ADVERTISEMENT

ಇದೇ ತಿಂಗಳಲ್ಲಿ ಶಿಕ್ಷಕರ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 16:58 IST
Last Updated 31 ಜುಲೈ 2020, 16:58 IST
ಸುರೇಶ್‌ಕುಮಾರ್
ಸುರೇಶ್‌ಕುಮಾರ್   

ಬೆಂಗಳೂರು: ಶಿಕ್ಷಣ ಮತ್ತು ಶಿಕ್ಷಕ ಸ್ನೇಹಿಯಾದ ವರ್ಗಾವಣೆ ನೀತಿಯನ್ನು ಆಗಸ್ಟ್‌ನಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್‌ ತಿಳಿಸಿದ್ದಾರೆ.

‘ಈ ಕುರಿತು ಅಧಿಕಾರಿಗಳ ಸಭೆಯನ್ನುಶುಕ್ರವಾರ ನಡೆಸಿದ್ದು, ಕೂಡಲೇ ವರ್ಗಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲು ಸೂಚಿಸಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

‘ಕಳೆದ ಬಾರಿ ಕಡ್ಡಾಯ ವರ್ಗಾವಣೆಯಿಂದ ತೊಂದರೆಗೀಡಾಗಿದ್ದ ಶಿಕ್ಷಕರಿಗೆ ಈ ಬಾರಿಯ ವರ್ಗಾವಣೆಯಲ್ಲಿ ಮೊದಲ ಆದ್ಯತೆ ನೀಡಲಾಗುವುದು’ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

ವರ್ಗಾವಣೆಗೆ ಸಂಬಂಧಿಸಿದಂತೆ ರೂಪಿಸಿದ್ದ ಕರಡು ನಿಯಮಗಳ ಕುರಿತು ಇಲಾಖೆಯು ಆಕ್ಷೇಪಣೆಗಳನ್ನು ಸಲ್ಲಿಸಿತ್ತು. ಸುಮಾರು 2,500 ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಇವುಗಳ ಪೈಕಿ ಕೆಲವು ಆಕ್ಷೇಪಣೆಗಳನ್ನು ಪರಿಗಣಿಸಿ, ಜುಲೈ 23ರಂದು ಅಂತಿಮ ನಿಯಮಗಳನ್ನು ಪ್ರಕಟಿಸಲಾ‌ಗಿದೆ.

ಪರಿಷ್ಕೃತ ನಿಯಮದ ಅನುಸಾರ, ಶೇ 25ಕ್ಕಿಂತ ಹೆಚ್ಚಿನ ಖಾಲಿ ಹುದ್ದೆಗಳನ್ನು ಹೊಂದಿರುವ ತಾಲ್ಲೂಕಿನಲ್ಲಿ ವರ್ಗಾವಣೆಗೆ ಅವಕಾಶವಿಲ್ಲ. 50 ವರ್ಷ ಮೇಲ್ಪಟ್ಟ ಶಿಕ್ಷಕಿಯರು ಹಾಗೂ 55 ವರ್ಷ ಮೇಲ್ಪಟ್ಟ ಶಿಕ್ಷಕರಿಗೂ ವರ್ಗಾವಣೆಗೆ ಅವಕಾಶವಿಲ್ಲ.ಪತಿ–ಪತ್ನಿ ಪ್ರಕರಣಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅಥವಾ ಅನುದಾನಿತ ಸಂಸ್ಥೆಯ ನೌಕರರನ್ನು ವಿವಾಹವಾಗಿರುವ ಶಿಕ್ಷಕರು, ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಶಿಕ್ಷಕ ಅಥವಾ ಪತಿ, ಪತ್ನಿ ಅಥವಾ ಮಕ್ಕಳು ಶೇ 40ಕ್ಕಿಂತ ಹೆಚ್ಚಿನ ಅಂಗವೈಕಲ್ಯ ಹೊಂದಿರುವ ಶಿಕ್ಷಕರಿಗೆ ಈ ನಿಯಮಗಳಿಂದ ವಿನಾಯಿತಿ ನೀಡಲಾಗಿದೆ.

ಅದೇ ರೀತಿ, ಪರಸ್ಪರ ವರ್ಗಾವಣೆಯಲ್ಲಿ ಈವರೆಗೆ ಇದ್ದ ಮೂರು ವರ್ಷಗಳ ಅವಧಿಯನ್ನು ಈ ಬಾರಿ ಕನಿಷ್ಠ 7 ವರ್ಷಗಳಿಗೆ ಹೆಚ್ಚಿಸಲಾಗಿದೆ. ಸಾಮಾನ್ಯ ವರ್ಗಾವಣೆ ಮುಕ್ತಾಯಗೊಂಡ ನಂತರ, ಕೌನ್ಸೆಲಿಂಗ್‌ ಮೂಲಕ ಪರಸ್ಪರ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.