ADVERTISEMENT

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ: ತೆಲಂಗಾಣದ ‘ಪ್ರಭಾವಿ’ಗಳ ನಂಟು?

ಹಣ ವರ್ಗಾವಣೆಯಾದ ದಿನವೇ ನಗದು!

ಸುಬ್ರಹ್ಮಣ್ಯ ವಿ.ಎಸ್‌.
Published 1 ಜೂನ್ 2024, 23:17 IST
Last Updated 1 ಜೂನ್ 2024, 23:17 IST
   

ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ರೂಪಾಯಿ ಠೇವಣಿಯ ಅಕ್ರಮ ವರ್ಗಾವಣೆ ಹಗರಣದ ಹಿಂದೆ ತೆಲಂಗಾಣದ ಪ್ರಭಾವಿ ರಾಜಕಾರಣಿಗಳ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅಂತರರಾಜ್ಯ ವಂಚಕರ ತಂಡದ ಕೈವಾಡದ ಶಂಕೆ ಬಲವಾಗಿದೆ.

ನಿಗಮದ ಬ್ಯಾಂಕ್‌ ಖಾತೆಯಿಂದ ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ಆರ್‌ಬಿಎಲ್‌ ಬ್ಯಾಂಕ್‌ನಲ್ಲಿರುವ 18 ಖಾತೆಗಳಿಗೆ ₹ 89.62 ಕೋಟಿ ವರ್ಗಾವಣೆ ಯಾಗಿದೆ. ಅದರಲ್ಲಿ ₹ 30 ಕೋಟಿಗೂ ಹೆಚ್ಚು ಮೊತ್ತ ‘ಪ್ರಭಾವಿ’ಯೊಬ್ಬರ ಆಪ್ತರ ಖಾತೆಗಳಿಗೆ ಹೋಗಿರುವ ಬಗ್ಗೆ ರಾಜ್ಯ ಲೆಕ್ಕಪತ್ರ ಇಲಾಖೆ ಅಧಿಕಾರಿಗಳ ಮೂಲಕ ಆರಂಭಿಕ ಹಂತದಲ್ಲಿ ನಡೆಸಿದ ಅನೌಪಚಾರಿಕ ಪರಿಶೀಲನೆ ವೇಳೆ ಸುಳಿವು ದೊರಕಿದೆ.

ವ್ಯವಸ್ಥಿತ ಸಂಚು ನಡೆಸಿದ್ದ ಈ ತಂಡ ಮೊದಲ ಹಂತದಲ್ಲಿ ಯೂನಿಯನ್‌ ಬ್ಯಾಂಕ್‌ನ ವಸಂತನಗರ ಶಾಖೆಯಲ್ಲಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆ ಯನ್ನು ಎಂ.ಜಿ. ರಸ್ತೆ ಶಾಖೆಗೆ ವರ್ಗಾಯಿಸುವಲ್ಲಿ ಯಶ ಕಂಡಿತ್ತು. ಆ ನಂತರ ಹೈದರಾಬಾದ್‌ನ ನ್ಯೂ ನಲ್ಲಕುಂಟ ಪ್ರದೇಶದ ಸಹಕಾರ ಬ್ಯಾಂಕ್‌ ಒಂದನ್ನು ಹಣ ವರ್ಗಾವಣೆಗೆ ಬಳಸಿ ಕೊಳ್ಳುವ ಪ್ರಯತ್ನ ಮಾಡಿತ್ತು.

ADVERTISEMENT

ಮೊದಲ ಕಂತಿನಲ್ಲಿ ₹ 5 ಕೋಟಿಯನ್ನು ಅಲ್ಲಿಗೆ ವರ್ಗಾವಣೆ ಮಾಡುವಲ್ಲಿ ಯಶಸ್ವಿಯೂ ಆಗಿತ್ತು. ನಂತರದಲ್ಲಿ ‘ಪ್ರಭಾವಿ’ಗಳ ರಕ್ಷಣೆಯ ಧೈರ್ಯದಲ್ಲಿ ಕಾರ್ಯತಂತ್ರ ಬದಲಿಸಿ ಆರ್‌ಬಿಎಲ್‌ ಬ್ಯಾಂಕ್‌ನ ಬಂಜಾರಾ ಹಿಲ್ಸ್‌ ಶಾಖೆಯ ದಾರಿ ಹಿಡಿದಿತ್ತು. ಅಲ್ಲಿ ಮೊದಲ ಖಾತೆ ತೆರೆದ ತಿಂಗಳೊಳಗೆ ₹ 89.62 ಕೋಟಿಯನ್ನು ನಿಗಮದ ಖಾತೆಯಿಂದ ಲಪಟಾಯಿಸಿದೆ.

