ಬೆಂಗಳೂರು: ಪಠ್ಯಪುಸ್ತಕಗಳಲ್ಲಿ ಇರಬಹುದಾದ ಸೂಕ್ಷ್ಮ ಹಾಗೂ ಸಂಕೀರ್ಣ ವಿಷಯಗಳ ಕುರಿತು ಪರಿಶೀಲಿಸಿ ವರದಿ ನೀಡುವ ಉದ್ದೇಶಕ್ಕೆ ರಚಿಸಲಾಗಿದ್ದ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ, ಸರ್ಕಾರದ ಅಧಿಕೃತ ಆದೇಶ ಇಲ್ಲದೇ ಪರಿಷ್ಕರಣೆ ಮಾಡಿರುವುದು ಈಗ ಚರ್ಚೆಯ ಮುನ್ನೆಲೆಗೆ ಬಂದಿದೆ.
2022–23ನೇ ಸಾಲಿಗೆ ಪರಿಷ್ಕೃತ ಪಠ್ಯಪುಸ್ತಕಗಳನ್ನುಮುದ್ರಿಸಿ ವಿತರಿಸುವ ಬಗ್ಗೆ ಮಾರ್ಚ್ 9 ರಂದು ಶಿಕ್ಷಣ ಇಲಾಖೆ ಹೊರಡಿಸಿದ ಆದೇಶದಲ್ಲಿ, ‘ಪಠ್ಯಪುಸ್ತಕಗಳನ್ನು ಪರಿಷ್ಕೃತಗೊಳಿಸಿರುವುದಕ್ಕೆ ಘಟನೋತ್ತರ ಅನುಮತಿ ನೀಡಿ, ಮುದ್ರಿಸಲು ಸೂಚಿಸಲಾಗಿದೆ’ ಎಂಬ ಉಲ್ಲೇಖವಿದೆ. ಸರ್ಕಾರದ ಕೆಲಸವನ್ನೋ ಅಥವಾ ಕಾಮಗಾರಿಗೆ ಅನುದಾನ ಕೊಡಿಸಿಯೇ ತೀರುವೆಎಂಬ ವಿಶ್ವಾಸ ಇರುವ ಮುಖ್ಯಮಂತ್ರಿ ಅಥವಾ ಸಚಿವರು ಅಧಿಕೃತ ಆದೇಶ ಇಲ್ಲದೇ ಕೆಲಸ ಮಾಡಿಸುತ್ತಾರೆ. ಕೆಲಸ ಮುಗಿದ ಮೇಲೆ ಘಟನೋತ್ತರ ಅನುಮತಿ/ ಆದೇಶ ಹೊರಡಿಸುವ ಪರಿಪಾಟ ಇದೆ. ಮೌಖಿಕ ಸೂಚನೆ ಮೇರೆಗೆ ಪಠ್ಯಪುಸ್ತಕ ಪರಿಷ್ಕರಣೆಗೆ ಅವಕಾಶ ಕೊಟ್ಟು, ಬಳಿಕ ಆದೇಶ ಹೊರಡಿಸಿರುವುದು ತಕರಾರಿಗೆ ಕಾರಣವಾಗಿದೆ.
