ಬೆಂಗಳೂರು: ‘ಮಸೀದಿಗಳಲ್ಲಿ ಶಾಶ್ವತ ಧ್ವನಿವರ್ಧಕ ಬಳಕೆಗೆ ಅನುಮತಿ ನೀಡಬಹುದೇ, ಒಂದು ವೇಳೆ ನೀಡಬಹುದಾಗಿದ್ದರೆಯಾವ ಕಾನೂನಿನ ಅಡಿಯಲ್ಲಿ ಪರವಾನಗಿ ನೀಡಲಾಗುತ್ತಿದೆ, ಪರವಾನಗಿ ನೀಡುವ ಸಕ್ಷಮ ಪ್ರಾಧಿಕಾರ ಯಾವುದು, ಎಷ್ಟು ದಿನಗಳ ಮಟ್ಟಿಗೆ ಪರವಾನಗಿ ನೀಡಬಹುದಾಗಿದೆ ಎಂಬ ಬಗ್ಗೆ ಮಾಹಿತಿ ನೀಡಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
‘ನಗರದ ಕೆಲವು ಮಸೀದಿಗಳು ಬಳಸುತ್ತಿರುವ ಧ್ವನಿವರ್ಧಕಗಳಿಂದ ಶಬ್ದಮಾಲಿನ್ಯ ಉಂಟಾಗುತ್ತಿದೆ’ ಎಂದು ಆಕ್ಷೇಪಿಸಿ ಥಣಿಸಂದ್ರದ ಪಿ.ರಾಕೇಶ್ ಸೇರಿದಂತೆ 32 ಜನರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಶ್ರೀಧರ್ ಪ್ರಭು, ‘ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸಲು ಪರವಾನಗಿ ನೀಡುತ್ತಿರುವ ಪೊಲೀಸರು, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಆದೇಶಗಳನ್ನು ಉಲ್ಲಂಘಿಸುತ್ತಿದ್ದಾರೆ. ಅಕ್ರಮವಾಗಿ ಧ್ವನಿವರ್ಧಕ ಬಳಕೆ ಮಾಡಿದರೂ ದಂಡ ವಿಧಿಸುತ್ತಿಲ್ಲ ಮತ್ತು ಅಂತಹ ಧ್ವನಿವರ್ಧಕಗಳನ್ನು ವಶಕ್ಕೆ ಪಡೆಯುತ್ತಿಲ್ಲ’ ಎಂದು
ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಧ್ವನಿವರ್ಧಕ ಬಳಸಲು ಯಾರಿಗೆ ಅನುಮತಿ ನೀಡಬೇಕು ಅಥವಾ ನೀಡಬಾರದು ಎಂಬ ವಿಚಾರ ಸರ್ಕಾರಕ್ಕೆ ಬಿಟ್ಟದ್ದು. ಆದರೆ, ಅದು ಕಾನೂನಿನ ಪ್ರಕಾರ ಇರಬೇಕು. ಯಾವ ಕಾನೂನಿನ ಅಡಿಯಲ್ಲಿ ಮಸೀದಿಗಳ ಧ್ವನಿವರ್ಧಕ ಬಳಕೆಗೆ ಶಾಶ್ವತ ಪರವಾನಗಿ ನೀಡಬಹುದಾಗಿದೆ ಎಂಬ ವಿಚಾರ ಸದ್ಯ ನ್ಯಾಯಾಲಯದ ಮುಂದಿದೆ’ ಎಂದು ಸ್ಪಷ್ಟಪಡಿಸಿತು.
ಪ್ರತಿವಾದಿ ಮಸೀದಿಗಳ ಪರ ವಕಾಲತ್ತು ವಹಿಸಿದ್ದ ವಕೀಲರು, ‘ನಮ್ಮಕಕ್ಷಿದಾರರು ಧ್ವನಿವರ್ಧಕ ಬಳಸಲು ಅನುಮತಿ ಪಡೆದಿದ್ದಾರೆ. ವಕ್ಫ್ ಮಂಡಳಿಯೂ ಇದಕ್ಕೆ ಅನುಮತಿ ನೀಡಿದೆ’ ಎಂದು ನ್ಯಾಯಪೀಠಕ್ಕೆ ಅರುಹಿದರು.
ಅರ್ಜಿದಾರರ ವಾದಾಂಶಕ್ಕೆ ಉತ್ತರಿಸಲು ಕಾಲಾವಕಾಶ ನೀಡುವಂತೆ ಸರ್ಕಾರಿ ವಕೀಲರ ಕೋರಿಕೆ ಮಾನ್ಯ ಮಾಡಿದ ನ್ಯಾಯಪೀಠ, ವಿಚಾರಣೆಯನ್ನು ಇದೇ 20ಕ್ಕೆ ಮುಂದೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.