‘ನಿಗಮದ ಅಧೀಕ್ಷಕ ಪಿ. ಚಂದ್ರಶೇಖರನ್‌ ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಎಚ್ಚೆತ್ತ ಹಿರಿಯ ಅಧಿಕಾರಿಗಳು, ಹಣಕಾಸು ಇಲಾಖೆಯ ಲೆಕ್ಕಾಧಿಕಾರಿ ಗಳ ತಂಡವೊಂದರ ಮೂಲಕ ಅನೌಪಚಾರಿಕ ಪರಿಶೀಲನೆ ನಡೆಸಿದ್ದಾರೆ. ನಿಗಮದ ಹಣ ವರ್ಗಾವಣೆಯಾಗಿ ರುವ ಆರ್‌ಬಿಎಲ್‌ ಬ್ಯಾಂಕ್‌ನ ಬಂಜಾರಾ ಹಿಲ್ಸ್‌ ಶಾಖೆಯಲ್ಲಿನ ಕೆಲವು ಖಾತೆಗಳು ಮತ್ತು ಅಲ್ಲಿಂದ ಹಣ ವರ್ಗಾಯಿಸಿ ಕೊಂಡಿರುವ ಕೆಲವು ಖಾತೆಗಳಿಗೆ ರಾಜಕೀಯ ನಂಟು ಇರುವ ಮಾಹಿತಿ ಪರಿಶೀಲನೆ ವೇಳೆ ಲಭಿಸಿತ್ತು’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ನಿಗಮದ ಹೆಸರಲ್ಲಿ ಸಾಲ ಎತ್ತುವಳಿ!

ಯೂನಿಯನ್‌ ಬ್ಯಾಂಕ್‌ನ ಎಂ.ಜಿ. ರಸ್ತೆ ಶಾಖೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹೆಸರಿನಲ್ಲಿ ಮಾರ್ಚ್‌ 30ರಂದು ₹ 50 ಕೋಟಿ ನಿಗದಿತ ಠೇವಣಿ ಇರಿಸಲಾಗಿದೆ. ಅದನ್ನೇ ಖಾತರಿಯಾಗಿ ನೀಡಿ ಅದೇ ದಿನ ನಿಗಮದ ಹೆಸರಿನಲ್ಲಿ ₹ 45 ಕೋಟಿ ಸಾಲ ಪಡೆಯಲಾಗಿದೆ!

ಮಾರ್ಚ್‌ 30ರಂದೇ ನಿಗಮದ ಆಡಳಿತ ಮಂಡಳಿಯು ನಿಗದಿತ ಠೇವಣಿ ಇರಿಸಿ ಸಾಲ ಪಡೆಯುವ ನಿರ್ಣಯ ಕೈಗೊಂಡಿತ್ತು ಎಂಬ ನಡಾವಳಿಯನ್ನು ಸೃಜಿಸಲಾಗಿದೆ. ಫೆಬ್ರುವರಿ 26ರಂದು ಖರೀದಿಸಿದ್ದ ಮುದ್ರಾಂಕ ಪತ್ರಗಳನ್ನು ಸಾಲ ಮಂಜೂರಾತಿಯ ಒಪ್ಪಂದ ಪತ್ರಗಳಿಗೆ ಬಳಸಿರುವುದು ಪತ್ತೆಯಾಗಿದೆ.

₹ 50 ಕೋಟಿ ನಿಗದಿತ ಠೇವಣಿಯ ಆಧಾರದಲ್ಲಿ ನಿಗಮಕ್ಕೆ ಮಂಜೂರು ಮಾಡಿದ್ದ ₹ 45 ಕೋಟಿ ಸಾಲದ ಮೊತ್ತದಲ್ಲಿ ಮಾರ್ಚ್‌ 30ರಂದೇ ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನ ಆರ್‌ಬಿಎಲ್‌ ಬ್ಯಾಂಕ್‌ ಶಾಖೆಯ ಎಂಟು ಖಾತೆಗಳಿಗೆ ₹ 40.10 ಕೋಟಿ ವರ್ಗಾವಣೆ ಮಾಡಿರುವುದು ಹಗರಣದ ಸೂತ್ರಧಾರರ ವೇಗಕ್ಕೆ ಸಾಕ್ಷಿಯಂತಿದೆ.

