ಬೆಂಗಳೂರು: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪರಿಷ್ಕರಣಾ ಸಮಿತಿಯು 7 ನೇ ತರಗತಿ ಸಮಾಜ ವಿಜ್ಞಾನದ ಭಾಗ–1 ರಲ್ಲಿದ್ದ ಸಂತ ಶಿಶುನಾಳ ಶರೀಫರು, ಕನಕದಾಸರು, ಅಕ್ಕಮಹಾದೇವಿ ಮತ್ತು ಪುರಂದರ ದಾಸರ ವಿವರಗಳನ್ನು ತೆಗೆದುಹಾಕಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ.
ಬರಗೂರು ರಾಮಚಂದ್ರಪ್ಪ ನೇತೃತ್ವದ ಪರಿಷ್ಕರಣಾ ಸಮಿತಿ ಇದರಲ್ಲಿ ‘ಭಕ್ತಿಪಂಥ ಮತ್ತು ಸೂಫಿ ಪರಂಪರೆ’ ಎಂಬ ಪಾಠವನ್ನು ಸೇರಿಸಿತ್ತು. ಚಕ್ರತೀರ್ಥ ಸಮಿತಿಯು 7 ನೇ ತರಗತಿಯಲ್ಲಿದ್ದ ಇಡೀ ಪಾಠವನ್ನೇ ಕೈಬಿಟ್ಟಿದೆ. 6 ನೇ ತರಗತಿಯ ಸಮಾಜ ವಿಜ್ಞಾನ ಭಾಗ–2 ರಲ್ಲಿ ಚಕ್ರತೀರ್ಥ ಸಮಿತಿ ಭಕ್ತಿ ಪಂಥದ ಬಗ್ಗೆ ಪಾಠವೊಂದನ್ನು ಸೇರಿಸಿದ್ದರೂ ಅಲ್ಲಿ ಕರ್ನಾಟಕದವರಿಗೆ ಸ್ಥಾನವಿಲ್ಲ ಮತ್ತು ಇವರ ಬಗ್ಗೆ ಬರೆದಿಲ್ಲ.
9 ನೇ ತರಗತಿ ಸಮಾಜ ವಿಜ್ಞಾನ ಭಾಗ–2 ರಲ್ಲಿ ಎರಡೇ ವಾಕ್ಯದಲ್ಲಿ ಕನಕದಾಸರು ಮತ್ತು ಪುರಂದರದಾಸರ ಪ್ರಸ್ತಾಪವಿದೆ. ಬರಗೂರು ಪರಿಷ್ಕರಣೆಯ 9 ನೇ ತರಗತಿ ಸಮಾಜ ವಿಜ್ಞಾನ ಭಾಗ– 2 ರಲ್ಲಿ ಕನಕದಾಸರು, ಪುರಂದರ ದಾಸರು ಮತ್ತು ಶಿಸುನಾಳ ಶರೀಫರ ಬಗ್ಗೆ ಆಸಕ್ತಿದಾಯಕ ವಿವರಗಳಿದ್ದವು. ಅದನ್ನು ತೆಗೆದುಹಾಕಲಾಗಿದೆ. 6 ನೇ ತರಗತಿ ಮತ್ತು 9 ನೇ ತರಗತಿ ಪಠ್ಯಗಳಲ್ಲಿ ಉತ್ತರಭಾರತದ ಭಕ್ತಿ ಪಂಥದವರ ಬಗ್ಗೆ ಬರೆದು ಕರ್ನಾಟಕ ಭಕ್ತಿಪಂಥಕ್ಕೆ ಕತ್ತರಿ ಹಾಕಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.