ADVERTISEMENT

ಪಡಿತರ ಮರು ನೋಂದಣಿಗೆ ಹಲವು ತಾಪತ್ರಯ

‘ಇ–ಕೆವೈಸಿ’ಗಾಗಿ ಕುಟುಂಬ ಸಮೇತ ಬರಬೇಕು

ಎಂ.ಮಹೇಶ
Published 16 ಡಿಸೆಂಬರ್ 2019, 19:30 IST
Last Updated 16 ಡಿಸೆಂಬರ್ 2019, 19:30 IST
   

ಬೆಳಗಾವಿ: ಜಿಲ್ಲೆಯಲ್ಲಿ ಪಡಿತರ ಚೀಟಿದಾರರು ಬೆರಳಚ್ಚು ನೀಡುವ ಮೂಲಕ ತಮ್ಮ ‘ಗುರುತಿನ ಮರುನೋಂದಣಿ’ (ಇ–ಕೆವೈಸಿ) ಮಾಡಿಸಲು ಪರದಾಡುತ್ತಿದ್ದಾರೆ. ಪ್ರಕ್ರಿಯೆ ಸರಾಗವಾಗಿ ನಡೆಸಲು ಅಗತ್ಯವಾದ ವ್ಯವಸ್ಥೆ ಇಲ್ಲದಿರುವುದು ಹಾಗೂ ಸಮರ್ಪಕವಾಗಿ ಸರ್ವರ್‌ ಲಭ್ಯವಾಗದೇ ಇರುವುದು ಇದಕ್ಕೆ ಕಾರಣವಾಗಿದೆ. ಪ್ರಕ್ರಿಯೆಯನ್ನು ಮುಂದಿನ ತಿಂಗಳಿಗೆ ಮುಂದೂಡಲಾಗಿದೆ.

‘ಒಂದು ದೇಶ ಒಂದು ಪಡಿತರ’ ಯೋಜನೆಯ ಭಾಗವಾಗಿ, ಎಲ್ಲ ಪಡಿತರ ಚೀಟಿದಾರರ ಮಾಹಿತಿ ಆನ್‌ಲೈನ್‌ನಲ್ಲಿ ಸಿಗುವಂತಾಗಲು ಹಾಗೂ ರಾಜ್ಯದ ಯಾವುದೇ ಸ್ಥಳದಲ್ಲಿ ಬೇಕಾದರೂ ಪಡಿತರ ಪಡೆಯಲು ಅನುಕೂಲ ಕಲ್ಪಿಸಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ‘ಇ– ಕೆವೈಸಿ’ ಸಂಗ್ರಹ ಆರಂಭಿಸಿದೆ. ಪಡಿತರ ಚೀಟಿ ಹೊಂದಿರುವ ಕುಟುಂಬದ ಎಲ್ಲ ಸದಸ್ಯರೂ ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಗೆ ಬಂದು ಬೆರಳಚ್ಚು ನೀಡಬೇಕು ಎಂದು ತಿಳಿಸಲಾಗಿದೆ. 10 ದಿನಗಳಲ್ಲಿ ಶೇ 38ರಷ್ಟು ಮಾತ್ರವೇ ಇ–ಕೆವೈಸಿ ಆಗಿದೆ. ಇನ್ನೂ ಶೇ 62ರಷ್ಟು ಆಗಬೇಕಾಗಿದೆ. ಈಗ ಪ್ರಕ್ರಿಯೆ ಸ್ಥಗಿತಗೊಂಡಿರುವುದರಿಂದ ಚೀಟಿದಾರರು ಆತಂಕಕ್ಕೆ ಒಳಗಾಗಿದ್ದಾರೆ.

ಲಕ್ಷಾಂತರ ಮಂದಿ ಬಾಕಿ:

ADVERTISEMENT

ಜಿಲ್ಲೆಯಲ್ಲಿ ಅಂತ್ಯೋದಯ, ಎಪಿಎಲ್‌, ಬಿಪಿಎಲ್‌ ಸೇರಿ ಒಟ್ಟು 14.12 ಲಕ್ಷ ಪಡಿತರ ಚೀಟಿದಾರರಿದ್ದಾರೆ. ಕುಟುಂಬದವರೆಲ್ಲರೂ ಸೇರಿದರೆ ಲಕ್ಷಾಂತರ ಮಂದಿಯ ಇ–ಕೆವೈಸಿಯನ್ನು ಸಂಗ್ರಹಿಸುವ ಕಾರ್ಯ ನಡೆಯಬೇಕಾಗಿದೆ. ಆದರೆ, ಇದಕ್ಕೆ ತಕ್ಕಂತೆ ಸರ್ವರ್ ಸ್ಪಂದಿಸುತ್ತಿಲ್ಲ. ಪರಿಣಾಮ, ಮರುನೋಂದಣಿ ಮಾಡಿಸಬೇಕಾದವರ ಬಾಕಿ ಬೆಟ್ಟದಷ್ಟಿದೆ. ಮರುನೋಂದಣಿ ಮಾಡಿಸದಿದ್ದರೆ ಪಡಿತರ ಸಿಗುವುದಿಲ್ಲವೇನೋ ಎನ್ನುವ ಆತಂಕ ಚೀಟಿದಾರರದಾಗಿದೆ. ಈ ವಿಷಯವಾಗಿ ಅಂಗಡಿಯವರು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆಯುವುದು ಸಾಮಾನ್ಯವಾಗಿದೆ!