ಬೇನಾಮಿ ಖಾತೆಗಳೇ ಹೆಚ್ಚು:

ವಿವಿಧ ಕಂಪನಿಗಳ ಹೆಸರಿನಲ್ಲಿ ಆರ್‌ಬಿಎಲ್‌ ಬ್ಯಾಂಕ್‌ನಲ್ಲಿ 18 ಖಾತೆಗಳನ್ನು ತೆರೆಯಲಾಗಿತ್ತು. ಅವುಗಳಿಗೆ ಮಾರ್ಚ್‌ 5ರಿಂದ ಮಾರ್ಚ್‌ 30ರ ಅವಧಿಯಲ್ಲಿ ಯೂನಿಯನ್‌ ಬ್ಯಾಂಕ್‌ನಲ್ಲಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆಯಿಂದ ಹಣ ವರ್ಗಾಯಿಸಲಾಗಿದೆ. ಹಣ ವರ್ಗಾವಣೆಯಾಗಿರುವ ಹೆಚ್ಚಿನ ಖಾತೆಗಳು ಬೆಂಗಳೂರಿನ ವಿವಿಧ ಕಂಪನಿಗಳ ಹೆಸರಿನಲ್ಲಿವೆ. ಆದರೆ, ಬಹುತೇಕ ಖಾತೆಗಳನ್ನು ಕಂಪನಿಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡು ಬೇನಾಮಿ ಸ್ವರೂಪದಲ್ಲಿ ತೆರೆಯಲಾಗಿತ್ತು ಎಂಬುದೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ನಡೆಸಿರುವ ಪ್ರಾಥಮಿಕ ಪರಿಶೀಲನೆ ವೇಳೆ ಗೊತ್ತಾಗಿದೆ ಎಂದು ಮೂಲಗಳು ಹೇಳಿವೆ.

ನಿಗಮದ ಖಾತೆಯಿಂದ ವರ್ಗಾವಣೆ ಆಗಿರುವ ₹ 89.62 ಕೋಟಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಯೂನಿಯನ್‌ ಬ್ಯಾಂಕ್ ಅಧಿಕಾರಿಗಳ ಮೇಲೆ ಒತ್ತಡ ತರಲಾಗಿತ್ತು. ಆದರೆ, ಬಹುತೇಕ ಮೊತ್ತ ನಿಗಮದ ಖಾತೆಯಿಂದ ವರ್ಗಾವಣೆಯಾದ ದಿನವೇ ಆರ್‌ಬಿಎಲ್‌ ಬ್ಯಾಂಕ್‌ನ ಖಾತೆಗಳಿಂದ ವರ್ಗಾವಣೆ ಮತ್ತು ನಗದೀಕರಣ ಆಗಿರುವ ಮಾಹಿತಿ ಅಧಿಕಾರಿಗಳಿಗೆ ಲಭಿಸಿತ್ತು.

ಅಧಿಕಾರಿಗಳ ಹೇಳಿಕೆ ಬಗ್ಗೆಯೇ ಅನುಮಾನ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧೀನದಲ್ಲಿರುವ ನಿಗಮಗಳು ನಿತ್ಯವೂ ತಮ್ಮ ಬಳಿ ಇರುವ ನಗದು, ಆ ದಿನ ವೆಚ್ಚವಾದ ಮೊತ್ತದ ಕುರಿತು ನಗದು ವಹಿಯಲ್ಲಿ ದಾಖಲಿಸಬೇಕು. ತಿಂಗಳಾಂತ್ಯದಲ್ಲಿ ಬ್ಯಾಂಕ್‌ ಖಾತೆಯ ವಹಿವಾಟು ವಿವರಗಳನ್ನು ನಗದು ವಹಿ ಜತೆ ತಾಳೆ ಮಾಡಿ ನೋಡಬೇಕು. ಆದರೆ, ಹಗರಣ ನಡೆದು ಎರಡು ತಿಂಗಳ ಬಳಿಕವೇ ತಮಗೆ ತಿಳಿಯಿತು ಎಂಬ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಗಳ ಹೇಳಿಕೆ ಬಗ್ಗೆಯೇ ವಿಶೇಷ ತನಿಖಾ ತಂಡಕ್ಕೆ ಅನುಮಾನ ವ್ಯಕ್ತವಾಗಿದೆ.

‘ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆಯೆ? ಅಥವಾ ನಿಗಮದಲ್ಲಿ ಉದ್ದೇಶಪೂರ್ವಕವಾಗಿ ಹಣಕಾಸು ವಹಿವಾಟಿನ ಪರಿಶೀಲನೆ ನಡೆಸದೆ ಮೌನ ವಹಿಸಲಾಗಿತ್ತೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.