ADVERTISEMENT

ತೆರಿಗೆ ಪಾಲು: ರಾಜ್ಯಕ್ಕೆ ₹6,498 ಕೋಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 9:13 IST
Last Updated 10 ಅಕ್ಟೋಬರ್ 2024, 9:13 IST
   

ನವದೆಹಲಿ: ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ತೆರಿಗೆ ಪಾಲಿನ ಕಂತಿನ ರೂಪದಲ್ಲಿ ₹6,498 ಕೋಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ ಹೋಲಿಸಿದರೆ ಬಿಜೆಪಿ ಆಡಳಿತವಿರುವ ಉತ್ತರದ ರಾಜ್ಯಗಳಿಗೆ ಬಿಡುಗಡೆಯಾಗಿರುವ ಮೊತ್ತ ಹೆಚ್ಚು ಇದೆ. 

ಕೇಂದ್ರವು 28 ರಾಜ್ಯಗಳಿಗೆ ಒಟ್ಟು ₹1,78,173 ಕೋಟಿ ಬಿಡುಗಡೆಗೊಳಿಸಿದೆ. ಇದರಲ್ಲಿ ಅಕ್ಟೋಬರ್‌ ತಿಂಗಳ 89,086 ಕೋಟಿ ಮುಂಗಡ ಕಂತು ಸಹ ಸೇರಿದೆ. 

15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ, ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆಯಲ್ಲಿ ಶೇ 41ರಷ್ಟನ್ನು ರಾಜ್ಯ ಸರ್ಕಾರಗಳಿಗೆ 14 ಕಂತುಗಳಲ್ಲಿ ಹಂಚಿಕೆ ಮಾಡಬೇಕಾಗುತ್ತದೆ. 

ADVERTISEMENT

‘ಮುಂಬರುವ ಹಬ್ಬದ ಋತುವಿನ ದೃಷ್ಟಿಯಿಂದ ಮತ್ತು ರಾಜ್ಯ ಸರ್ಕಾರಗಳಿಗೆ ಅಭಿವೃದ್ಧಿ ಹಾಗೂ ಬಂಡವಾಳ ವೆಚ್ಚಕ್ಕೆ ಹೆಚ್ಚಿನ ಹಣ ತೊಡಗಿಸಲು ಅನುಕೂಲ ಮಾಡಲು ಈ ಕಂತು ಬಿಡುಗಡೆಗೊಳಿಸಲಾಗಿದೆ’ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ. 

2024–25ನೇ ಸಾಲಿನಲ್ಲಿ ರಾಜ್ಯಗಳಿಗೆ ತೆರಿಗೆ ಪಾಲಿನ ರೂಪದಲ್ಲಿ ₹12,19,783 ಕೋಟಿ ನೀಡಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಭಾಷಣದಲ್ಲಿ ತಿಳಿಸಿದ್ದರು. 

ತೆರಿಗೆ ಪಾಲು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಘೋರ ಅನ್ಯಾಯವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಸರ್ಕಾರವು ಕೇಂದ್ರ ಸರ್ಕಾರದ ವಿರುದ್ಧ‌ ಸಂಘರ್ಷಕ್ಕೆ ಇಳಿದಿತ್ತು. ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ‘ದೆಹಲಿ ಚಲೋ’ ನಡೆಸಿ ಬಿಜೆಪಿ ಸರ್ಕಾರದ ವಿರುದ್ಧ ತೊಡೆ ತಟ್ಟಿತ್ತು. ತೆರಿಗೆ ಪಾಲು ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಎಸಗಿಲ್ಲ. ಹಣಕಾಸು ಆಯೋಗದ ಶಿಫಾರಸಿನ ಪ್ರಕಾರವೇ ರಾಜ್ಯಗಳಿಗೆ ಅನುದಾನ ಹಾಗೂ ನೆರವು ನೀಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿತ್ತು. ಕೇರಳ ಹಾಗೂ ತಮಿಳುನಾಡು ಸರ್ಕಾರಗಳೂ ಕೇಂದ್ರದ ವಿರುದ್ಧ ಧ್ವನಿ ಎತ್ತಿದ್ದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.