ಬೆಂಗಳೂರು:ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ತೇಜಸ್ವಿನಿ ಅನಂತಕುಮಾರ್ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಶುಕ್ರವಾರ ಭೇಟಿ ಮಾಡಿದರು.
ನಂತರ ಮಾತನಾಡಿದ ತೇಜಸ್ವಿನಿ, ‘ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚುನಾವಣಾ ಸಿದ್ಧತೆ ಬಗ್ಗೆ ಚರ್ಚಿಸಿ
ದ್ದೇನೆ. ಚುನಾವಣಾ ವಿಷಯವಾಗಿ ಯಡಿಯೂರಪ್ಪ ಅವರ ಮಾರ್ಗದರ್ಶನ ಪಡೆಯಲು ಬಂದಿದ್ದೆ. ಚುನಾವಣಾ ಕಚೇರಿ ಸ್ಥಾಪನೆ ಮತ್ತು ನಾಮಪತ್ರ ಸಲ್ಲಿಕೆ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇನೆ’ ಎಂದರು.
ಮಂಜು ಭೇಟಿ: ಕಾಂಗ್ರೆಸ್ ಮುಖಂಡ ಎ. ಮಂಜು ಕೂಡಾ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಯಡಿಯೂರಪ್ಪ ಅವರ ಜತೆಗೆ ಹಾಸನ ಶಾಸಕ ಪ್ರೀತಂ ಗೌಡ ಹಾಗೂ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಮಾತುಕತೆ ನಡೆಸುತ್ತಿದ್ದ ವೇಳೆ ಮಂಜು ಅವರು ಬಿಎಸ್‌ವೈ ನಿವಾಸಕ್ಕೆ ಬಂದರು. ‘ಬಿಜೆಪಿ ಸೇರ್ಪಡೆಗೆ ಉತ್ಸುಕನಾಗಿದ್ದು, ಬೆಂಬಲಿಗರ ಜತೆಗೆ ಚರ್ಚಿಸಿ ಶೀಘ್ರ ತೀರ್ಮಾನಕ್ಕೆ ಬರುತ್ತೇನೆ’ ಎಂದರು.
‘ನಿವೃತ್ತ ಐಎಎಸ್ ಅಧಿಕಾರಿ ಡಾ. ರಾಮೇಗೌಡ, ನಿವೃತ್ತ ಡಿಸಿಎಫ್ ಲಕ್ಷ್ಮಿನಾರಾಯಣ, ಮುಖಂಡ ಜವರೇಗೌಡ ಪೈಕಿ ಒಬ್ಬರಿಗೆ ಟಿಕೆಟ್ ನೀಡಬೇಕು ಎಂಬ ಅಭಿಪ್ರಾಯ ಪಕ್ಷದ ವಲಯದಲ್ಲಿ ವ್ಯಕ್ತವಾಗಿತ್ತು. ಈಗ ಮಂಜು ಅವರು ಪಕ್ಷಕ್ಕೆ ಬರಲು ಒಪ್ಪಿದ್ದಾರೆ. ನಮ್ಮ ಅಭಿಪ್ರಾಯವನ್ನು ರಾಜ್ಯ ನಾಯಕರಿಗೆ ತಿಳಿಸಿದ್ದೇವೆ. ಗೆಲ್ಲುವ ಅಭ್ಯರ್ಥಿಗೆ ವರಿಷ್ಠರು ಮಣೆ ಹಾಕುತ್ತಾರೆ ಎಂಬ ವಿಶ್ವಾಸ ಇದೆ’ ಎಂದು ಶಾಸಕ ಪ್ರೀತಂ ಗೌಡ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.