ADVERTISEMENT

ಜನವರಿಯಲ್ಲೇ ಶಿಕ್ಷಕರ ವರ್ಗಾವಣೆ: ಶೀಘ್ರ ವೇಳಾಪಟ್ಟಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2022, 22:00 IST
Last Updated 24 ಡಿಸೆಂಬರ್ 2022, 22:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆಯ ತಿದ್ದುಪಡಿ
ಯನ್ನು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಸಮ್ಮತಿಸಿದ್ದು, ಜನವರಿ (2023) ಅಂತ್ಯದ ಒಳಗೆ ವರ್ಗಾವಣೆ ಪ್ರಕ್ರಿಯೆಗಳು ಆರಂಭವಾಗಲಿವೆ.

ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ–2020ಕ್ಕೆ ತಿದ್ದುಪಡಿ ತಂದು ಶಿಕ್ಷಕ ಸ್ನೇಹಿ ವರ್ಗಾವಣೆಗಾಗಿ ರೂಪಿಸಿದ ಕರಡು ಅಧಿಸೂಚನೆ ಪ್ರಕಟಿಸಲಾಗಿತ್ತು.

2,771 ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. 10ರಿಂದ 20 ವರ್ಷಗಳು ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಪದೋನ್ನತಿ ಪಡೆದ ಪ್ರೌಢಶಾಲಾ ಶಿಕ್ಷಕರಲ್ಲಿ ಬಹುತೇಕರು ಸೇವಾ ಅಂಕಗಳನ್ನು ನೀಡುವಂತೆ ಕೋರಿದ್ದರು. ಆಕ್ಷೇಪಣೆಗಳಿಗೆ ಉತ್ತರ ನೀಡಿದ ನಂತರ ಸಚಿವಾಲಯ ಅಂತಿಮ ಕರಡು ಪ್ರಕಟಿಸಲು ಸಿದ್ಧತೆ ನಡೆಸಿದೆ.

‘ಅಂತಿಮ ಕರಡು ಅಧಿಸೂಚನೆ ಸಿದ್ಧವಾಗಿದೆ. ಅಧಿವೇಶನ ಮುಕ್ತಾಯ ವಾದ ತಕ್ಷಣ ಗೆಜೆಟ್‌ನಲ್ಲಿ ಪ್ರಕಟಿಸಲಾಗುವುದು. ಜನವರಿ ಅಂತ್ಯದ ಒಳಗೆ ವರ್ಗಾ
ವಣೆ ಪ್ರಕ್ರಿಯೆಗಳನ್ನು ಆರಂಭಿ ಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವ ಬಿ.ಸಿ.ನಾಗೇಶ್‌ ಪ್ರತಿಕ್ರಿಯಿಸಿದರು.

ADVERTISEMENT

ಹಿಂದೆ ಪರಸ್ಪರ ವರ್ಗಾವಣೆಗೆ ಒಂದು ಬಾರಿ ಮಾತ್ರ ಅವಕಾಶ ಇತ್ತು. ಇನ್ನು ಮುಂದೆ ಆ ನಿರ್ಬಂಧ ಇರುವುದಿಲ್ಲ. ಕೆಲಸಕ್ಕೆ ಸೇರಿದ ಮೊದಲ ಐದು ವರ್ಷ ಹಾಗೂ ನಿವೃತ್ತಿಗೆ ಮೊದಲಿನ ಐದು ವರ್ಷಗಳು ವರ್ಗಾವಣೆಗೆ ಅವಕಾಶ ಇರುವುದಿಲ್ಲ. ಆದರೆ, ಒಮ್ಮೆ ವರ್ಗಾವಣೆಯಾದ ಬಳಿಕ ಮತ್ತೆ ಮೂರು ವರ್ಷ ಅರ್ಜಿ ಸಲ್ಲಿಸುವಂತಿಲ್ಲ. ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳು (371 ಜೆ ಅನ್ವಯ), ಮಲೆನಾಡು ವಲಯ ಹಾಗೂ ನಂಜುಂಡಪ್ಪ ವರದಿಯ ಅನ್ವಯ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶ ಎಂದು ಗುರುತಿಸಲಾಗಿರುವ ತಾಲ್ಲೂಕುಗಳಿಗೆ ಹೋಗಬಯಸುವವರಿಗೆ ವಿಶೇಷ ಆದ್ಯತೆ ಸಿಗಲಿದೆ.

ರಾಜ್ಯದಲ್ಲಿ 47,516 ಸರ್ಕಾರಿ ಶಾಲೆಗಳಿದ್ದು, 1.77 ಲಕ್ಷ ಶಿಕ್ಷಕರು ಇದ್ದಾರೆ. ಸಾರ್ವತ್ರಿಕ ವರ್ಗಾವಣೆ ವೇಳೆ ಒಟ್ಟು ವೃಂದ ಬಲದ ಶೇ 11ರಷ್ಟು ಮಿತಿಯ ಒಳಗೆ ಮಾತ್ರ ವರ್ಗಾವಣೆ ಮಾಡಲು ಅವಕಾಶ ಇರುತ್ತದೆ. ವಿಶೇಷ ಆದ್ಯತೆಯಡಿ ವರ್ಗಾವಣೆ ಬಯಸುವವರಿಗೆ ಈ ನಿಯಮ ಅನ್ವಯವಾಗದು. ಉಳಿದೆಲ್ಲ ನಿಯಮಗಳು ಮುಂದುವರಿಯಲಿವೆ. ಯಾವುದೇ ಒಂದು ಘಟಕ ಹಾಗೂ ವೃಂದದಲ್ಲಿ ಕನಿಷ್ಠ 10 ವರ್ಷ ಅಥವಾ ಎಲ್ಲ ವೃಂದಗಳೂ ಸೇರಿ 15 ವರ್ಷ ಕೆಲಸ ಮಾಡಿದ ಶಿಕ್ಷಕರನ್ನು ಶೇ 25ರಷ್ಟು ಮಿತಿಯ ಒಳಗೆ ಖಾಲಿ ಹುದ್ದೆಗಳಿರುವ ತಾಲ್ಲೂಕಿಗೆ ವರ್ಗಾವಣೆ ಮಾಡಲು ಅವಕಾಶ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.