ADVERTISEMENT

ಕೋವಿಡ್‌ ಕಾಲದಲ್ಲೂ ಆರ್ಥಿಕತೆಗೆ ವೇಗ: PES ಘಟಿಕೋತ್ಸವದಲ್ಲಿ ರಾಜೀವ್‌ ಚಂದ್ರಶೇಖರ್

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 18:16 IST
Last Updated 9 ಸೆಪ್ಟೆಂಬರ್ 2022, 18:16 IST
ಬೆಂಗಳೂರಿನಲ್ಲಿ ಶುಕ್ರವಾರ 'ಪಿಇಎಸ್ ವಿಶ್ವವಿದ್ಯಾಲಯ' ಆಯೋಜಿಸಿದ್ದ "7ನೇ ವಾರ್ಷಿಕ ಘಟಿಕೋತ್ಸವ" ಸಮಾರಂಭದಲ್ಲಿ ವಿವಿಧ ವಿಭಾಗಗಳಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳೊಂದಿಗೆ (ಕುಳಿತವರು ಎಡದಿಂದ) ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಕೆ.ಎಸ್ ಶ್ರೀಧರ್, ಕುಲಪತಿ ಡಾ.ಎಂ.ಆರ್‌ ದೊರೆಸ್ವಾಮಿ, ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್‌ ಚಂದ್ರಶೇಖರ್‌, ಸಹ ಕುಲಾಧಿಪತಿ ಪ್ರೊ.ಡಿ. ಜವಾಹರ್ ಮತ್ತು ಉಪಕುಲಪತಿ ಡಾ.ಜೆ ಸೂರ್ಯಪ್ರಸಾದ್ ಇದ್ದರು -ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಶುಕ್ರವಾರ 'ಪಿಇಎಸ್ ವಿಶ್ವವಿದ್ಯಾಲಯ' ಆಯೋಜಿಸಿದ್ದ "7ನೇ ವಾರ್ಷಿಕ ಘಟಿಕೋತ್ಸವ" ಸಮಾರಂಭದಲ್ಲಿ ವಿವಿಧ ವಿಭಾಗಗಳಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳೊಂದಿಗೆ (ಕುಳಿತವರು ಎಡದಿಂದ) ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಕೆ.ಎಸ್ ಶ್ರೀಧರ್, ಕುಲಪತಿ ಡಾ.ಎಂ.ಆರ್‌ ದೊರೆಸ್ವಾಮಿ, ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್‌ ಚಂದ್ರಶೇಖರ್‌, ಸಹ ಕುಲಾಧಿಪತಿ ಪ್ರೊ.ಡಿ. ಜವಾಹರ್ ಮತ್ತು ಉಪಕುಲಪತಿ ಡಾ.ಜೆ ಸೂರ್ಯಪ್ರಸಾದ್ ಇದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕೋವಿಡ್ 19 ಸಾಂಕ್ರಾಮಿಕ ಕಾಯಿಲೆಯು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಆರ್ಥಿಕ ಬೆಳವಣಿಗೆ ಹಾಗೂ ಸಾಮಾಜಿಕ ಜೀವನಕ್ಕೆ ಭಾರಿ ಹೊಡೆತ ನೀಡಿತು. ಆದರೆ, ಈ ಅವಧಿಯಲ್ಲಿ ನಮ್ಮ ದೇಶದ ಆರ್ಥಿಕತೆ ನಿರೀಕ್ಷೆಗಿಂತಲೂ ವೇಗವಾಗಿ ಬೆಳವಣಿಗೆಯಾಗುತ್ತಿದೆ’ ಎಂದು ಕೌಶಲಾಭಿವೃದ್ಧಿ ಹಾಗೂ ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದರು.

ಪಿಇಎಸ್ ವಿಶ್ವವಿದ್ಯಾಲಯ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ 7ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ, ಮಾತನಾಡಿದರು.

ವಿವಿಧ ವಿಭಾಗಗಳಲ್ಲಿ ಚಿನ್ನದ ಪದಕ ಪಡೆದ (ಎಡದಿಂದ) ಪಿ. ಜಯಮ್ಮ, ದೀಕ್ಷಾ ಎ. ಕುಮಾರ್, ಸೃಷ್ಟಿ ಜಯರಾಮು ಮತ್ತು ಮಯೂರ್ ಪಿ.ಎಲ್. ಪರಸ್ಪರ ಅಭಿನಂದಿಸಿದ ಕ್ಷಣ - ಪ್ರಜಾವಾಣಿ ಚಿತ್ರ/ ರಂಜು ಪಿ.

