ADVERTISEMENT

ಪಾರಂಪರಿಕ ತಾಣ | ಗೋಳಗುಮ್ಮಟ ವೀಕ್ಷಣೆಗೆ ರಾತ್ರಿ 9ರವರೆಗೆ ಅವಕಾಶ

ಪಟ್ಟದಕಲ್ಲು ಸೇರಿ 10 ಪಾರಂಪರಿಕ ತಾಣಗಳಿಗೆ ಅನ್ವಯ- ನಿರ್ಧಾರ

ಪಿಟಿಐ
Published 29 ಜುಲೈ 2019, 20:06 IST
Last Updated 29 ಜುಲೈ 2019, 20:06 IST
ವಿಜಯಪುರದ ಐತಿಹಾಸಿಕ ಗೋಳಗುಮ್ಮಟ ಸ್ಮಾರಕ
ವಿಜಯಪುರದ ಐತಿಹಾಸಿಕ ಗೋಳಗುಮ್ಮಟ ಸ್ಮಾರಕ   

ನವದೆಹಲಿ: ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲು ಹಾಗೂ ವಿಜಯಪುರದ ಗೋಳಗುಮ್ಮಟ ಸೇರಿದಂತೆ ದೇಶದ 10 ಪಾರಂಪರಿಕ ತಾಣಗಳ ವೀಕ್ಷಣೆಯ ಸಮಯವನ್ನು ರಾತ್ರಿ 9 ಗಂಟೆಯವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್‌ ಪಟೇಲ್‌ ಹೇಳಿದ್ದಾರೆ.

ಇದುವರೆಗೆ ಈ ತಾಣಗಳ ವೀಕ್ಷಣೆಗೆ ಸಂಜೆ 6 ಗಂಟೆಯವರೆಗೆ ಮಾತ್ರ ಸಾರ್ವಜನಿಕರಿಗೆ ಅವಕಾಶ ಇತ್ತು.

ದೆಹಲಿಯ ಹುಮಾಯೂನ್‌ ಸಮಾಧಿ, ಸಫ್ದರ್‌ಜಂಗ್‌ ಸಮಾಧಿ, ಒಡಿಶಾದ ಭುವನೇಶ್ವರದ ರಾಜರಾಣಿ ದೇವಾಲಯ, ಮಧ್ಯಪ್ರದೇಶದ ಖಜರಾಹೊ ದುಲ್ಹದೇವ್‌ ದೇವಸ್ಥಾನ, ಹರಿಯಾಣದ ಕುರುಕ್ಷೇತ್ರದಲ್ಲಿರುವ ಶೇಖ್ ಚಿಲ್ಲಿ ಸಮಾಧಿ, ಮಹಾರಾಷ್ಟ್ರದ ಮಾರ್ಕಂಡ ದೇವಾಲಯ, ಉತ್ತರಪ್ರದೇಶದ ವಾರಾಣಸಿಯ ಮನ್‌ ಮಹಲ್‌ ಮತ್ತು ಗುಜರಾತ್‌ನ ಪಠಾನ್‌ನಲ್ಲಿರುವ ರಾಣಿ ಕಿ ಬಾವ್‌ ವೀಕ್ಷಣೆಯ ಅವಧಿ ವಿಸ್ತರಿಸಿರುವ ಇತರ ಪಾರಂಪರಿಕ ತಾಣಗಳು.

ADVERTISEMENT

ವೀಕ್ಷಣೆಯ ಸಮಯ ಬದಲಾವಣೆ ಮೂರು ವರ್ಷಗಳಿಗೆ ಅನ್ವಯವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

‘ಕೆಲವು ತಾಣಗಳು ದೇವಾಲಯಗಳಾಗಿದ್ದು, ಪೂಜೆ ಸಲ್ಲಿಸಲು ಸ್ಥಳೀಯರು ರಾತ್ರಿ ಕೂಡ ಭೇಟಿ ನೀಡುತ್ತಿದ್ದಾರೆ. ಈ ಕಾರಣಕ್ಕೆ ವೀಕ್ಷಣೆಯ ಸಮಯವನ್ನು ವಿಸ್ತರಿಸಲಾಗಿದೆ’ ಎಂದು ಸಚಿವರು ತಿಳಿಸಿದ್ದಾರೆ. ಈ ಪಾರಂಪರಿಕ ತಾಣಗಳ ವೀಕ್ಷಣೆಗೆ ರಾತ್ರಿ 9 ಗಂಟೆಯವರೆಗೂ ಸಾರ್ವಜನಿಕರಿಗೆ ಅವಕಾಶ ನೀಡಬೇಕು ಎಂಬ ಪ್ರಸ್ತಾವವನ್ನು ಅಲ್ಫೋನ್ಸ್‌ ಕಣ್ಣಂತಾನಂ ಅವರು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾಗಿದ್ದಾಗ ಸಲ್ಲಿಸಿದ್ದರು.

ಬೆಳಕಿನ ವ್ಯವಸ್ಥೆಗೆ ಪ್ರಸ್ತಾವ ಸಲ್ಲಿಕೆ

‘ಪಟ್ಟದಕಲ್ಲಿಗೆ ರಾತ್ರಿ 9 ಗಂಟೆಯವರೆಗೆ ಪ್ರವಾಸಿಗರ ಭೇಟಿಗೆ ಅವಕಾಶ ನೀಡಿದಲ್ಲಿ ಅಲ್ಲಿ ಬೆಳಕಿನ ವ್ಯವಸ್ಥೆ ಮಾಡಬೇಕಿದೆ. ಅಲ್ಲಿನ ದೇವಾಲಯಗಳ ಸಮುಚ್ಚಯ ನಡುವೆಬೆಳಕಿನ ವಿನ್ಯಾಸ ಮಾಡಲುಧಾರವಾಡದಲ್ಲಿನ ಭಾರತೀಯ ಪುರಾತತ್ವ ಇಲಾಖೆಗೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ’ಎಂದು ಬಾದಾಮಿಯ ಪುರಾತತ್ವ ಇಲಾಖೆ ಅಧಿಕಾರಿ ಅಜಯ್ ಜನಾರ್ದನ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.