ಬೆಂಗಳೂರು: ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ರೂಪಿಸುವ ಕಾರ್ಯವನ್ನು ಆಯೋಗ ಆರಂಭಿಸಿದ್ದು, ಶಾಲಾ ಹಾಗೂ ಉನ್ನತ ಶಿಕ್ಷಣ ಅನುಸರಿಸಿದ್ದ ಹಿಂದಿನ ಶಿಕ್ಷಣ ನೀತಿಗಳನ್ನು ಮೊದಲ ಹಂತದಲ್ಲಿ ಪರಿಶೀಲಿಸಲಿದೆ.
ಬೆಂಗಳೂರಿನಲ್ಲಿ ನಡೆಸಿದ ಎರಡು ದಿನಗಳ ಮೊದಲ ಸಭೆಯಲ್ಲಿ ಶಿಕ್ಷಣ ನೀತಿಯ ರೂಪುರೇಷೆಗಳ ಕುರಿತು ಚರ್ಚೆ ನಡೆದಿದೆ. ಕರ್ನಾಟಕದ ಶಿಕ್ಷಣ ಸ್ವರೂಪ ಕುರಿತು ವಿವಿಧ ವಿಷಯಗಳನ್ನು ಅಧ್ಯಯನ ಮಾಡಲು, ವರದಿಯನ್ನು ಸಿದ್ಧಪಡಿಸಲು ಹಾಗೂ ಎಲ್ಲ ಕೆಲಸಗಳು ಸುಸೂತ್ರವಾಗಿ ನೆರವೇರಿಸಲು 9 ಉಪ ಸಮಿತಿಗಳನ್ನು ರಚಿಸಲಾಗಿದೆ. ರಾಜ್ಯದ ಹೊಸ ಶಿಕ್ಷಣ ನೀತಿಯು ಎಲ್ಲ ವರ್ಗದ ಮಕ್ಕಳ ಭವಿಷ್ಯದ ಶಿಕ್ಷಣಕ್ಕೆ ಬುನಾದಿಯಾಗಲಿದೆ ಎಂದು ಎಸ್‌ಇಪಿ ಆಯೋಗದ ಅಧ್ಯಕ್ಷ ಸುಖದೇವ್ ಥೋರಟ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ರಾಜ್ಯ ಶಿಕ್ಷಣ ನೀತಿಯ ಕರಡು ರಚಿಸಲು ಸರ್ಕಾರ ನಮಗೆ ಆದೇಶ ನೀಡಿದೆ. ಮೊದಲ ಹಂತದಲ್ಲಿ ಶಾಲೆ ಮತ್ತು ಉನ್ನತ ಶಿಕ್ಷಣದ ಪ್ರಸ್ತುತ ಸ್ಥಿತಿಗತಿಗಳನ್ನು ಪರಿಶೀಲಿಸಲಾಗುವುದು. ರಾಜ್ಯದಲ್ಲಿನ ಒಟ್ಟಾರೆ ಶಿಕ್ಷಣದ ಸಾಧನೆಯನ್ನು ಪರಿಶೀಲಿಸಲಾಗುವುದು. ದಾಖಲಾತಿ, ಪ್ರವೇಶ, ಆಡಳಿತ ರಚನೆ, ಹಣಕಾಸು ಮತ್ತು ಧನಸಹಾಯ, ವೆಚ್ಚ, ಗುಣಮಟ್ಟದ ಶಿಕ್ಷಣ, ದೂರ ಶಿಕ್ಷಣ ಮತ್ತು ಆನ್‌ಲೈನ್ ಶಿಕ್ಷಣ, ಅಧ್ಯಾಪಕರು ಮತ್ತು ಮೌಲ್ಯ ಶಿಕ್ಷಣದಂತಹ ಅಂಶಗಳತ್ತ ಗಮನಹರಿಸಲಿದೆ’ ಎಂದು ವಿವರಿಸಿದರು.
ಸಾರ್ವಜನಿಕರು, ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಸೇರಿ ನಾಲ್ಕು ವಿಭಾಗಗಳಲ್ಲಿ ಸಮಾಲೋಚನೆ ನಡೆಸಲಾಗುವುದು. ನೀತಿಯ ಕುರಿತು ಅವರ ಜತೆ ಸಂವಹನ ನಡೆಸಿ, ಪ್ರತಿಕ್ರಿಯೆಗಳನ್ನು ದಾಖಲಿಸಲಾಗುವುದು. ಆಳವಾದ ಅಧ್ಯಯನ ಮತ್ತು ಸಂಶೋಧನೆಗೆ ಒತ್ತು ನೀಡಲಾಗುವುದು. ಸರ್ಕಾರದ ಸೂಚನೆಯಂತೆ ಬರುವ ಮಾರ್ಚ್ (2024) ಒಳಗೆ ವರದಿ ಸಲ್ಲಿಸುವ ಗುರಿ ಇಟ್ಟುಕೊಂಡು ಕೆಲಸ ಆರಂಭಿಸಿದ್ದೇವೆ. ಸಮಯದ ಅಗತ್ಯವಿದ್ದರೆ ವಿಸ್ತರಣೆ ಕೋರುತ್ತದೆ. ಆಯೋಗದ ಶಿಫಾರಸುಗಳು ಸಂಗ್ರಹಿಸುವ ದತ್ತಾಂಶ, ಸಮೀಕ್ಷೆ ಮತ್ತು ಸಂಶೋಧನೆಗಳನ್ನು ಆಧರಿಸಿರುತ್ತವೆ. ಸತ್ಯಾಂಶಗಳಿಗೆ ಮನ್ನಣೆ ನೀಡಲಾಗುವುದು, ಊಹೆಗಳಿಗೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.