ADVERTISEMENT

ವೀರ ಯೋಧನಿಗೆ ಅಶ್ರುತರ್ಪಣ

ಜಮ್ಮು ಕಾಶ್ಮೀರದಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಗುರು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2019, 11:36 IST
Last Updated 16 ಫೆಬ್ರುವರಿ 2019, 11:36 IST
   

ರಾಮನಗರ: ಜಮ್ಮು ಕಾಶ್ಮೀರದಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಗುರು ಅವರಿಗೆ ಜಿಲ್ಲೆಯ ಜನರು ಶನಿವಾರ ಅಶ್ರು ತರ್ಪಣ ಸಲ್ಲಿಸಿದರು.

ಗುರು ಅವರ ಶವವನ್ನು ಮಿಲಿಟರಿ ವಾಹನದಲ್ಲಿ ಶನಿವಾರ ಮಧ್ಯಾಹ್ನ ಬೆಂಗಳೂರು- ಮೈಸೂರು ಹೆದ್ದಾರಿ ಮಾರ್ಗವಾಗಿ ಮದ್ದೂರಿಗೆ‌ ಕೊಂಡೊಯ್ಯಲಾಯಿತು. ಈ ಸಂದರ್ಭ ಜನರು ಅಲ್ಲಲ್ಲಿ ಸಾಲಾಗಿ ನಿಂತು ಅಗಲಿದ ಯೋಧನಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಮಧ್ಯಾಹ್ನ 2.30ರ ಸುಮಾರಿಗೆ ಯೋಧನ ಶವ ಹೊತ್ತ ವಾಹನವು ಕೆಂಗೇರಿ ಮೂಲಕ ಕುಂಬಳಗೂಡು ವೃತ್ತಕ್ಕೆ ಸಾಗಿಬಂದಿತು. ಅಲ್ಲಿ ನೂರಾರು ಮಂದಿ ಪುಷ್ಪ‌ ಸಮರ್ಪಿಸಿ ಬೀಳ್ಕೊಟ್ಟರು. ಅಲ್ಲಿಂದ ವಂಡರ್ ಲಾ ಗೇಟ್ ಬಳಿಯೂ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು.

ADVERTISEMENT

ಬಿಡದಿಯ ಬಿಜಿಎಸ್ವೃತ್ತದಲ್ಲಿಯೂ ನೂರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರು.

ಐಜೂರು ವೃತ್ತದಲ್ಲಿ‌ ಜನಸಾಗರ:ಯೋಧನ ಶವವನ್ನು ರಸ್ತೆ ಮೂಲಕ ಕೊಂಡೊಯ್ಯುವ ಸುದ್ದಿ‌ ತಿಳಿಯುತ್ತಲೇ ರಾಮನಗರದ ಐಜೂರು ವೃತ್ತದಲ್ಲಿ ಮಧ್ಯಾಹ್ನದಿಂದಲೇ ಜನರು ಜಮಾಯಿಸಿದ್ದರು. ಮಿಲಿಟರಿ ವಾಹನ ಬರುತ್ತಲೇ ರಸ್ತೆಯ ತುಂಬೆಲ್ಲ ಜನಸಾಗರ ಸೇರಿತು. ರಾಷ್ಟ್ರ ಧ್ವಜ, ನಾಡ ಧ್ವಜಗಳನ್ನು ಬೀಸುತ್ತಾ 'ಗುರು ಚಿರಾಯು' ಎಂದು ಯೋಧನಿಗೆ ಜೈಕಾರ ಹಾಕಿದರು.

ಮಕ್ಕಳು, ಮಹಿಳೆಯರು, ವೃದ್ಧರೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಕೆಲವರು ಮಿಲಿಟರಿ ವಾಹನ ಏರಿ ಶವದ ಪೆಟ್ಟಿಗೆಗೆ ಹಾರ, ಪುಷ್ಪ ಸಮರ್ಪಿಸಿದರು.ಚನ್ನಪಟ್ಟಣದ ಬಸ್ ನಿಲ್ದಾಣ, ಕಾಂಗ್ರೆಸ್ ಕಚೇರಿ ಸಮೀಪವೂ ಜನರು ನಮನ ಸಲ್ಲಿಸಿದರು.

ಶವವನ್ನು ಕೊಂಡೊಯ್ಯುವ ಸಂದರ್ಭ ಹೆದ್ದಾರಿಯಲ್ಲಿ ಇತರೆ ವಾಹನಗಳ ಸಂಚಾರ ಬಂದ್ ಆಗಿತ್ತು. ಜನರು ಸ್ವಯಂಪ್ರೇರಿತರಾಗಿ ದಾರಿ ಬಿಟ್ಟುಕೊಟ್ಟು ಗೌರವ ಸಲ್ಲಿಸಿದರು. ದಾರಿಯುದ್ದಕ್ಕೂ ಪೊಲೀಸರು ಭದ್ರತೆ ಒದಗಿಸಿದ್ದರು. ಆದರೆ ಪ್ರವಾಹದಂತೆ ಬಂದ ಜನರನ್ನು ನಿಯಂತ್ರಿಸುವುದು ಅವರಿಗೂ ಕಷ್ಟವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.