ADVERTISEMENT

ಟಿಇಟಿ ಫಲಿತಾಂಶ ಪ್ರಕಟ

61,927 ಅಭ್ಯರ್ಥಿಗಳು ಅರ್ಹ: ಆನ್‌ಲೈನ್‌ನಲ್ಲೇ ಅಂಕಪಟ್ಟಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2022, 18:37 IST
Last Updated 14 ಡಿಸೆಂಬರ್ 2022, 18:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: 2022ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಫಲಿತಾಂಶವನ್ನು ಬುಧವಾರ ಪ್ರಕಟಿಸಲಾಗಿದೆ.

ಈ ಪರೀಕ್ಷೆಯ ಪತ್ರಿಕೆ–1ಕ್ಕೆ (1ರಿಂದ 5ನೇ ತರಗತಿ ಬೋಧಿಸುವ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ) 1.40 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಇವರಲ್ಲಿ 20,070 ಅಭ್ಯರ್ಥಿಗಳು ಅರ್ಹರಾಗಿದ್ದಾರೆ.

ಪತ್ರಿಕೆ 2ಕ್ಕೆ (6ರಿಂದ 8ನೇ ತರಗತಿ ಬೋಧಿಸುವ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ) 1.92 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಇವರಲ್ಲಿ 41,857 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಪತ್ರಿಕೆ–1 ಮತ್ತು 2ಕ್ಕೆ ಹಾಜರಾದ ಒಟ್ಟು 3,32,856 ಅಭ್ಯರ್ಥಿಗಳಲ್ಲಿ ಒಟ್ಟು 61,927 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.

ADVERTISEMENT

ಈ ಬಾರಿಯ ನ.6 ರಂದು ಎಲ್ಲ ಜಿಲ್ಲೆಗಳಲ್ಲಿ ಟಿಇಟಿ ನಡೆದಿತ್ತು. 39 ದಿನಗಳಲ್ಲಿ ಪರೀಕ್ಷಾ ನಂತರದ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಕೀ ಉತ್ತರಗಳನ್ನು ಆಧರಿಸಿ ಓಎಂಆರ್‌ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿ ಫಲಿತಾಂಶ ಪ್ರಕಟಿಸಲಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಸಂಬಂಧಪಟ್ಟ ಪತ್ರಿಕೆಗಳಲ್ಲಿ ಶೇ60ರಷ್ಟು ಅರ್ಹತಾ ಅಂಕಗಳು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ–1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶೇ 55 ಅರ್ಹತಾ ಅಂಕಗಳನ್ನು ಫಲಿತಾಂಶಕ್ಕೆ ಪರಿಗಣಿಸಲಾಗಿದೆ.

ಗಣಕೀಕೃತ ಅಂಕಪಟ್ಟಿ: ಕನಿಷ್ಠ ಅರ್ಹತಾ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳಿಗೆ ಕ್ಯೂಆರ್‌ ಕೋಡ್‌ ದತ್ತಾಂಶವನ್ನು ಹೊಂದಿರುವ ಗಣಕೀಕೃತ ಅಂಕಪಟ್ಟಿ ವಿತರಿಸಲಾಗುವುದು. ಮುದ್ರಿತ ಅಂಕ ಪಟ್ಟಿ ನೀಡುವುದಿಲ್ಲ. ಅಭ್ಯರ್ಥಿಗಳು ಡಿ.26ರಿಂದ ಶಿಕ್ಷಣ ಇಲಾಖೆಯ http://schooleducation.kar.nic.in ವೆಬ್‌ಸೈಟ್‌ನಲ್ಲಿ ನೀಡಲಾದ ಲಿಂಕ್‌ ಮೂಲಕ ಪ್ರಮಾಣ ಪತ್ರ ಅಥವಾ ಅಂಕಪಟ್ಟಿ ಪಡೆದುಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.