ಬೆಂಗಳೂರು: ದೇಶ– ವಿದೇಶಗಳ ಚಲನಚಿತ್ರ ನಿರ್ಮಾಪಕರನ್ನು ಕರ್ನಾಟಕಕ್ಕೆ ಸೆಳೆಯಲು ಮತ್ತು ರಾಜ್ಯ ವ್ಯಾಪಿ ಸಿನಿಮಾ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಪ್ರತ್ಯೇಕ ನೀತಿಯೊಂದನ್ನು ರೂಪಿಸಲು ಸರ್ಕಾರ ಚಿಂತನೆ ನಡೆಸಿದೆ.
ಕರ್ನಾಟಕದಲ್ಲಿ ಸಿನಿಮಾ ಪ್ರವಾಸೋದ್ಯಮದ ಬೆಳವಣಿಗೆಗೆ ವಿಪುಲ ಅವಕಾಶಗಳು ಇರುವುದರಿಂದ ಪ್ರತ್ಯೇಕ ನೀತಿ ಮತ್ತು ಕಾರ್ಯಕ್ರಮಗಳನ್ನು ರೂಪಿಸುವ ಅಗತ್ಯವಿದೆ. ಇದಕ್ಕಾಗಿ ರಾಜ್ಯ ವ್ಯಾಪಿ ಸಿನಿಮಾ ಚಿತ್ರೀಕರಿಸಲು ಪೂರಕವಾದ ತಾಣಗಳನ್ನು ಗುರುತಿಸಿ, ಉತ್ತೇಜನ ನೀಡಲು ಕಾರ್ಯತಂತ್ರ ರೂಪಿಸಲು ಉದ್ದೇಶಿಸಲಾಗಿದೆ.
ಜನಪ್ರಿಯ ಚಲನಚಿತ್ರಗಳು ಚಿತ್ರೀಕರಣಗೊಂಡ ವಿಭಿನ್ನ ತಾಣಗಳ ವಿಕ್ಷಣೆಗೆ ಪ್ರವಾಸಿಗರು ಬರುವಂತೆ ಮಾಡಲಾಗುವುದು. ಇದಕ್ಕಾಗಿ ಪ್ಯಾಕೇಜ್ ಮಾದರಿಯಲ್ಲಿ ಚಿತ್ರೀಕರಣಗೊಂಡ ತಾಣಗಳಿಗೆ ಪ್ರವಾಸ ಕೈಗೊಳ್ಳಲು ಅವಕಾಶ ನೀಡಲಾಗುವುದು.
ಎಲ್ಲ ಬಗೆಯ ಚಲನಚಿತ್ರಗಳು ಅಂದರೆ ಕಮರ್ಷಿಯಲ್, ಪ್ರಾದೇಶಿಕ, ಸಾಕ್ಷ್ಯಚಿತ್ರ, ಟಿ.ವಿ ಪ್ರೊಡಕ್ಷನ್, ಒಟಿಟಿ ಮತ್ತು ಚಲನಚಿತ್ರಕ್ಕೆ ಸಂಬಂಧಿಸಿದ ಇತರ ಪ್ಲಾಟ್‌ಫಾರಂಗಳನ್ನೂ ಚಲನಚಿತ್ರ ಪ್ರವಾಸೋದ್ಯಮದ ವ್ಯಾಪ್ತಿಗೆ ಒಳಪಡಿಸಲಾಗುವುದು.
ವಿವಿಧ ತಾಣಗಳಲ್ಲಿ ಚಲನಚಿತ್ರಗಗಳ ಚಿತ್ರೀಕರಣಕ್ಕಾಗಿ ಅನುಮತಿ ಪಡೆಯಲು ಆನ್‌ಲೈನ್ ಏಕಗವಾಕ್ಷಿ ವ್ಯವಸ್ಥೆಯನ್ನು ಸರ್ಕಾರದ ಇತರ ಏಜೆನ್ಸಿಗಳ ಜತೆ ಸೇರಿ ರೂಪಿಸಬೇಕು. ಚಿತ್ರೀಕರಣಕ್ಕೆ ಅನುಕೂಲಕರ ಮತ್ತು ಆಕರ್ಷಕ ವಾತಾವರಣವನ್ನು ಸೃಷ್ಟಿಸಬೇಕಾಗಿದೆ ಎಂದು ಹೊಸ ಪ್ರವಾಸೋದ್ಯಮ ನೀತಿ ಪ್ರತಿಪಾದಿಸಿದೆ.
ಇದಕ್ಕಾಗಿ ವಾರ್ತಾ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಜತೆ ಸೇರಿ ಚಲನಚಿತ್ರ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕಾಗಿದೆ ಎಂದೂ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.