ಉಡುಪಿ: ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಶುಕ್ರವಾರಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಆದರೆ, ಕನ್ನಡ ಧ್ವಜಾರೋಹಣ ನಡೆಯಲಿಲ್ಲ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ‘ಬೇರೆ ಜಿಲ್ಲೆಗಳಲ್ಲಿ ಕನ್ನಡ ಹಾಗೂ ರಾಷ್ಟ್ರಧ್ವಜ ಹಾರಿಸಲಾಗುತ್ತಿದೆ. ಆದರೆ, ಉಡುಪಿಯಲ್ಲಿಹಿಂದಿನಿಂದಲೂ ಕನ್ನಡ ಧ್ವಜ ಹಾರಿಸುವ ರೂಢಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ಬಾರಿ ಕಡ್ಡಾಯವಾಗಿ ರಾಷ್ಟ್ರಧ್ವಜದ ಜತೆಗೆ ಕನ್ನಡ ಬಾವುಟವನ್ನೂ ಹಾರಿಸಬೇಕು ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದರು.
ಕನ್ನಡ ಬಾವುಟ ಹಾರಿಸದಂತೆ ಕೇಂದ್ರ ಸರ್ಕಾರದಿಂದ ಯಾವುದೇ ಸುತ್ತೋಲೆ ಬಂದಿಲ್ಲ. ಈ ವಿಚಾರದಲ್ಲಿ ಗೊಂದಲಗಳನ್ನು ಸೃಷ್ಟಿಸುವುದು ಬೇಡ ಎಂದು ಸಮಜಾಯಿಷಿ ನೀಡಿದರು.
69 ಅಕ್ರಮ ವಲಸಿಗರು:ರಾಜ್ಯದಲ್ಲಿ ಅಕ್ರಮ ವಲಸಿಗರ ಪತ್ತೆ ಕಾರ್ಯ ನಡೆಯುತ್ತಿದೆ. 300 ಮಂದಿಯನ್ನು ವಶಕ್ಕೆ ಪಡೆದು ದಾಖಲೆಗಳನ್ನು ಪರಿಶೀಲಿಸಲಾಗಿದ್ದು, 69 ಜನರ ಬಳಿ ಯಾವುದೇ ದಾಖಲೆಗಳು ಇಲ್ಲ. ಇವರೆಲ್ಲ ಅಕ್ರಮವಾಗಿ ದೇಶದ ಒಳನುಸುಳಿದ್ದಾರೆ. ಈ ಸಂಬಂಧ ಕೇಂದ್ರ ಗೃಹಸಚಿವರಿಗೆ ಮಾಹಿತಿ ನೀಡಿದ್ದು, ಮುಂದೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೊಮ್ಮಾಯಿ ವಿವರ ನೀಡಿದರು.
ಹೆಚ್ಚುವರಿ ಸೆನ್ ಠಾಣೆ: ಡಿಜಿಟಲ್ ಬ್ಯಾಂಕಿಂಗ್ ಬಳಕೆಯ ಪ್ರಮಾಣ ಹೆಚ್ಚಳ ಹಾಗೂ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ದೇಶದೆಲ್ಲೆಡೆ ಸೈಬರ್ ಅಪರಾಧಗಳು ಹೆಚ್ಚಾಗಿವೆ. ಈ ಸೈಬರ್ ಅಪರಾಧಗಳ ತಡೆಗೆ ಬೆಂಗಳೂರಿನಲ್ಲಿ ಹೆಚ್ಚುವರಿಯಾಗಿ 8 ಸೆನ್ ಠಾಣೆ ಹಾಗೂ ಪ್ರತಿ ಕಮಿಷನರೇಟ್ ವ್ಯಾಪ್ತಿಯಲ್ಲಿ ತಲಾ ಒಂದೊಂದು ಸೆನ್ ಠಾಣೆ ನಿರ್ಮಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.