ADVERTISEMENT

ಟೆಂಡರ್‌ ಷರತ್ತು ಸರ್ಕಾರದ ವಿವೇಚನೆ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 15:57 IST
Last Updated 18 ಅಕ್ಟೋಬರ್ 2024, 15:57 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ರಾಜ್ಯ ಸರ್ಕಾರವು ಟೆಂಡರ್‌ ಆಹ್ವಾನಕ್ಕೆ ತನ್ನದೇ ಆದ ಷರತ್ತುಗಳನ್ನು ವಿಧಿಸಬಹುದಾಗಿದ್ದು, ಅದು ನ್ಯಾಯಾಂಗ ಪರಿಶೀಲನೆಯ ವ್ಯಾಪ್ತಿಗೆ ಒಳಪಡುವುದಿಲ್ಲ’ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಈ ಕುರಿತಂತೆ ರಾಯಬಾಗ ತಾಲ್ಲೂಕಿನ ಹಾರೊಗೇರಿಯ ಅಪ್ಪಾಸಾಬ್‌ ಸಲ್ಲಿಸಿದ್ದ ‌ಅರ್ಜಿಯನ್ನು ಧಾರವಾಡ ಪೀಠದಲ್ಲಿನ ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ತಿರಸ್ಕರಿಸಿದ್ದು, ‘ಟೆಂಡರ್‌ ಒಪ್ಪುವ ವಿಚಾರ ಪುರಸಭೆಯ ವಿವೇಚನೆಗೆ ಬಿಟ್ಟಿದ್ದಾಗಿದೆ. ಹೀಗಾಗಿ, ಅರ್ಜಿದಾರರು ತಮ್ಮ ಹಕ್ಕು ಪ್ರತಿಪಾದನೆ ಮಾಡಲಾಗದು’ ಎಂದು ಆದೇಶಿಸಿದೆ.

‘ಬಿಡ್‌ ತಿರಸ್ಕರಿಸಿರುವುದನ್ನು ತನಗೆ ತಿಳಿಸಿಲ್ಲ ಎಂಬ ಅರ್ಜಿದಾರರ ವಾದವು ಪುರಸಭೆಯ 13ನೇ ಷರತ್ತಿಗೆ ವಿರುದ್ಧವಾಗಿದೆ. ಟೆಂಡರ್‌ ಒಪ್ಪಿಕೊಳ್ಳುವ ಅಥವಾ ಮರು ಟೆಂಡರ್‌ ಕರೆಯುವ ಅಧಿಕಾರ ಪುರಸಭೆಗೆ ಇದೆ ಎಂದು 15ನೇ ಷರತ್ತಿನಲ್ಲಿ ಹೇಳಲಾಗಿದೆ. ಹೀಗಾಗಿ, ಅರ್ಜಿದಾರರ ವಾದವನ್ನು ಒಪ್ಪಲಾಗದು’ ಎಂದು ಹೇಳಿದೆ.

ADVERTISEMENT

‘ಸಂವಿಧಾನದ 226ನೇ ವಿಧಿಯಡಿ ವಿವೇಚನಾಧಿಕಾರ ಬಳಕೆ ಮಾಡುವಾಗ ಸಾರ್ವಜನಿಕ ಹಿತಾಸಕ್ತಿ ಮುಖ್ಯವಾಗಬೇಕೆ ವಿನಾ ಕಾನೂನಿನ ಅಂಶವಲ್ಲ. ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮಧ್ಯಪ್ರವೇಶದ ಅಗತ್ಯತೆಯನ್ನು ನ್ಯಾಯಾಲಯ ನಿರ್ಧರಿಸಬೇಕಾಗುತ್ತದೆ’ ಎಂದು ನ್ಯಾಯಪೀಠ ವಿವರಿಸಿದೆ.

‘ಪರಿಶಿಷ್ಟ ಜಾತಿಗೆ ಸೇರಿದವನಾದ ನಾನು ನಿರುದ್ಯೋಗಿ. ಟೆಂಡರ್‌ನಲ್ಲಿ ಅತಿ ಹೆಚ್ಚಿನ ಮೊತ್ತಕ್ಕೆ ಬಿಡ್‌ ಕೂಗಿದ್ದೇನೆ. ಆದ್ದರಿಂದ, ಸಾರ್ವಜನಿಕ ಸ್ಥಳದಲ್ಲಿ ಉದ್ಯಮ ನಡೆಸುವವರಿಂದ ನಿತ್ಯ ಮತ್ತು ತಿಂಗಳ ಶುಲ್ಕ ಸಂಗ್ರಹಿಸುವ ಟೆಂಡರ್‌ ನೀಡಬೇಕು’ ಎಂದು ಅಪ್ಪಾಸಾಬ್‌ ಹಾರೂಗೇರಿ ಪುರಸಭೆಗೆ ಮನವಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.