ಬೆಂಗಳೂರು: ‘ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕೋಮು ವೈರಸ್ ತುಂಬುವ ಪ್ರಯತ್ನ ನಡೆಸುತ್ತಿದೆ’ ಎಂದು ಕವಿ ಎಸ್.ಜಿ.ಸಿದ್ದರಾಮಯ್ಯ ದೂರಿದರು.
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್‌ಇಸಿ) ಬುಧವಾರ ಇಲ್ಲಿ ಆಯೋಜಿಸಿದ್ದ ಪಠ್ಯಪುಸ್ತಕ ತಿರುಚುವಿಕೆ ವಿರೋಧಿಸಿ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಆರ್‌ಎಸ್‌ಎಸ್ ಶಾಖೆಗಳಲ್ಲಿ ಕಲಿಸುವುದನ್ನು ಶಾಲಾ ವಿದ್ಯಾರ್ಥಿಗಳಿಗೆ ಕಲಿಸಬೇಕೆ’ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ‘ಬಿಜೆಪಿ ಸರ್ಕಾರವು ದ್ವೇಷ ಬಿತ್ತುವ ಕೆಲಸಕ್ಕೆ ಮುಂದಾಗಿದೆ’ ಎಂದು ಆಪಾದಿಸಿದರು.
‘ವಿಷವರ್ತುಲದಲ್ಲಿ ಸಿಲುಕಿದ್ದೇವೆ. ವ್ಯವಸ್ಥೆಯ ಹಿತಕ್ಕಾಗಿ ಸತ್ಯವನ್ನು ಮಾತನಾಡಬೇಕಿದ್ದು, ಹೋರಾಟವು ಗುರಿ ಮುಟ್ಟುವ ತನಕ ಸ್ಥಗಿತವಾಗದು. ಸಂವಿಧಾನಬದ್ಧವಾಗಿ ಪಠ್ಯಪುಸ್ತಕ ಪರಿಷ್ಕರಣೆ ನಡೆದಿಲ್ಲ. ಬದಲಿಗೆ ಆರ್‌ಎಸ್‌ಎಸ್ ಶಾಖೆಯ ಸೂಚನೆಯಂತೆ ಪರಿಷ್ಕರಿಸಲಾಗಿದೆ. ಮಠಾಧೀಶರು, ಧ್ವನಿಯೆತ್ತಿದ ಮೇಲೆ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ವಿಸರ್ಜಿಸಿರುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಕಣ್ಣೊರೆಸುವ ತಂತ್ರದ ಬದಲಿಗೆ ವಿದ್ಯಾರ್ಥಿಗಳಿಗೆ ಹಳೇ ಪಠ್ಯಪುಸ್ತಕವನ್ನೇ ವಿತರಿಸಬೇಕು’ ಎಂದು ಆಗ್ರಹಿಸಿದರು.
ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿ, ‘ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು 10 ದಲಿತ ಕವಿಗಳ ಪಾಠಕ್ಕೆ ಕತ್ತರಿ ಹಾಕಿ ಬ್ರಾಹ್ಮಣರು ಬರೆದ ಪಾಠ ಸೇರಿಸಿದೆ. ಮುಸ್ಲಿಂ ಲೇಖಕರ ಪಾಠಗಳೂ ಮಾಯವಾಗಿವೆ. ಸಮಿತಿಯಲ್ಲೂ 9 ಮಂದಿ ಬ್ರಾಹ್ಮಣರಿದ್ದಾರೆ. ಇತಿಹಾಸದ ಅರಿವಿಲ್ಲದ ವ್ಯಕ್ತಿಯನ್ನು ಪರಿಷ್ಕರಣೆ ಸಮಿತಿಗೆ ನೇಮಕ ಮಾಡಿದ್ದೇ ದುರಂತ’ ಎಂದು ಬೇಸರ ವ್ಯಕ್ತಪಡಿಸಿದರು.
