ADVERTISEMENT

ಮೇಕೆದಾಟು ಯೋಜನೆ ಬಗ್ಗೆ ಮಧ್ಯಸ್ಥಿಕೆ ವಹಿಸಲ್ಲ ಎಂದ ಕೇಂದ್ರ ಸರ್ಕಾರ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2024, 14:58 IST
Last Updated 28 ಆಗಸ್ಟ್ 2024, 14:58 IST
<div class="paragraphs"><p>ಮೇಕೆದಾಟು</p></div>

ಮೇಕೆದಾಟು

   

ನವದೆಹಲಿ: ಮೇಕೆದಾಟು ಜಲವಿವಾದವನ್ನು ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮೂಲಕವೇ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ. ಉಭಯ ರಾಜ್ಯಗಳ ನಡುವೆ ಮಧ್ಯಸ್ಥಿಕೆ ವಹಿಸಿ ಮೇಕೆದಾಟು ವಿವಾದ ಬಗೆಹರಿಸಬೇಕು ಎಂಬ ಕರ್ನಾಟಕದ ಬೇಡಿಕೆಯನ್ನು ಕೇಂದ್ರ ಸರ್ಕಾರವು ತಳ್ಳಿ ಹಾಕಿದೆ. 

‘ಅಂತರ–ರಾಜ್ಯ ಜಲವಿವಾದ ಕಾಯ್ದೆ 1956ರ ಸೆಕ್ಷನ್‌ 6ರ ಅನ್ವಯ ಹಾಗೂ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಕೇಂದ್ರ ಸರ್ಕಾರವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ನೀರು ನಿಯಂತ್ರಣ ಸಮಿತಿಯನ್ನು 2018ರಲ್ಲಿ ಸ್ಥಾಪಿಸಿದೆ. ಈ ಸಮಿತಿಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೆರಿ ಪ್ರತಿನಿಧಿಗಳಿದ್ದಾರೆ. ಕಾವೇರಿ ಕಣಿವೆಯ ವಾಸ್ತವಾಂಶ ಪರಿಗಣಿಸಿ ಪ್ರಾಧಿಕಾರ ಹಾಗೂ ಸಮಿತಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತವೆ’ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ಸ್ಪಷ್ಟಪಡಿಸಿದೆ.

ADVERTISEMENT

ಮೇಕೆದಾಟು ವಿವಾದದ ವಿಷಯದಲ್ಲಿ ತಮಿಳುನಾಡಿನ ಮನವೊಲಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರು ‍ಪ್ರಧಾನಿ ಹಾಗೂ ಜಲಶಕ್ತಿ ಸಚಿವರಿಗೆ ಈಚೆಗೆ ಮನವಿ ಮಾಡಿದ್ದರು. ಕಾವೇರಿ ಜಲವಿವಾದ ಬಗೆಹರಿಸಲು ಸಂಧಾನ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆಯೇ ಎಂದು ಪ್ರಶ್ನಿಸಿ ತಮಿಳುನಾಡು ಸಂಸದ ಡಾ.ಡಿ.ರವಿಕುಮಾರ್ ಅವರು ಜಲಶಕ್ತಿ ಸಚಿವರಿಗೆ ಪತ್ರ ಬರೆದಿದ್ದರು. ಈ ಬಗ್ಗೆ ಕಾವೇರಿ ಪ್ರಾಧಿಕಾರವೇ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಚಿವರು ಪ್ರತಿಕ್ರಿಯಿಸಿದ್ದರು. 

ಮೇಕೆದಾಟು ಬಳಿ ಸಮತೋಲನ ಜಲಾಶಯ ನಿರ್ಮಿಸುವ ಉದ್ದೇಶದಿಂದ ಸಮಗ್ರ ಯೋಜನಾ ವರದಿ ತಯಾರಿಸಲು ಕೇಂದ್ರ ಜಲ ಆಯೋಗವು 2018ರ ಅಕ್ಟೋಬರ್‌ನಲ್ಲಿ ಒಪ್ಪಿಗೆ ನೀಡಿತ್ತು. ಆದರೆ, ಡಿಪಿಆರ್‌ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದಲೇ ಒಪ್ಪಿಗೆ ಪಡೆಯಬೇಕು ಎಂದು ಸೂಚಿಸಿತ್ತು. ಡಿಪಿಆರ್ ಅನ್ನು ಜಲ ಆಯೋಗಕ್ಕೆ ಕರ್ನಾಟಕ ಸರ್ಕಾರ 2019ರ ಜನವರಿಯಲ್ಲಿ ಸಲ್ಲಿಸಿತ್ತು. ಯೋಜನೆ ವಿರೋಧಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ 2022ರ ಜುಲೈನಲ್ಲಿ, ‘ಡಿಪಿಆರ್‌ ಕುರಿತು ಕಾವೇರಿ ಪ್ರಾಧಿಕಾರ ಚರ್ಚೆ ನಡೆಸಬಹುದು. ಆದರೆ, ಈ ಪ್ರಸ್ತಾವನೆ ಆಧಾರದಲ್ಲಿ ಅಧಿಕೃತವಾಗಿ ಯಾವುದೇ ಅಭಿಪ್ರಾಯಕ್ಕೆ ಬರುವಂತಿಲ್ಲ’ ಎಂದು ನಿರ್ದೇಶನ ನೀಡಿತ್ತು. ಹೀಗಾಗಿ, ಪ್ರಾಧಿಕಾರವು ಇದರ ಬಗ್ಗೆ ಚರ್ಚೆಯನ್ನೇ ನಡೆಸಿರಲಿಲ್ಲ. ಯೋಜನಾ ವರದಿಗೆ ಪ್ರಾಧಿಕಾರ ಒಪ್ಪಿಗೆ ನೀಡಬೇಕು ಎಂದು ಕರ್ನಾಟಕ ಸರ್ಕಾರ ಒತ್ತಡ ಹೇರಿತ್ತು. 

ಈ ವರ್ಷದ ಫೆಬ್ರುವರಿ 1ರಂದು ನಡೆದ ಪ್ರಾಧಿಕಾರದ ಸಭೆಯಲ್ಲಿ ಯೋಜನೆಯ ಕುರಿತು ವಿಸ್ತೃತ ಚರ್ಚೆ ನಡೆಸಿ ಡಿಪಿಆರ್ ಅನ್ನು ಜಲ ಆಯೋಗಕ್ಕೆ ಮರಳಿಸಲು ತೀರ್ಮಾನಿಸಲಾಗಿತ್ತು. ಈ ಯೋಜನೆಯ ಕಾರ್ಯಸಾಧ್ಯತೆ, ವಿವಿಧ ತಾಂತ್ರಿಕ ಹಾಗೂ ಆರ್ಥಿಕ ಅಂಶಗಳ ಬಗ್ಗೆ ಜಲ ಆಯೋಗ ಪರಿಶೀಲನೆ ನಡೆಸಬೇಕು ಎಂದು ‍ಪ್ರಾಧಿಕಾರ ಅಭಿಪ್ರಾಯಪಟ್ಟಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.