‘ಕೋವಿಡ್ ಬಳಿಕ ಭಾರತದ ಪ್ರಜಾಪ್ರಭುತ್ವ ಅತ್ಯಂತ ಕ್ರಿಯಾತ್ಮಕ ಪ್ರಜಾಪ್ರಭುತ್ವವಾಗಿದೆ. ಆರ್ಥಿಕತೆಯ ಹಲವು ವಲಯಗಳಲ್ಲಿ ಸಕಾರಾತ್ಮಕ ಬೆಳವಣಿಗೆ ಕಾಣಬಹುದಾಗಿದೆ. ಪ್ರಸಕ್ತ ಸಾಲಿನ ಏಪ್ರಿಲ್- ಜೂನ್ ತ್ರೈಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನವು ಶೇ 13.5ರಷ್ಟು ಬೆಳವಣಿಗೆಯಾಗಿದೆ. ಈ ಮೂಲಕ ಭಾರತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ.ಕೇಂದ್ರಸರ್ಕಾರವು ಮೂಲಸೌಕರ್ಯಗಳ ವೃದ್ಧಿಗೆ ₹ 10 ಲಕ್ಷ ಕೋಟಿ ಹೂಡಿಕೆ ಮಾಡಿದೆ. ಇದರಿಂದಾಗಿ ಯುವ ಪದವೀಧರರಿಗೆ ಯಶಸ್ವಿ ಉದ್ಯಮಿಗಳಾಗಲು ಅನುಕೂಲವಾಗುತ್ತದೆ’ ಎಂದು ಅವರು ಹೇಳಿದರು.

ADVERTISEMENT

‘ನವೋದ್ಯಮ ಪ್ರಾರಂಭಿಸುವುದು ಈ ಹಿಂದೆ ಸುಲಭವಾಗಿರಲಿಲ್ಲ. ಈಗ ಸರ್ಕಾರವೇ ಅಗತ್ಯ ನೆರವು ನೀಡಿ, ಪ್ರೋತ್ಸಾಹಿಸುತ್ತಿದೆ.ಮುಂದಿನ ದಶಕ ಭಾರತದ ದಶಕವಾಗಲಿದೆ’ ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎಂ.ಆರ್. ದೊರೆಸ್ವಾಮಿ, ‘ಪ್ರತಿಯೊಬ್ಬರ ಜೀವನದಲ್ಲೂ ತಾಯಿ, ಮಾತೃಭಾಷೆ ಹಾಗೂ ತಾಯ್ನಾಡು ಮಹತ್ವದ ಪಾತ್ರವಹಿಸ
ಲಿವೆ. ಆದ್ದರಿಂದ ಈ ಮೂರನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಈ ರಾಷ್ಟ್ರಕ್ಕೆ ಯುವಜನರು ದೊಡ್ಡ ಆಸ್ತಿ. ಅವರ ಮೇಲೆ ಹೆಚ್ಚಿನ ಜವಾಬ್ದಾರಿಗಳು ಹಾಗೂ ನಿರೀಕ್ಷೆಯಿದೆ. ಇದನ್ನು ಅರಿತು ಯುವಜನರು ಸಾಗಬೇಕು’ ಎಂದು ಹೇಳಿದರು.

‘ಗುಣಮಟ್ಟದ ಪಠ್ಯಕ್ರಮ, ಪಠ್ಯೇತರ ಚಟುವಟಿಕೆ ಅಳವಡಿಸಿಕೊಂಡು, ವಿದ್ಯಾರ್ಥಿಗಳ ಯಶಸ್ಸಿಗೆ ವಿಶ್ವವಿದ್ಯಾಲಯ ಪೂರಕ ವಾತಾವರಣ ನೀಡುತ್ತಿದೆ. ಇದರ ಜತೆಗೆ ಸಾಮಾಜಿಕ ಮೌಲ್ಯಗಳು, ನೈತಿಕ ಶಿಕ್ಷಣ ನೀಡುತ್ತಿದ್ದೇವೆ’ ಎಂದರು.

