ADVERTISEMENT

ಕೊಲೆ ಸಂಚು: ಬಿಡುಗಡೆಗೆ ಹೈಕೋರ್ಟ್‌ ನಕಾರ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 16:26 IST
Last Updated 25 ಜುಲೈ 2024, 16:26 IST
<div class="paragraphs"><p>ಹೈಕೋರ್ಟ್‌</p></div>

ಹೈಕೋರ್ಟ್‌

   

ಬೆಂಗಳೂರು: ‘ಹಿಂದೂ ಸಮಾಜದ ಮುಖಂಡರು ಹಾಗೂ ಸರ್ಕಾರಿ ಅಧಿಕಾರಿಗಳ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು ನನ್ನ ವಿರುದ್ಧ ಎನ್‌ಐಎ ಹೊರಿಸಿರುವ ದೋಷಾರೋಪಗಳಿಂದ ಬಿಡುಗಡೆ ಮಾಡಬೇಕು’ ಎಂದು ಕೋರಿ ಗ್ಲಾಸ್ಗೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆಸಿದ ಭಯೋತ್ಪಾದನಾ ದಾಳಿ ಪ್ರಕರಣದ ಆರೋಪಿಯೂ ಆಗಿದ್ದ, ನಗರದ ಡಾ.ಸಬೀಲ್‌ ಅಹಮದ್‌ ಅಲಿಯಾಸ್ ಮೋಟು ಡಾಕ್ಟರ್‌ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿದೆ.

ಈ ಸಂಬಂಧ ಡಾ.ಸಬೀಲ್‌ ಅಹಮದ್‌ (39) ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಹಾಗೂ ನ್ಯಾಯಮೂರ್ತಿ ಜೆ.ಎಂ.ಖಾಜಿ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ಪ್ರಕಟಿಸಿದೆ.

ADVERTISEMENT

‘ನನ್ನ ವಿರುದ್ಧ ಬೆಂಗಳೂರಿನ ಪ್ರಕರಣದಲ್ಲಿ ಹೊರಿಸಲಾಗಿರುವ ಆರೋಪಗಳು ಮತ್ತು ಈ ಹಿಂದೆ ದೆಹಲಿಯಲ್ಲಿನ ಪ್ರಕರಣವೊಂದರಲ್ಲಿ ನನ್ನ ವಿರುದ್ಧ ಹೊರಿಸಲಾದ ಆರೋಪಗಳೆರಡೂ ಒಂದೇ ರೀತಿ ಇವೆ. ದೆಹಲಿಯ ಪ್ರಕರಣದಲ್ಲಿ ನಾನು ಈಗಾಗಲೇ ದೋಷಮುಕ್ತಗೊಂಡಿದ್ದೇನೆ. ಹೀಗಾಗಿ, ಏಕರೂಪದ ಆರೋಪಗಳಿಗೆ ಎರಡೆರಡು ಬಾರಿ ಸಿಆರ್‌ಪಿಸಿ ಆಡಿಯಲ್ಲಿ ವಿಚಾರಣೆ ನಡೆಸುವುದು ಕಾನೂನುಬಾಹಿರ’ ಎಂದು ಸಬೀಲ್‌ ಪ್ರತಿಪಾದಿಸಿದ್ದರು.

ಇದನ್ನು ತಳ್ಳಿ ಹಾಕಿರುವ ನ್ಯಾಯಪೀಠ, ‘ಅರ್ಜಿದಾರರ ವಿರುದ್ಧದ ದೆಹಲಿ ಮತ್ತು ಬೆಂಗಳೂರಿನ ಪ್ರಕರಣಗಳೆರಡೂ ಬೇರೆ ಬೇರೆ ಸ್ವರೂಪದ್ದವು. ಆರೋಪಿಯು ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್‌–ಎ–ತಯ್ಯಬಾ (ಎಲ್‌ಇಟಿ) ಸದಸ್ಯನಾಗಿದ್ದು ಅರ್ಜಿ ವಜಾ ಮಾಡಬೇಕು’ ಎಂಬ ಪ್ರಾಸಿಕ್ಯೂಷನ್‌ ವಾದವನ್ನು ಮಾನ್ಯ ಮಾಡಿದೆ. ಎನ್‌ಐಎ ಪರ ಪಿ.ಪ್ರಸನ್ನ ಕುಮಾರ್ ಮತ್ತು ಆರೋಪಿ ಪರ ಹಿರಿಯ ವಕೀಲ ಕಿರಣ್‌ ಎಸ್‌.ಜವಳಿ ವಾದ ಮಂಡಿಸಿದ್ದರು. ಈ ಮೊದಲು ಸಬೀಹ್ ಸಲ್ಲಿಸಿದ್ದ ಅರ್ಜಿಯನ್ನು ನಗರದ ಎನ್‌ಐಎ ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು.  

ಸಬೀಹ್‌ ವಿರುದ್ಧ ಭಾರತೀಯ ದಂಡ ಸಂಹಿತೆ–1860ರ ಕಲಂ 153ಎ, 121ಎ, 120ಬಿ, 121, 122, 379, 153ಬಿ ಮತ್ತು 307, ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ–1959ರ ಕಲಂ 3 ಮತ್ತು 25 ಹಾಗೂ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ–1967ರ ಕಲಂ 10,12,13,15, 16, 18 ಮತ್ತು 20ರ ಅಡಿಯಲ್ಲಿ ಬಸವೇಶ್ವರ ನಗರ ಪೊಲೀಸ್‌ ಠಾಣೆಯಲ್ಲಿ 2012ರ ಆಗಸ್ಟ್‌ 29ರಂದು ದೂರು ದಾಖಲಾಗಿತ್ತು. ಈ ಪ್ರಕರಣವನ್ನು 2012ರ ನವೆಂಬರ್ 16ರಂದು ಎನ್‌ಐಎ ತನಿಖೆಗೆ ವಹಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.