ಆಗಿದ್ದೇನು?: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದ ಎಸ್. ಸುರೇಶ್ ಕುಮಾರ್ ಅವರು, 2020ರ ಡಿಸೆಂಬರ್ 17ರಂದು ಶಿಕ್ಷಣ ಇಲಾಖೆಗೆ ಟಿಪ್ಪಣಿಯೊಂದನ್ನು ಕಳುಹಿಸಿದ್ದರು. ಅದರಲ್ಲಿ ‘ಆರನೇ ತರಗತಿಯ ಸಮಾಜ ವಿಜ್ಞಾನ ಭಾಗ–1ರ ಪುಟ ಸಂಖ್ಯೆ 82ರ ‘ಹೊಸಧರ್ಮಗಳು ಏಕೆ ಉದಯಿಸಿದವು’ ಎಂಬ ಶೀರ್ಷಿಕೆಯಡಿಯ ಎರಡು ಪ್ಯಾರಾಗಳು ಮತ್ತು ಪುಟ ಸಂಖ್ಯೆ 83ರ ಪ್ರಾರಂಭಿಕ ಆರು ಸಾಲುಗಳನ್ನು 2021–22ರ ಶೈಕ್ಷಣಿಕ ಸಾಲಿನಿಂದ ಎಲ್ಲ ಏಳು ಭಾಷೆಗಳ ಪಠ್ಯಪುಸ್ತಕಗಳಿಂದ ಕೈಬಿಡಲು ಹಾಗೂ 1ರಿಂದ 10 ನೇ ತರಗತಿಯ ಭಾಷಾ ವಿಷಯಗಳು, ಪರಿಸರ ಅಧ್ಯಯನ, 6ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ವಿಷಯಗಳಲ್ಲಿ ಇರಬಹುದಾದ ಸೂಕ್ಷ್ಮ/ ಸಂಕೀರ್ಣ ವಿಷಯಗಳನ್ನು ಕುರಿತು ಪರಿಶೀಲಿಸಿ ವರದಿ ನೀಡುವುದಕ್ಕೆ ಸಮಿತಿ ರಚಿಸಲು’ ಸೂಚಿಸಲಾಗಿತ್ತು. ಇದನ್ನು ಆಧರಿಸಿ, 2021ರ ಸೆಪ್ಟೆಂಬರ್ 9ರಂದು ಹೊರಡಿಸಿದ ಆದೇಶದಲ್ಲಿ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಒಂದು ತಿಂಗಳಿನಲ್ಲಿ ವರದಿ ಸಲ್ಲಿಸಲು ಆದೇಶಿಸಲಾಗಿತ್ತು.
ಸರ್ಕಾರದ ನಿಯಮಗಳ ಅನುಸಾರ, ವರದಿ ಸಲ್ಲಿಸಿದ ಬಳಿಕ ಪರಿಷ್ಕರಣೆ ಅಗತ್ಯವಿದ್ದಲ್ಲಿ ವಿಷಯ ತಜ್ಞರ ಸಮಿತಿ ರಚಿಸಬೇಕಾಗಿತ್ತು ಅಥವಾ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿಗೆ ಪರಿಷ್ಕರಣೆ ಮಾಡುವ ಬಗ್ಗೆ ಪ್ರತ್ಯೇಕ ಆದೇಶ ಹೊರಡಿಸಬೇಕಿತ್ತು. ಸದರಿ ಆದೇಶದಲ್ಲಿ ನಿಯಮ ಮತ್ತು ಷರತ್ತುಗಳನ್ನು ನೀಡಬೇಕಿತ್ತು. ಆ ಕೆಲಸ ಆಗಿಯೇ ಇಲ್ಲ ಎಂದು ಇಲಾಖೆ ಮೂಲಗಳು ಹೇಳಿವೆ.
