ADVERTISEMENT

ಪುಸ್ತಕ ಪರಿಷ್ಕರಣೆ ಸಮಿತಿ ವಿಸರ್ಜಿಸಲಾಗಿದೆ, ಬರಖಾಸ್ತು ಮಾಡಿಲ್ಲ: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 7:02 IST
Last Updated 4 ಜೂನ್ 2022, 7:02 IST
ಡಾ.ಸಿ.ಎನ್. ಅಶ್ವತ್ಥನಾರಾಯಣ
ಡಾ.ಸಿ.ಎನ್. ಅಶ್ವತ್ಥನಾರಾಯಣ   

ಬೆಳಗಾವಿ: ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ಬರಖಾಸ್ತು ಮಾಡಿಲ್ಲ, ವಿಸರ್ಜನೆ ಮಾಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರು ಸ್ಪಷ್ಟವಾದ ಹೇಳಿಕೆ ನೀಡಿದ್ದಾರೆ. ಇದಕ್ಕೆ ಬೇರೆ ಅರ್ಥ ಕೊಡಬೇಕಿಲ್ಲ' ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

‘ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅವಧಿ ಮುಗಿದಿದೆ. ಪೂರ್ಣ ಪ್ರಮಾಣದ ವರದಿ ಕೂಡ ನೀಡಲಾಗಿದೆ. ಹೀಗಾಗಿ ಸಮಿತಿ ವಿಸರ್ಜಿಸಲಾಗಿದೆ. ಸಾಹಿತಿಗಳ ವಿರೋಧ ಅಥವಾ ಒತ್ತಡ ಇದಕ್ಕೆ ಕಾರಣ ಎಂದು ಸುಳ್ಳು’ಎಂದು ಅವರು ನಗರದಲ್ಲಿ ಶನಿವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

‘ನಾವೆಲ್ಲ ಆರ್‌ಎಸ್‌ಎಸ್‌ ಮೂಲದವರೇ ಇದ್ದೇವೆ. ಆದರೆ ಸರ್ಕಾರದಲ್ಲಿ ಇದ್ದಾಗ ಸರ್ಕಾರದ ಜವಾಬ್ದಾರಿಗಳನ್ನೆಲ್ಲ ನಿರ್ವಹಿಸುತ್ತೇವೆ. ಸಂಘದಲ್ಲಿದ್ದಾಗ ಅಲ್ಲಿನ ಕೆಲಸ ಮಾಡುತ್ತೇವೆ. ಎಲ್ಲರನ್ನೂ ಒಂದಾಗಿ ಬೆಳೆಸಿಕೊಂಡು ಹೋಗುವುದು, ದೇಶ ಸೇವೆ ಮಾಡುವುದು ಆರ್‌ಎಸ್‌ಎಸ್‌ ಉದ್ದೇಶ. ಪಠ್ಯಪುಸ್ತಕ ಪರಿಷ್ಕರಣೆಗೂ ಅದಕ್ಕೂ ಗಂಟು ಹಾಕಬಾರದು’ಎಂದರು.

ADVERTISEMENT

'ಹೊಸ ಪಠ್ಯಕ್ರಮದಲ್ಲಿ ಏನಾದರೂ ಸಮಸ್ಯೆಗಳಿದ್ದರೆ, ಅಭ್ಯಂತರಗಳಿದ್ದರೆ ಖಂಡಿತ ಪರಿಶೀಲಿಸಲಾಗುವುದು. ಮುಖ್ಯವಾಗಿ, ಯಾವುದೇ ಸಮುದಾಯ ಅಥವಾ ವ್ಯಕ್ತಿಗತ ಭಾವನೆಗಳಿಗೆ ಧಕ್ಕೆ ಆಗುವ ಸಂಗತಿ ಇದ್ದರೆ ಅದನ್ನು ಕಾಳಜಿಯಿಂದ ಪರಿಶೀಲಿಸಲಾಗುವುದು. ಜನಪರವಾಗಿ ಇರಬೇಕಾದದ್ದು ಸರ್ಕಾರದ ಜವಾಬ್ದಾರಿ. ಎಲ್ಲರ ಸಲಹೆ, ಸೂಚನೆ ಪರಿಗಣಿಸುತ್ತೇವೆ' ಎಂದರು.

'ಯಾವುದೇ ಸಮುದಾಯದಲ್ಲಿ ಒಡಕು ಮೂಡಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರ ಭಾವನೆಗಳಿಗೂ ಗೌರವ ನೀಡಲಾಗುವುದು. ಆದರೆ, ಸಮಾಜದಲ್ಲಿ ಗೊಂದಲ ಮೂಡಿಸಲು ಅಥವಾ ಕಾನೂನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲ. ಇಂಥ ಕೆಲಸ ಮಾಡಿದರೆ ಪೊಲೀಸರು ಸೂಕ್ತ ಕ್ರಮ ವಹಿಸಲಿದ್ದಾರೆ' ಎಂದು ಹೇಳಿದರು.

'ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಯಾವುದೇ ಒಬ್ಬ ವ್ಯಕ್ತಿಯನ್ನು ಹೊಣೆ ಮಾಡುವಂತಿಲ್ಲ. ಅದಕ್ಕಾಗಿ ಒಂದು ಸಮಿತಿ ಮಾಡಿದ್ದರಿಂದ ಎಲ್ಲ ಸಂಗತಿಗಳು ಸಮಿತಿಗೆ ಸಂಬಂಧಿಸಿದವು. ವ್ಯಕ್ತಿಗತ ಚರ್ಚೆಗಿಂತ ವಿಚಾರ ಆಧರಿತ ವಿಷಯಗಳನ್ನು ಪಠ್ಯದಲ್ಲಿ ಅಳವಡಿಸಲಾಗಿದೆ' ಎಂದರು.

'ಕೆಲವು ಕೋಮುವಾದಿಗಳು ವಿನಾಕಾರಣ ಸಮುದಾಯದಲ್ಲಿ ಗೊಂದಲ ಮೂಡಿಸಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಯತ್ನ ನಡೆಸಿದ್ದಾರೆ. ಆದರೆ, ನಾವು ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲಿ ಮಾಡಿದ್ದೇವೆ' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಓದಿ...ಆರ್‌ಎಸ್‌ಎಸ್ ಸಂಸ್ಥಾಪಕಹೆಡಗೇವಾರ್ಪಠ್ಯ ಕೈಬಿಡುವುದಿಲ್ಲ: ಸಿಎಂಬೊಮ್ಮಾಯಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.