ADVERTISEMENT

ನೂತನ ಜವಳಿ ನೀತಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 22:23 IST
Last Updated 18 ಆಗಸ್ಟ್ 2022, 22:23 IST
ಹೊಸ ಜವಳಿ ನೀತಿಯನ್ನು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಬಿಡುಗಡೆ ಮಾಡಿದರು. ಇಂಡಿಯನ್ ಡಿಸೈನ್‌ನ ವ್ಯವಸ್ಥಾಪಕ ನಿರ್ದೇಶಕ ನಾಸೀರ್ ಹುಮಾಯನ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಪಂಕಜಕುಮಾರ್ ಪಾಂಡೆ, ಕೈಮಗ್ಗ ಮತ್ತು ಜವಳಿ ಇಲಾಖೆಯ ಆಯುಕ್ತ ಎಚ್‌ಟಿಎಂ ಕುಮಾರ್ ಇದ್ದರು –ಪ್ರಜಾವಾಣಿ ಚಿತ್ರ
ಹೊಸ ಜವಳಿ ನೀತಿಯನ್ನು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಬಿಡುಗಡೆ ಮಾಡಿದರು. ಇಂಡಿಯನ್ ಡಿಸೈನ್‌ನ ವ್ಯವಸ್ಥಾಪಕ ನಿರ್ದೇಶಕ ನಾಸೀರ್ ಹುಮಾಯನ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಪಂಕಜಕುಮಾರ್ ಪಾಂಡೆ, ಕೈಮಗ್ಗ ಮತ್ತು ಜವಳಿ ಇಲಾಖೆಯ ಆಯುಕ್ತ ಎಚ್‌ಟಿಎಂ ಕುಮಾರ್ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‌ಕಲ್ಯಾಣ ಕರ್ನಾಟಕದಲ್ಲಿ ಸ್ಥಾಪನೆಯಾಗುವ ಸಿದ್ಧ ಉಡುಪು ತಯಾರಿಕಾ ಘಟಕಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಹೊಸ ಜವಳಿ ನೀತಿಯಲ್ಲಿ ಈ ಅಂಶವನ್ನು ಪ್ರಕಟಿಸಿದೆ.

ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳಜಿಲ್ಲೆಯಲ್ಲಿನ ಸಿದ್ಧ ಉಡುಪು ತಯಾರಿಕಾ ಘಟಕಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನೀಡುವ ವೇತನ ಪ್ರೋತ್ಸಾಹ ಧನವನ್ನು ₹1500ರಿಂದ ₹3 ಸಾವಿರಕ್ಕೆ ಹೆಚ್ಚಿಸಲಾಗಿದೆ. ರಾಜ್ಯದ ಇತರೆಡೆಯ ಘಟಕಗಳಲ್ಲಿನ ಕಾರ್ಮಿಕರ ವೇತನ ಪ್ರೋತ್ಸಾಹಧನವನ್ನು ₹1 ಸಾವಿರದಿಂದ ₹2 ಸಾವಿರಕ್ಕೆ ಹೆಚ್ಚಳ ಮಾಡಿದೆ.

ಈ ನೀತಿ ಬಗ್ಗೆ ಉದ್ಯಮಿಗಳೊಂದಿಗೆ ಗುರುವಾರ ಸಂವಾದ ನಡೆಸಿದ ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ‘ಜವಳಿ ಉದ್ಯಮಕ್ಕೆ ಪ್ರೋತ್ಸಾಹ ನೀಡಲು ಹೊಸ ನೀತಿ ಪ್ರಕಟಿಸಲಾಗಿದೆ. ಬದಲಾವಣೆ ಬಯಸಿ ಸಲಹೆಗಳನ್ನು ನೀಡಿದರೆ ಪರಿಶೀಲನೆ ನಡೆಸಲು ಸರ್ಕಾರ ಸಿದ್ಧವಿದೆ’ ಎಂದರು.

ADVERTISEMENT

₹1,518 ಕೋಟಿ ಹೂಡಿಕೆಗೆ ಒಪ್ಪಂದ
ಹೊಸ ನೀತಿ ಜಾರಿಗೆ ಬಂದ ಕೂಡಲೇ ಜವಳಿ ಉದ್ಯಮದಲ್ಲಿ ₹‌1,518 ಕೋಟಿ ಬಂಡವಾಳ ಹೂಡಲು ಸಿದ್ಧ ಉಡುಪು ತಯಾರಿಕಾ ಕಂಪನಿಗಳು ಮುಂದೆ ಬಂದಿದ್ದು, ಈ ಪೈಕಿ ನಾಲ್ಕು ಕಂಪನಿಗಳು ಗುರುವಾರ ಒಡಂಬಡಿಕೆ ಮಾಡಿಕೊಂಡವು.

₹20 ಕೋಟಿ ಬಂಡವಾಳ ಹೂಡಿ 2 ಸಾವಿರ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ಗೋಕುಲ್ ದಾಸ್ ಎಕ್ಸ್‌ಪೋರ್ಟ್ ಪ್ರೈವೇಟ್ ಲಿಮಿಟೆಡ್ ಘೋಷಿಸಿತು. ₹ 346 ಕೋಟಿ ಹೂಡಿಕೆ ಮಾಡಲಿರುವ ಮಂಜುಶ್ರೀ ಸ್ಪಿನ್‌ಟೆಕ್, 325 ಉದ್ಯೋಗ ಸೃಷ್ಟಿ ಮಾಡುವುದಾಗಿ ಪ್ರಕಟಿಸಿತು.

₹27 ಕೋಟಿ ಹೂಡಲು ಒಪ್ಪಂದ ಮಾಡಿಕೊಂಡ ಯಾರ್‌ಕಾರ್ ಫ್ಯಾಬ್ರಿಕ್, 100 ಜನರಿಗೆ ಉದ್ಯೋಗ ನೀಡುವುದಾಗಿ ತಿಳಿಸಿತು. ಟೆಕ್ಸ್‌ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ₹45 ಕೋಟಿ ಬಂಡವಾಳ ಹೂಡಿ 2 ಸಾವಿರ ಜನರಿಗೆ ಉದ್ಯೋಗ ಕಲ್ಪಿಸುವುದಾಗಿ ಪ್ರಕಟಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.