ಮೌಖಿಕ ಆದೇಶವೇ ದಾರಿ: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಸಚಿವ ಸಂಪುಟ ರಚನೆಯಾದಾಗ ಬಿ.ಸಿ. ನಾಗೇಶ್ ಶಿಕ್ಷಣ ಸಚಿವರಾದರು. ‘2022ರ ಜನವರಿ 27ರಂದು ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡಾವಳಿಯಲ್ಲಿ 1ರಿಂದ 10ನೇ ತರಗತಿ ಕನ್ನಡ ಭಾಷೆ ಮತ್ತು 6 ರಿಂದ 10 ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಪಠ್ಯಪುಸ್ತಕಗಳನ್ನು ಸಮಿತಿ ಅಧ್ಯಕ್ಷರಾದ ರೋಹಿತ್ ಚಕ್ರತೀರ್ಥ ಹಾಗೂ ಪರಿಶೀಲನಾ ಸಮಿತಿಯವರು (ಪರಿಷ್ಕರಣಾ ಸಮಿತಿಯಲ್ಲ) ಪರಿಷ್ಕರಿಸಿರುತ್ತಾರೆ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
‘ಸಚಿವರು ಸಭೆಯಲ್ಲಿ ಸೂಚಿಸಿದಾಗ, ಮೌಖಿಕ ಸೂಚನೆ ಮೇರೆಗೆ ಪರಿಷ್ಕರಣೆ ಮಾಡಲಾಗದು. ಅದಕ್ಕೆ ಪ್ರತ್ಯೇಕ ಆದೇಶ ಹೊರಡಿಸಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದರು. ಆಗ, ಘಟನೋತ್ತರ ಅನುಮತಿ ಕೊಡಿಸುವ ಭರವಸೆ ಕೊಡಲಾಗಿತ್ತು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಈ ಕುರಿತು ಪ್ರತಿಕ್ರಿಯೆ ಪಡೆಯಲು ಸಚಿವ ನಾಗೇಶ್ ಹಾಗೂ ಹಿಂದಿನ ಸಚಿವ ಸುರೇಶ್ ಕುಮಾರ್ ಅವರಿಗೆ ಕರೆ ಮಾಡಿದರೆ ಅವರು ಕರೆ ಸ್ವೀಕರಿಸಲಿಲ್ಲ.
‘ಆಕ್ಷೇಪಣೆಗೆ ಉತ್ತರಿಸುವುದು ರೋಹಿತ್ ಹೊಣೆ’
‘ಪರಿಷ್ಕೃತ ಪಠ್ಯಪುಸ್ತಕದಲ್ಲಿರುವ ವಿಷಯಗಳಿಗೆ ಮುಂದಿನ ದಿನಗಳಲ್ಲಿ ಆಕ್ಷೇಪಣೆಗಳು ಬಂದಲ್ಲಿ ಉತ್ತರಿಸುವ ಜವಾಬ್ದಾರಿ ಸಮಿತಿ ಅಧ್ಯಕ್ಷರಾಗಿರುವ ರೋಹಿತ್ ಚಕ್ರತೀರ್ಥ ಅವರದ್ದಾಗಿರುತ್ತದೆ’ ಎಂದು ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
2022ರ ಮಾರ್ಚ್ 19ರಂದು ಹೊರಡಿಸಿದ ಆದೇಶ (ಸಂಖ್ಯೆ ಇಡಿ 52 ಪಿಎಂಸಿ 2021)ದಲ್ಲಿ, ‘ಕನ್ನಡ ಭಾಷೆ, ಪರಿಸರ ಅಧ್ಯಯನ ಮತ್ತು ಸಮಾಜ ವಿಜ್ಞಾನ ವಿಷಯದ ಪರಿಷ್ಕೃತ ಪಠ್ಯಪುಸ್ತಕಗಳಲ್ಲಿರುವ ಎಲ್ಲ ವಿಷಯಾಂಶಗಳು, ಲೇಖಕರು/ಕವಿಗಳು, ಚಿತ್ರಗಳು, ಭೂಪಟಗಳು, ನಕ್ಷೆಗಳು ಹಾಗು ಆಧಾರಗಳಿಗೆ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಜವಾಬ್ದಾರರಾಗಿದ್ದು , ಪಠ್ಯಪುಸ್ತಕಗಳಲ್ಲಿರುವ ವಿಷಯಗಳಿಗೆ ಮುಂದಿನ ದಿನಗಳಲ್ಲಿ ಆಕ್ಷೇಪಣೆ ಬಂದಲ್ಲಿ ರೋಹಿತ್ ಚಕ್ರತೀರ್ಥ, ಸಮಿತಿ ಅಧ್ಯಕ್ಷರು ಉತ್ತರಿಸುವ ಜವಾಬ್ದಾರಿ ಹೊಂದಿರುತ್ತಾರೆ’ ಎಂದಿದೆ.
