ಕೊರೊನಾ ಪ್ರತಿರೋಧಕ ಲಸಿಕೆ ಪಡೆಯುವಂತೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ‘ಪ್ರಜಾವಾಣಿ’ಗೆ ನಟಿ ಸಂಯುಕ್ತಾ ಹೊರನಾಡು ಅವರು ನೀಡಿದ್ದ ಹೇಳಿಕೆಯ ತಲೆಬರಹವನ್ನು ತಿರುಚಿದ ಕೆಲವು ಕಿಡಿಗೇಡಿಗಳು, ಹಾಗೆ ತಿರುಚಿದ ತಲೆಬರಹದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ, ಮಾನಹಾನಿ ಆಗುವ ರೀತಿಯಲ್ಲಿ ಅದನ್ನು ಬಳಸಿಕೊಂಡಿದ್ದಾರೆ. ಸಾಮಾಜಿಕ ಕಳಕಳಿಗಾಗಿ ನಡೆಸಿದ ಆಂದೋಲನಕ್ಕೆ ಮಸಿ ಬಳಿಯುವ ಯತ್ನವನ್ನೂ ಮಾಡಿದ್ದಾರೆ.
‘ನಾನು ಲಸಿಕೆ ಹಾಕಿಸಿಕೊಂಡೆ, ನೀವು?’ ಎಂದಿದ್ದ ತಲೆಬರಹದಿಂದ ‘ಲಸಿಕೆ’ ಎಂಬ ಪದವನ್ನು ಅಳಿಸಿಹಾಕಿ ಟ್ರೋಲ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ತಿರುಚಿದ ತಲೆಬರಹವಿರುವ ಚಿತ್ರಹಾಕಿದ ಕಿಡಿಗೇಡಿಗಳ ವಿರುದ್ಧ ಪತ್ರಿಕೆ ವತಿಯಿಂದ ‘ಮಾಹಿತಿ ತಂತ್ರಜ್ಞಾನ ನಿಯಮ’ಗಳ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥರ ಪತ್ತೆಗಾಗಿ ಪೊಲೀಸರಿಗೆ ದೂರನ್ನೂ ನೀಡಲಾಗುವುದು. ‘ಸಾಮಾಜಿಕ ಕಾಳಜಿಯಿಂದ ನೀಡಿದ ಹೇಳಿಕೆಯನ್ನು ತಿರುಚಿದ ಕಿಡಿಗೇಡಿಗಳ ವಿರುದ್ಧ ನಾನೂ ಕಾನೂನು ಕ್ರಮ ಕೈಗೊಳ್ಳಲಿದ್ದೇನೆ’ ಎಂದು ಸಂಯುಕ್ತಾ ಸಹ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.