ADVERTISEMENT

‘ಸಾರಥಿ’ಗೆ ತಾಂತ್ರಿಕ ಸಮಸ್ಯೆ: ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2024, 16:30 IST
Last Updated 7 ಫೆಬ್ರುವರಿ 2024, 16:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಸಾರಿಗೆ ಇಲಾಖೆಯ ‘ಸಾರಥಿ’ ವೆಬ್‌ಸೈಟ್‌ನಲ್ಲಿ ಒಂದು ವಾರದಿಂದ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಇದರಿಂದ ಡಿಎಲ್‌, ಎಲ್‌ಎಲ್‌ಆರ್‌ ಪಡೆಯಲು ಸಾರ್ವಜನಿಕರು ಪರದಾಡುವಂತಾಗಿದೆ.

ಸರ್ವರ್‌ ಸಮಸ್ಯೆಯಲ್ಲ, ರಾಷ್ಟ್ರೀಯ ಮಾಹಿತಿ ಕೇಂದ್ರದಿಂದ (ಎನ್‌ಐಸಿ) ಡೇಟಾ ಸರಿಯಾಗಿ ಸಿಗದೇ ಇರುವುದರಿಂದ ದೇಶದಾದ್ಯಂತ ಈ ಸಮಸ್ಯೆ ಉಂಟಾಗಿದೆ ಎಂದು ಸಾರಿಗೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ADVERTISEMENT

ಚಾಲನಾ ಪರವಾನಗಿ (ಡಿಎಲ್‌), ಚಾಲನಾ ಕಲಿಕಾ ನೋಂದಣಿ (ಎಲ್‌ಎಲ್‌ಆರ್‌), ನಕಲು ಪ್ರತಿ ಪಡೆಯಲು, ಡಿಎಲ್‌ ನವೀಕರಣ, ತಿದ್ದುಪಡಿ ಮಾಡಲು ಸಾರ್ವಜನಿಕರು ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಪ್ರತಿದಿನ ಬಂದು ವಾಪಸ್‌ ಹೋಗುತ್ತಿದ್ದಾರೆ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಏನು ಮಾಡಲಾರದೇ ಕೈಚೆಲ್ಲುತ್ತಿದ್ದಾರೆ. ಮೇಲಧಿಕಾರಿಗಳತ್ತ ಕೈ ತೋರಿಸುತ್ತಿದ್ದಾರೆ.

‘ಹಿಂದೆ ಪ್ರಾದೇಶಿಕ ಸಾರಿಗೆ ಕಚೇರಿ ಮಟ್ಟದಲ್ಲಿಯೇ ಇವೆಲ್ಲ ಪ್ರಕ್ರಿಯೆ ನಡೆಯುತ್ತಿತ್ತು. ಆಗ ಸಮಸ್ಯೆ ಆಗುತ್ತಿರಲಿಲ್ಲ. ಒಂದು ಆರ್‌ಟಿಒ ದಲ್ಲಿ ಸಮಸ್ಯೆಯಾದರೂ ಉಳಿದ ಕಡೆಗಳಲ್ಲಿ ತೊಂದರೆಯಾಗುತ್ತಿರಲಿಲ್ಲ. ಈಗ ಕೇಂದ್ರೀಕೃತ ವ್ಯವಸ್ಥೆಯನ್ನು ಜಾರಿ ಮಾಡಿದ್ದಾರೆ. ಸರ್ವರ್‌ ಸಮಸ್ಯೆಯಾದರೆ ದೇಶದೆಲ್ಲೆಡೆ ಅದು ಪರಿಣಾಮ ಬೀರುತ್ತಿದೆ. ಈಗ ಅಗತ್ಯಕ್ಕೆ ಅನುಗುಣವಾಗಿ ಡೇಟಾ ಒದಗಿಸದಿರುವುದರಿಂದ ಒಂದು ವಾರದಿಂದ ಯಾವುದೇ ಕೆಲಸಗಳಾಗುತ್ತಿಲ್ಲ. ಜನರು ನಮಗೆ ಶಾಪ ಹಾಕಿ ಹೋಗುತ್ತಿದ್ದಾರೆ’ ಎಂದು ಆರ್‌ಟಿಒ ಒಬ್ಬರು ಮಾಹಿತಿ ನೀಡಿದರು.

‘ಎಲ್ಲವನ್ನೂ ದೆಹಲಿಯಲ್ಲಿ ಕುಳಿತು ನಿಯಂತ್ರಿಸುವ ವ್ಯವಸ್ಥೆ ಎಲ್ಲರಿಗೂ ತೊಂದರೆ ಉಂಟು ಮಾಡುತ್ತಿದೆ. ಅದರ ಬದಲು ವಿಕೇಂದ್ರೀಕರಣ ಮಾಡಬೇಕು’ ಎಂದು ಆಗ್ರಹಿಸಿದರು.

‘ನಮ್ಮ ಹಂತದಲ್ಲಿ ಸಮಸ್ಯೆಯಾಗಿಲ್ಲ. ಎನ್‌ಐಸಿ ಎಂಜಿನಿಯರ್‌ಗಳು ಸರಿಪಡಿಸಬೇಕು. ಎನ್‌ಐಸಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ. ಸರಿಪಡಿಸುವ ಭರವಸೆ ನೀಡಿದ್ದಾರೆ’ ಎಂದು ಹೆಚ್ಚುವರಿ ಸಾರಿಗೆ ಆಯುಕ್ತ ಜ್ಞಾನೇಂದ್ರ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸಾರ್ವಜನಿಕರೇ ಆನ್‌ಲೈನ್‌ ಮೂಲಕ ಮಾಹಿತಿ ಅಪ್‌ಲೋಡ್‌ ಮಾಡುವ ‘ಸಿಟಿಜನ್‌ ಪೋರ್ಟಲ್’ ಕೂಡ ತೆರೆಯುತ್ತಿಲ್ಲ. ರಾತ್ರಿ ವೇಳೆಯಷ್ಟೇ ಸರ್ವರ್‌ ಸಕ್ರಿಯವಾಗಿರುತ್ತದೆ. ಹೀಗಾಗಿ, ಈ ಪೋರ್ಟಲ್‌ ಕೂಡ ಬಹುತೇಕರಿಗೆ ಅನುಕೂಲಕರವಾಗಿಲ್ಲ.

ದೀಪಾವಳಿ ಸಂದರ್ಭದಲ್ಲಿ ಇದೇ ರೀತಿ ನೋಂದಣಿ ಪೋರ್ಟಲ್‌ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ನೂರಾರು ಗ್ರಾಹಕರು ವಾಹನ ಖರೀದಿಯನ್ನೇ ರದ್ದು ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.