ಅಂತರ್ಜಾಲದಲ್ಲಿ ಕಾಣದ ಆದೇಶಗಳು!
ಪಠ್ಯಪುಸ್ತಕ ಪರಿಷ್ಕರಣೆ, ಪರಿಶೀಲನಾ ಸಮಿತಿ ರಚನೆ, ಪುಸ್ತಕ ವಿತರಣೆಗೆ ಸಂಬಂಧಪಟ್ಟ ಯಾವುದೇ ಆದೇಶಗಳು ‘ಕರ್ನಾಟಕ ಪಠ್ಯಪುಸ್ತಕ ಸಂಘ’ದ ಅಂತರ್ಜಾಲ ತಾಣದಲ್ಲಿ ಇಲ್ಲ.
ಈ ಕುರಿತು ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಆದೇಶ, ಸುತ್ತೋಲೆಗಳು ಸಾರ್ವಜನಿಕರಿಗೆ ಲಭ್ಯವಾಗುವಂತೆ ಅಂತರ್ಜಾಲದಲ್ಲಿ ಅಪ್ ಲೋಡ್ ಮಾಡುವ ಪದ್ಧತಿ ಇತ್ತು. ಪರಿಷ್ಕೃತ ಪಠ್ಯಪುಸ್ತಕದ ಮುದ್ರಣಕ್ಕೆ ಆಹ್ವಾನಿಸಿದ ಟೆಂಡರ್ ದಾಖಲೆಗಳೂ ಇಲ್ಲ. ಈ ಎಲ್ಲವನ್ನೂತೆಗೆದುಹಾಕಿರುವುದು ಸಂಶಯಕ್ಕೆ ಕಾರಣವಾಗಿದೆ.
‘ಪುಸ್ತಕ ವಿತರಿಸುವ ನೈತಿಕತೆಯೇ ಸರ್ಕಾರಕ್ಕೆ ಇಲ್ಲ’
‘ಪರಿಷ್ಕೃತ ಪಠ್ಯಕ್ಕೆ ಆಕ್ಷೇಪಣೆ ಬಂದಲ್ಲಿ ಉತ್ತರ ನೀಡುವ ಹೊಣೆ ರೋಹಿತ್ ಚಕ್ರತೀರ್ಥ ಅವರದ್ದುಎಂದು ಸರ್ಕಾರದ ಆದೇಶವೇ ಹೇಳಿರುವಾಗ ಶಾಲಾ ಹಂತದಲ್ಲಿ ವಿತರಿಸುವ ನೈತಿಕತೆಯೇ ಸರ್ಕಾರಕ್ಕೆ ಇಲ್ಲ’ ಎಂದು ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಅವರು ಪ‍್ರತಿಪಾದಿಸಿದ್ದಾರೆ.
‘ಪರಿಷ್ಕೃತ ಪಠ್ಯಪುಸ್ತಕಗಳನ್ನು ಮುಖ್ಯಮಂತ್ರಿ ಹಾಗೂ ಸಚಿವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಪುಸ್ತಕಗಳಲ್ಲಿನ ಪರಿಷ್ಕರಿಸಲಾದ ಅಂಶಗಳ ಬಗ್ಗೆ ಸರ್ಕಾರ ಜವಾಬ್ದಾರಿಯನ್ನೇ ತೆಗೆದುಕೊಳ್ಳದೇ ಇರುವುದು ಘಟನೋತ್ತರ ಆದೇಶದಲ್ಲಿ ಸ್ಪಷ್ಟವಾಗಿದೆ. ಈ ಹೊಣೆಯನ್ನು ಮುಖ್ಯಮಂತ್ರಿಯವರೇ ಹೊರಬೇಕು. ಆದೇಶದಲ್ಲಿ ಹೇಳಿರುವುದು ಸರಿಯಿಲ್ಲ ಎಂದಾದರೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲಿ’ ಎಂದು ಅವರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.