ADVERTISEMENT

ಪಠ್ಯ ಪರಿಷ್ಕರಣೆ ವಿವಾದ: ಇಲಾಖೆ ಮುಖ್ಯಸ್ಥರಿಗೆ ಲೇಖಕರ ಪತ್ರ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 15:59 IST
Last Updated 14 ಜೂನ್ 2022, 15:59 IST
   

ಬೆಂಗಳೂರು: ಪಠ್ಯ ಪರಿಷ್ಕರಣೆ ಕುರಿತು ಎದ್ದಿರುವ ವಿವಾದಗಳ ಕುರಿತು ಐದು ಪ್ರಶ್ನೆಗಳನ್ನು ಎತ್ತಿರುವ ನಾಡಿನ ಸಾಹಿತಿಗಳು, ಪ್ರಗತಿಪರ ಹೋರಾಟಗಾರರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಜಾಗೃತ ನಾಗರಿಕರು ಕರ್ನಾಟಕ ವೇದಿಕೆಯ ಪರವಾಗಿ ಪ್ರಶ್ನೆಗಳನ್ನು ಕೇಳಿರುವ ಈ ಪತ್ರಕ್ಕೆ ಕೆ.ಮರುಳಸಿದ್ಧಪ್ಪ, ಜಿ. ರಾಮಕೃಷ್ಣ, ವಿಜಯಾ, ಕುಂ.ವೀರಭದ್ರಪ್ಪ, ಪುರುಷೋತ್ತಮ ಬಿಳಿಮಲೆ, ರಾಜೇಂದ್ರ ಚೆನ್ನಿ, ರಹಮತ್ ತರೀಕೆರೆ, ಕೆ.ಎಸ್‌. ವಿಮಲಾ, ಇಂದಿರಾ ಕೃಷ್ಣಪ್ಪ, ವಿನಯಾ, ಬಂಜಗೆರೆ ಜಯಪ್ರಕಾಶ್, ವಸುಂಧರಾ ಭೂಪತಿ ಸೇರಿದಂತೆ 52 ಜನ ಸಹಿ ಹಾಕಿದ್ದಾರೆ. ಎಲ್ಲ ವಿವಾದಗಳೂ ಕೊನೆಗೊಳ್ಳುವವರೆಗೂ ಹಳೆಯ ಪಠ್ಯ ಪುಸ್ತಕಗಳನ್ನೇ ಮುಂದುವರಿಸಬೇಕು ಎಂದೂ ಮನವಿ ಮಾಡಿದ್ದಾರೆ.

ಪ್ರಶ್ನೆಗಳೇನು?

ADVERTISEMENT

*ಆರನೇ ತರಗತಿಯ ಪಠ್ಯದ ಕುರಿತು ಪರಿಶೀಲಿಸಿ ವರದಿ ಕೊಡಿ ಎಂದು ರೋಹಿತ್ ಚಕ್ರತೀರ್ಥ ಸಮಿತಿ ನೇಮಿಸಲಾಗಿತ್ತು. ಸಮಿತಿಯು ತನ್ನ ವ್ಯಾಪ್ತಿ ಮೀರಿ 1 ರಿಂದ 10 ನೇ ತರಗತಿಯ ಬರೆಗಿನ ಎಲ್ಲಾ ಪಠ್ಯಗಳನ್ನೂ ಪರಿಷ್ಕರಿಸಿ ವರದಿ ನೀಡಿದೆ ಎಂಬ ಸಂಗತಿ ಚರ್ಚೆಯಲ್ಲಿದೆ. ಸರ್ಕಾರದ ಆದೇಶವೇ ಇಲ್ಲದೇ ಪಠ್ಯ ಪರಿಷ್ಕರಣೆಗೆ ಅವಕಾಶ ಇದೆಯೇ?

*ಪಠ್ಯದಲ್ಲಿರುವ ಲೋಪದೋಷಗಳನ್ನು ತಿದ್ದುಪಡಿ ಮಾಡಲಾಗುವುದು ಎಂದು ಸಚಿವರ ಹೇಳಿಕೆ ಬಂದ ಮೇಲೂ ಪರಿಷ್ಕೃತ ಪಠ್ಯ ಪುಸ್ತಕದಲ್ಲಿನ ಪಾಠಗಳನ್ನೇ ಬೋಧಿಸಬೇಕೆಂಬ ಸುತ್ತೋಲೆ ಹರಿದಾಡುತ್ತಿದೆ. ಇದು ದ್ವಂದ್ವ ನೀತಿಯಲ್ಲವೇ?

*ನಿಯಮ ಬಾಹಿರವಾಗಿಯೇ ನಡೆದದ್ದಾದರೂ ಮರು ಪರಿಷ್ಕೃತ ಪಠ್ಯ ಪುಸ್ತಕಗಳಲ್ಲಿರುವ ಲೋಪದೋಷಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂದು ಶಿಕ್ಷಣ ಇಲಾಖೆ ಹೇಳಿದ್ದಾಗಿ ವರದಿಯಾಗಿದೆ. ಆಕ್ಷೇಪಣೆ ಸಲ್ಲಿಸುವ ವಿಧಾನ, ಅಂತಿಮ ದಿನಾಂಕದ ಮಾಹಿತಿ ಲಭ್ಯವಿಲ್ಲ. ಅದು ಯಾವಾಗ ಲಭ್ಯ?

*ಒಂದೆಡೆ ತಿದ್ದುಪಡಿ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ. ಮತ್ತೊಂದೆಡೆ ಪಠ್ಯ ಪುಸ್ತಕಗಳನ್ನು ವಿತರಿಸಲಾಗುತ್ತದೆ ಎಂದು ವರದಿಯಾಗಿದೆ. ಈ ಗೊಂದಲ ಏಕೆ?

*ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಾಥಮಿಕ ಶಿಕ್ಷಣಕ್ಕೂ ಅನ್ವಯಿಸಲು ಸಮಿತಿ ರಚಿಸಲಾಗಿದೆ. ಅದರ ಶಿಫಾರಸುಗಳಿಗೆ ಅನುಗುಣವಾಗಿ ಮತ್ತೆ ನೀವು ಹೊಸ ಪಠ್ಯಗಳನ್ನು ರಚಿಸುವವರಿದ್ದೀರಿ. ಹಾಗಿದ್ದೂ ಕೇವಲ ಒಂದು ವರ್ಷಕ್ಕಾಗಿ ಮರು ಪರಿಷ್ಕರಣೆಯ ಅಗತ್ಯವೇನಿತ್ತು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.