಡಿಸಬೇಕು ಎಂದು ಶ್ರೀಶೈಲ ಅವರು ಮನವಿ ಮಾಡಿದ್ದಾರೆ.
ವರ್ಗಾವಣೆ ಅಧಿಸೂಚನೆ ಹೊರಡಿಸಿದ್ದ 2020 ನ. 11ರ ಪ್ರಕಾರ ಮೊದಲ ಹಂತದ ವರ್ಗಾವಣೆ ಪೂರ್ಣಗೊಂಡಿದೆ. 2021 ಜೂನ್ 30ರ ಅಧಿಸೂಚನೆಯಂತೆ ಎರಡನೇ ಹಂತದ ವರ್ಗಾವಣೆ ನಡೆಯಬೇಕಿತ್ತು. ಈಗಾಗಲೇ ಘಟಕದ ಒಳಗೆ ಮತ್ತು ವಿಭಾಗದ ಪ್ರಾಥಮಿಕ ಸಹ ಶಿಕ್ಷಕರ ವರ್ಗಾವಣೆ ಪೂರ್ಣಗೊಂಡಿದೆ. ಅಲ್ಲದೆ, ಈಗಾಗಲೇ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆಯು ಶೇ 90 ಮುಕ್ತಾಯವಾಗಿದ್ದು, ಇಡೀ ಪ್ರಕ್ರಿಯೆ ಕೊನೆ ಹಂತದಲ್ಲಿದೆ. ಈ ತಡೆಯಾಜ್ಞೆಯನ್ನು ಆದಷ್ಟು ಬೇಗ ತೆರವುಗೊಳಿಸಿ, ಕೌನ್ಸೆಲಿಂಗ್ ನಡೆಸಿ ಉಳಿದ ಶಿಕ್ಷಕರಿಗೆ ಸ್ಥಳ ಆಯ್ಕೆಗೆ ಅವಕಾಶ ಮಾಡಿಕೊಡಬೇಕು ಎಂದು ಪ್ರಾಥಮಿಕ ಶಾಲಾ ಸಹ ಶಿಕ್ಷಕರು ಆಗ್ರಹಿಸಿದ್ದಾರೆ.
ಅಂತರ್ ಘಟಕ ವಿಭಾಗದ ಹೊರಗಿನ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಇದೇ 28ರಂದು ವರ್ಚುವಲ್ ಮೂಲಕ ಆಯಾ ಜಿಲ್ಲಾ ಉಪನಿರ್ದೇಶಕರ ಕಚೇರಿಗಳಲ್ಲಿ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿತ್ತು. ವರ್ಗಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ್ದರೂ ಎರಡು ವರ್ಷಗಳಿಂದ ಈ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ವರ್ಗಾವಣೆ ಪ್ರಕ್ರಿಯೆಯನ್ನು ಇಲಾಖೆ ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದೂ ಒತ್ತಾಯಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.