‘ರಾಜ್ಯದಲ್ಲಿ ಗುಲಾಮಗಿರಿಯ ಸರ್ಕಾರವಿದೆ. ಕೇಶವಕೃಪಾದ ಸಂದೇ ಶಕ್ಕೆ ತಕ್ಕಂತೆ ಆದೇಶಗಳು ಬರುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಮಹಾನ್ ಸುಳ್ಳುಗಾರ’ ಎಂದು ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಅವರು ಆಪಾದಿಸಿದರು.
ಶಿಕ್ಷಣ ತಜ್ಞ ಡಾ.ವಿ.ಪಿ.ನಿರಂಜನಾರಾಧ್ಯ ಮಾತನಾಡಿ, ‘ಬದಲಾವಣೆಯನ್ನು ಯಾರೂ ನಿರಾಕರಿಸುತ್ತಿಲ್ಲ. ಪರಿಷ್ಕರಣೆಯು ಸಂವಿಧಾನಬದ್ಧವಾಗಿ ಇರಬೇಕು ಎಂಬುದು ಒತ್ತಾಸೆ. ಎಲ್ಲರೂ ಒಪ್ಪುವಂತೆ ಪರಿಷ್ಕರಣೆ ಮಾಡಬೇಕಿತ್ತು’ ಎಂದು ಅವರು ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ.ಎ.ಮುರಿಗೆಪ್ಪ, ‘ಸಾಹಿತಿಗಳು, ಚಿಂತಕರು ಸರ್ಕಾರದ ನಡೆಯನ್ನು ಖಂಡಿಸಬೇಕು. ಮಾತ ನಾಡುವ ಕಾಲ ಬಂದಿದ್ದು ಈಗ ಮೌನ ವಹಿಸುವುದು ಸರಿಯಲ್ಲ. ಪ್ರಶ್ನಿಸದಿದ್ದರೆ ಎಲ್ಲ ಮಹನೀಯರ ಪಠ್ಯಗಳೂ ಮಾಯವಾಗಲಿವೆ’ ಎಂದು ಪಠ್ಯಪುಸ್ತಕದ ಪರಿಷ್ಕರಣೆಯ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಪತ್ರಕರ್ತ ಬಿ.ಎಂ.ಹನೀಫ್ ಮಾತನಾಡಿ, ಸತ್ಯವನ್ನು ಮರೆಮಾಚಿ ಸುಳ್ಳುಗಳನ್ನು ಹೇರುವ ಪ್ರಯತ್ನವು ನಡೆಯುತ್ತಿದೆ ಎಂದು ಹೇಳಿದರು.
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಉಪಾಧ್ಯಕ್ಷ ವಿ.ಎನ್.ರಾಜಶೇಖರ್, ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಹಾಗೂ ಅಜಯ್ ಕಾಮತ್ ಹಾಜರಿದ್ದರು.
ಶೀಘ್ರವೇ ಪರಿಷ್ಕೃತ ಪಠ್ಯ ಪೂರೈಕೆ: ನಾಗೇಶ್
ಧಾರವಾಡ: ‘ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ತಪ್ಪುಗಳಾಗಿದ್ದು, ಅವುಗಳನ್ನು ಒಪ್ಪಿಕೊಂಡು ಪರಿಷ್ಕರಣೆ ಮಾಡಲಾಗುತ್ತಿದೆ. ಆಗಿರುವ ಲೋಪದೋಷಗಳನ್ನು ಸರಿಪಡಿಸಿ, ಆದಷ್ಟು ಬೇಗ ಪರಿಷ್ಕೃತ ಪಠ್ಯಪುಸ್ತಕ ಪೂರೈಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಶೇ 80ರಷ್ಟು ಪರಿಷ್ಕೃತ ಪಠ್ಯ ಪುಸ್ತಕಗಳನ್ನು ಕೊಡಲಾಗಿದೆ. ಇನ್ನೊಂದು ತಿಂಗಳಲ್ಲಿ ಉಳಿದ ಎಲ್ಲ ಶಾಲೆಗಳಿಗೂ ಪುಸ್ತಕಗಳನ್ನು ಒದಗಿಸಲಾಗುವುದು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಈ ಬಾರಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಿದ್ದೇವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ 27 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.