ರಾಯಚೂರು: ರಾಜ್ಯದ ಗಡಿಭಾಗ ರಾಯಚೂರು ತಾಲ್ಲೂಕು ವಿಭಿನ್ನ ಹಾಗೂ ತೆಲುಗು ಭಾಷಾ ಪ್ರಭಾವ ಅಧಿಕವಿದ್ದು, ಅನಿವಾರ್ಯ ಸ್ಥಿತಿ ಇದ್ದಾಗ ಮಾತ್ರ ಜನರು ಕನ್ನಡದಲ್ಲಿ ಮಾತನಾಡುತ್ತಾರೆ!
ಇಂದಿಗೂ ತೆಲುಗು ಆಡುಭಾಷೆಯಾಗಿ ಉಳಿದುಕೊಂಡಿದೆ. ಕನ್ನಡ ಗೊತ್ತಿರುವ ಜನರು, ತರಕಾರಿ ಮಾರುಕಟ್ಟೆಯಲ್ಲಿ ಚೌಕಾಸಿ ಮಾಡಲು ಸಾಧ್ಯವಾಗದೆ ಅಸಹಾಯಕತೆ ಅನುಭವಿಸುತ್ತಾರೆ. ರಾಯಚೂರು ಗ್ರಾಮೀಣ ಭಾಗಗಳಿಂದ ತರಕಾರಿ ಮಾರಾಟಕ್ಕೆ ಬರುವ ಬಹಳಷ್ಟು ರೈತ ಮಹಿಳೆಯರಿಗೆ ಕನ್ನಡ ಮಾತನಾಡುವುದು ಗೊತ್ತಿಲ್ಲ.
ರಾಯಚೂರು ನಗರದ ನಿವಾಸಿಗಳಲ್ಲಿ ನೂರಕ್ಕೆ 90 ರಷ್ಟು ಜನರು ಕನ್ನಡ–ತೆಲುಗು ಎರಡೂ ಭಾಷೆ ಬಲ್ಲವರಿದ್ದಾರೆ. ಆದರೆ, ಮಾತು ಆರಂಭಿಸುವಾಗ ‘ತೆಲುಗು ವಸ್ತದಾ’ (ತೆಲುಗು ಗೊತ್ತಾ) ಎಂದು ಪ್ರಶ್ನಿಸುತ್ತಾರೆ. ತೆಲುಗು ಗೊತ್ತಿಲ್ಲ ಎಂದು ಉತ್ತರಿಸಿದವವರನ್ನು ರಾಯಚೂರಿನವರಲ್ಲ ಎಂದು ಸುಲಭವಾಗಿ ಗುರುತಿಸುತ್ತಾರೆ. ತೆಲುಗು ಭಾಷೆಯು ರಾಯಚೂರಿನ ಜನರನ್ನು ಗುರುತಿಸುವ ಮಾನದಂಡವಾಗಿ ಉಳಿದಿದೆ. ಅಷ್ಟರ ಮಟ್ಟಿಗೆ ತೆಲುಗು ಪ್ರಭಾವವಿದೆ. ರಾಯಚೂರು ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ತೆಲುಗು ಹಾಸುಹೊಕ್ಕಾಗಿದೆ. ರಾಯಚೂರಿನದ್ದೆ ವಿಭಿನ್ನ ತೆಲುಗು ಭಾಷಾ ಉಚ್ಛಾರಣೆ ಇದೆ.
ಸರ್ಕಾರಿ ಕಚೇರಿಗಳ ಸುತ್ತಮುತ್ತ ಕೂಡಾ ತೆಲುಗು ಮಾತನಾಡುವುದು ಕೇಳಿ ಬರುತ್ತದೆ. ಕಚೇರಿಯೊಳಗೆ ಮಾತ್ರ ಕನ್ನಡ ಬಳಕೆಯಾಗುತ್ತದೆ. ಬೇರೆ ಬೇರೆ ಜಿಲ್ಲೆಗಳು ಮತ್ತು ಬೇರೆ ತಾಲ್ಲೂಕುಗಳಿಂದ ಬಂದಿರುವ ಅಧಿಕಾರಿಗಳಿಗೆ ತೆಲುಗು ಭಾಷೆ ಗೊತ್ತಿರುವುದಿಲ್ಲ. ಆದರೆ, ಸ್ಥಳೀಯ ನಗರಸಭೆ ಕಡೆಗೆ ಹೋದರೆ, ಎಲ್ಲವೂ ತೆಲುಗುಮಯ. ಕಡತಗಳು ಹಾಗೂ ಮನವಿ ಸಲ್ಲಿಕೆಯಲ್ಲಿ ಕನ್ನಡ ಕಾಣುತ್ತದೆ.
ಹಬ್ಬ, ಹರಿದಿನಗಳು, ರಾಯಚೂರು ನಗರದಲ್ಲಿ ನಡೆಯುವ ಸೋಮವಾರ ಸಂತೆ, ವ್ಯಾಪಾರ ವಹಿವಾಟುಗಳಲ್ಲಿ, ಎಪಿಎಂಸಿ ಪ್ರಾಂಗಣಗಳಲ್ಲಿ ಎಲ್ಲಿ ನೋಡಿದರೂ ತೆಲುಗು ಸಂಭಾಷಣೆಗಳು ಕಿವಿಗೆ ಕೇಳಿಸುತ್ತದೆ. ಗುಂಪು ಅಥವಾ ಇಬ್ಬರು ವ್ಯಕ್ತಿಗಳ ಮಧ್ಯೆ ಜಗಳ ನಡೆಯುವಾಗ ಕೂಡಾ ಕನ್ನಡ ಪದಗಳು ಕೇಳಿಸುವುದಿಲ್ಲ.
ಲಿಂಗಸುಗೂರು ತಾಲ್ಲೂಕುವೊಂದನ್ನು ಹೊರತುಪಡಿಸಿ ದೇವದುರ್ಗ, ಮಾನ್ವಿ ಹಾಗೂ ಸಿಂಧನೂರು ತಾಲ್ಲೂಕುಗಳಲ್ಲಿ ಆಂಧ್ರ ಕ್ಯಾಂಪ್‌ಗಳಿವೆ. ಹೀಗಾಗಿ ತೆಲುಗು ಭಾಷಾ ಪ್ರಭಾವ ರಾಯಚೂರು ಹೊರತಾದ ತಾಲ್ಲೂಕುಗಳಲ್ಲಿಯೂ ಪಸರಿಸಿಕೊಳ್ಳುತ್ತಿದೆ.
ಕನ್ನಡ ಆಡುಭಾಷೆಯನ್ನು ತೆಲುಗು ಹಾಗೂ ಹಿಂದಿ ಭಾಷೆಗಳು ಕ್ರಮೇಣ ನುಂಗಿ ಹಾಕುತ್ತಿವೆ. ಕನ್ನಡ ಪರ ಸಂಘಟನೆಗಳು ಜಿಲ್ಲಾ ಕೇಂದ್ರಗಳು ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸಕ್ರಿಯವಾಗಿವೆ. ರಾಯಚೂರು ಜಿಲ್ಲಾ ಕೇಂದ್ರದಲ್ಲಿ ಹೋರಾಟಕ್ಕೆ ಸೇರುವ ಕಾರ್ಯಕರ್ತರು ಪರಸ್ಪರ ತೆಲುಗು ಭಾಷೆಯಲ್ಲಿ ಮಾತನಾಡಿಕೊಳ್ಳುತ್ತಾ, ಕನ್ನಡಪರ ಘೋಷಣೆಗಳನ್ನು ಕೂಗುತ್ತಾರೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.