ADVERTISEMENT

ಪಠ್ಯದಿಂದ ‘ಸಂವಿಧಾನ ಶಿಲ್ಪಿ’ ಪದಕ್ಕೆ ಕೊಕ್‌: ಡಿ.ಕೆ. ಶಿವಕುಮಾರ್ ಕಿಡಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2022, 19:31 IST
Last Updated 5 ಜೂನ್ 2022, 19:31 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘9ನೇ ತರಗತಿ ಸಮಾಜ ವಿಜ್ಞಾನದ‌ ‘ನಮ್ಮ ಸಂವಿಧಾನ’ ಪಾಠದಲ್ಲಿ ಸಂವಿಧಾನ ರಚನೆಗೆ ಅಂಬೇಡ್ಕರ್‌ರ ಕೊಡುಗೆ ಆಧರಿಸಿ 'ಸಂವಿಧಾನ ಶಿಲ್ಪಿ' ಎಂದು ಕರೆಯಲಾಗಿದೆ ಎಂದಿತ್ತು. ಈ ವಾಕ್ಯವನ್ನು ಪರಿಷ್ಕರಣೆ ವೇಳೆ ತೆಗೆಯಲಾಗಿದೆ. ಅಂಬೇಡ್ಕರ್ ಕುರಿತ ಇನ್ನೂ ಹಲವು ಅಂಶಗಳನ್ನೂ ತೆಗೆಯಲಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪಠ್ಯ ಪರಿಷ್ಕರಣೆಯ ಪ್ರಮಾದಗಳಿಗೆ ಬಿಜೆಪಿ ಸರ್ಕಾರವೇ ಕಾರಣ. ಬಸವಣ್ಣ, ಕುವೆಂಪು, ಬುದ್ಧ, ನಾರಾಯಣ ಗುರು, ಮಹಾವೀರ ಜೈನ್, ಭಗತ್ ಸಿಂಗ್ ಮುಂತಾದ ಮಹಾನ್‌ ನಾಯಕರ ವಿಚಾರಗಳನ್ನು ಸರ್ಕಾರ ಕೈಬಿಟ್ಟಿದೆ, ಇಲ್ಲವೇ ತಿರುಚಿದೆ. ಇದರಿಂದ ಸರ್ಕಾರದ ಮನಸ್ಥಿತಿ, ಮುಖವಾಡ ಬಯಲಾಗಿದೆ’ ಎಂದರು.

‘6ನೇ ತರಗತಿ ಪಠ್ಯಪುಸ್ತಕದಲ್ಲಿದ್ದ ಚನ್ನಣ್ಣ ವಾಲೀಕಾರ ಅವರು ಬರೆದಿದ್ದ 'ನೀ ಹೋದ ಮರುದಿನ' ಎಂಬ ಅಂಬೇಡ್ಕರ್‌ ಬಗೆಗಿನ ಕವಿತೆ ತೆಗೆಯಲಾಗಿದೆ. 7ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಅಂಬೇಡ್ಕರ್ ಅವರ ತಂದೆ, ತಾಯಿ ಹೆಸರು, ಹುಟ್ಟಿದ ಸ್ಥಳ,
ದಿನಾಂಕವಿತ್ತು. ಅದನ್ನೂ ತೆಗೆಯಲಾಗಿದೆ. ಅದೇ ಭಾಗದಲ್ಲಿ ಅಂಬೇಡ್ಕರ್‌ರವರ ಹೋರಾಟಗಳಾಗಿದ್ದ ಮಹಾಡ್ ಸತ್ಯಾಗ್ರಹ ಹಾಗೂ ಕಾಲಾರಾಂ ದೇಗುಲ ಪ್ರವೇಶ ಹೋರಾಟಗಳ ಪ್ರಸ್ತಾಪವನ್ನೂ ತೆಗೆದು ಹಾಕಲಾಗಿದೆ’ ಎಂದರು.

ADVERTISEMENT

‘ಗೌರವವಾಗಿ ಕಾಣುತ್ತಿದ್ದ ಮಹನೀಯರನ್ನು ಪಠ್ಯದಲ್ಲಿ ಸಾಮಾನ್ಯರಂತೆ ಬಿಂಬಿಸಲಾಗಿದೆ. ರಾಮಾಯಣ ನೀಡಿದ ವಾಲ್ಮೀಕಿ ಸಮುದಾಯವನ್ನು ಕೀಳಾಗಿ ಕಾಣಲಾಗಿದೆ. ತಮ್ಮ ಸಮಾಜದ ಗೌರವ, ಸ್ವಾಭಿಮಾನ ಕಾಪಾಡಿಕೊಳ್ಳಲು ಮುಂದಿನ ದಿನಗಳಲ್ಲಿ ಎಲ್ಲ ಧರ್ಮಗಳ ಸಂಘಟನೆಗಳು, ಸ್ವಾಮೀಜಿಗಳು, ಮುಖಂಡರು ಧ್ವನಿ ಎತ್ತಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.