ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ, ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥರೂ ಆಗಿರುವ ತೇಜಸ್ವಿನಿ ಅನಂತಕುಮಾರ್ ಅವರು ಕುಮಾರಕೃಪಾ ಅತಿಥಿ ಗೃಹದಲ್ಲಿ ಸೋಮವಾರ ಭೇಟಿ ಮಾಡಿ ಕೆಲಹೊತ್ತು ಚರ್ಚೆ ನಡೆಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ‘ನಾವಿಬ್ಬರೂ ಯಾವುದೇ ರಾಜಕೀಯ ವಿಚಾರಗಳನ್ನು ಚರ್ಚೆ ಮಾಡಿಲ್ಲ’ ಎಂದರು.
‘ರಾಜಕೀಯ ವಿಚಾರ ಮಾತನಾಡಿದ್ದೇವೆ ಎಂದು ಯಾರಾದರೂ ಹೇಳಿದ್ದರೆ ಅದು ಸುಳ್ಳು. ತೇಜಸ್ವಿನಿ ಅವರು ಅನಂತ್‌ಕುಮಾರ್ ಅವರ ಜನ್ಮದಿನ, ಅನ್ನಭಾಗ್ಯ ವಿಚಾರಗಳ ಬಗ್ಗೆ ನನ್ನ ಜತೆ ಚರ್ಚೆ ಮಾಡಿದರು. ರಾಜಕೀಯ ವಿಚಾರಗಳನ್ನು ಚರ್ಚೆ ಮಾಡಲಾಯಿತು ಎಂಬುದು ಸುಳ್ಳು ಸುದ್ದಿ’ ಎಂದರು.
ಅದಕ್ಕೂ ಮೊದಲು ಡಿ.ಕೆ. ಶಿವಕುಮಾರ್ ಅವರ ‘X’ (ಟ್ವಿಟರ್) ಖಾತೆಯಿಂದ, ಇಬ್ಬರೂ ರಾಜಕೀಯ ಚರ್ಚೆ ನಡೆಸಿದರು ಎಂದು ಟ್ವೀಟ್ ಮಾಡಲಾಗಿತ್ತು. ಅದಕ್ಕೆ ಸ್ಪಷ್ಟನೆ ನೀಡಿದ ಶಿವಕುಮಾರ್, ‘ನನ್ನ ಹೆಸರಲ್ಲಿ ಟ್ವೀಟ್ ಮಾಡಿದ್ದರೆ, ಮಾಡಿದವರನ್ನು ಕೂಡಲೇ ತೆಗೆದುಹಾಕ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.