24 ಮಂದಿಗೆ ಚಿನ್ನದ ಪದಕ

ಪಿಇಎಸ್ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವದಲ್ಲಿ 3,495 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.ವಿವಿಧ ವಿಭಾಗಗಳಲ್ಲಿ ರ್‍ಯಾಂಕ್‌ ಪಡೆದ 92 ಅಭ್ಯರ್ಥಿಗಳಲ್ಲಿ 24 ಮಂದಿಗೆ ಚಿನ್ನದ ಪದಕವನ್ನುರಾಜೀವ್ ಚಂದ್ರಶೇಖರ್ ಪ್ರದಾನ ಮಾಡಿದರು.ನಾಲ್ವರಿಗೆ ಚಿನ್ನ ಲೇಪಿತ ಬೆಳ್ಳಿ ಪದಕ ಹಾಗೂ ಉಳಿದವರಿಗೆ ಬೆಳ್ಳಿ ಪದಕ ನೀಡಲಾಯಿತು.ದಿವ್ಯಾ ಜೋಸೆಫ್ ಪೆರೇರಾ, ಸಂತಮೀನಾ ಎಸ್., ರಾಜೇಂದ್ರ ಪ್ರಸಾದ್ ಕೆ.ಎಸ್. ಹಾಗೂ ಸುಚಿತ್ರಾ ಸಕ್ಸೆನಾ ಅವರಿಗೆ ಪಿಎಚ್‌.ಡಿ ಪ್ರದಾನ ಮಾಡಲಾಯಿತು.


‘ನವ ಬೆಂಗಳೂರಿಗೆ ನೀಲನಕ್ಷೆ’

‘ನವೋದ್ಯಮ, ತಂತ್ರಜ್ಞಾನ ಆಧಾರಿತ ಕಂಪನಿಗಳಿಗೆ ಬೆಂಗಳೂರು ಉತ್ತಮ ಆಯ್ಕೆ. ಇಲ್ಲಿ ಅಗತ್ಯ ಮೂಲಸೌಕರ್ಯವಿದೆ. ಮಳೆಯಿಂದ ಉಂಟಾದ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರ ಕ್ರಮ ವಹಿಸಿದೆ. ಬಿಲ್ಡರ್‌ಗಳು ಕಾನೂನು ಉಲ್ಲಂಘನೆ ಮಾಡಿದ್ದೇ ಸಮಸ್ಯೆಗೆ ಕಾರಣ. ನವ ಬೆಂಗಳೂರು ನಿರ್ಮಾಣದ ಬಗ್ಗೆ ತಜ್ಞರ ಜತೆಗೆ ಚರ್ಚಿಸಿ, ನೀಲ ನಕ್ಷೆ ತಯಾರಿಸಲಾಗುತ್ತಿದೆ.ಐಟಿ ಕಂಪನಿಗಳು ಬೆಂಗಳೂರನ್ನು ತೊರೆಯಬಾರದು’ ಎಂದುರಾಜೀವ್ ಚಂದ್ರಶೇಖರ್ ಮನವಿ ಮಾಡಿದರು.

***

ಕಾಲೇಜಿನಲ್ಲಿ ಕಲಿಕೆಗೆ ಉತ್ತಮ ವಾತಾವರಣ ಇದ್ದಿದ್ದರಿಂದಲೇ ರ‍್ಯಾಂಕ್ ಸಾಧ್ಯವಾಯಿತು. ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಸಿಕ್ಕಿದೆ

– ಸೃಷ್ಟಿ ಜಯರಾಮು, ಚಿನ್ನದ ಪದಕ ವಿಜೇತೆ

***

ಪ್ರಾಧ್ಯಾಪಕರು ಹಾಗೂ ಪಾಲಕರ ಪ್ರೋತ್ಸಾಹದಿಂದ ರ್‍ಯಾಂಕ್ ಪಡೆಯಲು ಸಾಧ್ಯವಾಯಿತು. ಚಿನ್ನದ ಪದಕ ದೊರೆತಿರುವುದು ಸಂತಸ ಮೂಡಿಸಿದೆ

– ದೀಕ್ಷಾ ಎ. ಕುಮಾರ್, ಚಿನ್ನದ ಪದಕ ವಿಜೇತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.