ಇ–ಕೆವೈಸಿ ಸಂಗ್ರಹಿಸುವುದನ್ನು ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲೂ ಡಿ.1ರಿಂದ ಪುನರಾರಂಭಿಸಲಾಗಿತ್ತು. ಡಿ.10ರವರೆಗೆ ಬೆಳಿಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 8ವರೆಗೆ ಸಂಗ್ರಹಿಸಬೇಕು ಎಂದು ಅಂಗಡಿಕಾರರಿಗೆ ತಿಳಿಸಲಾಗಿತ್ತು. ಈ ಅವಧಿಯಲ್ಲಿ ಬಹಳ ಮಂದಿಯ ಮರು ನೋಂದಣಿ ಸಾಧ್ಯವಾಗಿಲ್ಲ. ಮತ್ತೆ ಜ.1ರಿಂದ ಜ.10ರವರೆಗೆ ಬೆಳಿಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 8ರವರೆಗೆ ಸಂಗ್ರಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

10ನೇ ತಾರೀಖಿನಿಂದ ತಿಂಗಳ ಕೊನೆವರೆಗೆ ಪಡಿತರ ವಿತರಿಸಬೇಕಾಗುತ್ತದೆ. ಹೀಗಾಗಿ, ಪ್ರತಿ ತಿಂಗಳೂ 10ಕ್ಕೆ ಇ–ಕೆವೈಸಿ ಸಂಗ್ರಹಿಸುವುದನ್ನು ನಿಲ್ಲಿಸಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಬಹಳ ತೊಂದರೆ:

‘ಇ–ಕೆವೈಸಿ ಪಡೆಯುವ ಪ್ರಕ್ರಿಯೆ ಸರಾಗಿವಾಗಿ ನಡೆಯದಿರುವುದರಿಂದ ಜನರೊಂದಿಗೆ ಅಂಗಡಿಕಾರರಿಗೂ ಬಹಳ ತೊಂದರೆಯಾಗಿದೆ. ಡಿ.10ರಿಂದ ಪಡಿತರ ವಿತರಣೆ ಆರಂಭಿಸಬೇಕಿತ್ತು. ಆದರೆ, ಲಾಗಿನ್‌ನಲ್ಲಿ ತಾಂತ್ರಿಕ ಸಮಸ್ಯೆ ಇದ್ದಿದ್ದರಿಂದ ಹಾಗೂ ಇ–ಕೆವೈಸಿಯ ಲಾಗಿನ್‌ ಆನ್‌ ಇದ್ದಿದ್ದರಿಂದ ಪಡಿತರ ವಿತರಣೆ 3 ದಿನಗಳು ವಿಳಂಬವಾಗಿದೆ. ಸರ್ವರ್ ಕೂಡ ನಿಧಾನ ಇರುವುದರಿಂದ ತಾಪತ್ರಯ ಆಗುತ್ತಿದೆ’ ಎಂದು ರಾಜ್ಯ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ರಾಜಶೇಖರ ತಳವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲಸ ಬಿಟ್ಟು, ಕುಟುಂಬ ಸಮೇತ ಬೆಳಿಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಲ್ಲುವ ಜನರು, ‘ಸರ್ವರ್‌ ಸ್ಥಗಿತಗೊಂಡಿದ್ದು’ ಗೊತ್ತಾದರೆ ಅಂಗಡಿಯವರ ಮೇಲೆ ಮುಗಿ ಬೀಳುತ್ತಾರೆ. ಶಾಲೆಗೆ ರಜೆ ಹಾಕಿಸಿ ಮಕ್ಕಳನ್ನು ಕರೆದುಕೊಂಡು ಬಂದಿರುತ್ತಾರೆ; ಕೆಲಸ ಆಗಲಿಲ್ಲ ಎಂದರೆ ಸಹಜವಾಗಿಯೇ ಕೂಗಾಡುತ್ತಾರೆ. ಕೆಲವು ಕಡೆ ಹಲ್ಲೆ ನಡೆಸಿದ ಪ್ರಸಂಗವೂ ವರದಿಯಾಗಿವೆ’ ಎಂದು ಅವರು ತಿಳಿಸಿದರು.

‘ತಾಂತ್ರಿಕ ತೊಂದರೆಗಳನ್ನು ನಿವಾರಿಸುವ ಕೆಲಸವನ್ನು ಇಲಾಖೆಯ ಕೇಂದ್ರ ಕಚೇರಿ ಮಟ್ಟದಲ್ಲಿ ನಿರ್ವಹಿಸಲಾಗುತ್ತಿದೆ. ಪಡಿತರ ಚೀಟಿಗಳಲ್ಲಿ ಹೆಸರಿರುವ ಪ್ರತಿಯೊಬ್ಬರ ಮರುನೋಂದಣಿ ಕಡ್ಡಾಯವಾಗಿದೆ. ಆದರೆ, ಇ–ಕೆವೈಸಿ ಆಗಿಲ್ಲವೆಂದು ಪಡಿತರ ವಿತರಣೆ ನಿಲ್ಲಿಸಲಾಗುವುದಿಲ್ಲ. ಎಲ್ಲರ ಇ–ಕೆವೈಸಿ ಸಂಗ್ರಹಕ್ಕೆ ಕಾಲಾವಕಾಶ ಕೊಡಲಾಗುತ್ತದೆ. ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.