ಬೆಂಗಳೂರು: ಹೈಕೋರ್ಟ್ ಇರುವುದೇ ಧರ್ಮ ಸಂಸ್ಥಾಪನೆಗಾಗಿ. ಇಲ್ಲಿ ಕಡೆಗೂ ಉಳಿಯುವುದು ಧರ್ಮ ಮಾತ್ರ. ತಾಯಿ, ತಂಗಿ, ಅಕ್ಕ, ತಮ್ಮ ಯಾರೂ ಲೆಕ್ಕಕ್ಕೆ ಬರೋಲ್ಲ...!
ನ್ಯಾಯಾಂಗ ನಿಂದನೆ ಮೊಕದ್ದಮೆ ಯೊಂದರಲ್ಲಿ ಆರೋಪಿ ಸ್ಥಾನದಲ್ಲಿದ್ದ 74 ವರ್ಷದ ಹಿರಿಯರೊಬ್ಬರು ಕೋರ್ಟ್ ಕಟಕಟೆಯಲ್ಲಿ ನುಡಿದ ಸತ್ಯಕ್ಕೆ ತಲೆದೂಗಿದ ನ್ಯಾಯಪೀಠ ಹೇಳಿದ ಮಾತುಗಳಿವು.
ಮೈಸೂರು ಕಸಬಾ ಹೋಬಳಿ ವ್ಯಾಪ್ತಿ ಯಲ್ಲಿನ 1.23 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಬಾಕಿ ಇದ್ದು ಯಥಾಸ್ಥಿತಿ ಕಾಯ್ದುಕೊಂಡು ಹೋಗುವಂತೆ ಪ್ರಕರಣದ ಉಭಯ ಪಕ್ಷಗಾರರಿಗೆ ಆದೇಶಿಸಲಾಗಿತ್ತು. ಆದರೆ, ಪಕ್ಷಗಾರ ರಲ್ಲಿ ಒಬ್ಬರಾದ ಸಿ.ಜಯರಾಂ (74) ಕೋರ್ಟ್ ಆದೇಶ ಉಲ್ಲಂಘಿಸಿ ಜಮೀನನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಮೈಸೂರಿನ ಜಯಲಕ್ಷ್ಮಿಪುರಂನ ವಿನಾಯಕನಗರದ ನಿವಾಸಿ ವಾಸು ಅವರು ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದ್ದರು.
ಪ್ರಕರಣವನ್ನು ನ್ಯಾಯಮೂರ್ತಿಗಳಾದ ಬಿ.ವೀರಪ್ಪ ಹಾಗೂ ಕೆ.ಎಸ್.ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಸಾಮಾನ್ಯವಾಗಿ ಕೋರ್ಟ್ ಕಟಕಟೆ ಪ್ರವೇಶಿಸಿ ಹೇಳಿಕೆ ನೀಡುವಾಗ ಕಕ್ಷಿದಾರರ ಪರ ವಕೀಲರು, ಅವರು ಏನನ್ನು ಹೇಳಬೇಕು ಎಂಬುದನ್ನು ಮುಂಚಿತವಾಗಿಯೇ ತಿಳಿಸಿ ಪೂರ್ವ ತಯಾರಿ ನೀಡಿರುತ್ತಾರೆ. ಅದರಂತೆಯೇ ಪಕ್ಷಗಾರರೂ ಕಟಕಟೆಯಲ್ಲಿ ಹೇಳಿ ಕೊಟ್ಟಂತೆ ಉತ್ತರಿಸುವುದು ವಾಡಿಕೆ.
ಪ್ರಕರಣದ ಸಂಖ್ಯೆಯನ್ನು ಕರೆದ ಕೂಡಲೇ ಜಯರಾಂ ಅವರಿಗೆ ನ್ಯಾಯಮೂರ್ತಿ ವೀರಪ್ಪ, ಕಟಕಟೆ ಪ್ರವೇಶಿಸು
ವಂತೆ ಸೂಚಿಸಿದರು. ಕೈಮುಗಿದುಕೊಂಡು ಬಂದು ನಿಂತ ಜಯರಾಂಗೆ ಕೋರ್ಟ್ ಅಧಿಕಾರಿ, ‘ಸತ್ಯವನ್ನೇ ನುಡಿಯುತ್ತೇನೆ...’ ಎಂಬ ಪ್ರಮಾಣ ಬೋಧಿಸಿದರು.
ದೋಷಾರೋಪ ಹೊರಿಸುವ ಪ್ರಕ್ರಿಯೆಯನ್ನು ಆರಂಭಿಸಿದ ವೀರಪ್ಪನವರು ಜಯರಾಂಗೆ, ‘ನೋಡಿ ನೀವು, ಈ ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಹೋಗುವಂತೆ ಕೋರ್ಟ್ ಆದೇಶಿಸಿದ್ದರೂ ಆಸ್ತಿ ಮಾರಾಟ ಮಾಡಿ
ದ್ದೀರಿ ಎಂದು ಆರೋಪಿಸಲಾಗಿದೆ, ಹೌದಾ’ ಎಂದು ಪ್ರಶ್ನಿಸಿದರು.
ಕೂಡಲೇ ಜಯರಾಂ, ‘ಹೌದು ಸ್ವಾಮಿ’ ಎಂದರು. ಇದನ್ನು ಕೇಳಿದ ವೀರಪ್ಪನವರು ನಗುತ್ತಲೇ, ‘ನೋಡಿ ನೀವು ತಪ್ಪು ಮಾಡಿದ್ದೀನಿ ಎಂದು ಒಪ್ಪಿಕೊಂಡರೆ ಜೈಲಿಗೆ ಹೋಗುತ್ತೀರಿ’ ಎಂದರು. ತಕ್ಷಣವೇ ಎಚ್ಚೆತ್ತುಕೊಂಡ ಜಯರಾಂ ‘ಇಲ್ಲಾ ಸ್ವಾಮಿ, ನಾನು ತಪ್ಪು ಮಾಡಿಲ್ಲ’ ಎಂದು ಉಲ್ಟಾ ಹೊಡೆದರು.
ಆಗ ನ್ಯಾಯಮೂರ್ತಿಗಳು ಜಯರಾಂ ಪರ ವಕೀಲ ಪಿ.ಎನ್.ಮನಮೋಹನ್ ಮತ್ತು ಅರ್ಜಿದಾರರ ಪರ ವಕೀಲೆ ಸಾಕ್ಷಿ ಅವರತ್ತ ತಿರುಗಿ, ‘ನೋಡಿ, ಈ ವಯೋವೃದ್ಧರು ಮುಗ್ದತೆ ಯಿಂದ ಸತ್ಯವನ್ನೇ ನುಡಿದಿದ್ದಾರೆ. ಕೋರ್ಟ್ ಕೂಡಾ ಸತ್ಯವನ್ನು ಎತ್ತಿ ಹಿಡಿಯಬೇಕಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.
ನಂತರ ಸಾಕ್ಷಿ ಅವರಿಗೆ ವೀರಪ್ಪನವರು, ‘ನೋಡಮ್ಮಾ, ಅವರು ಸತ್ಯ ಒಪ್ಪಿಕೊಂಡಿದ್ದಾರೆ. ಇಬ್ಬರೂ ಕೂಡಿಕೊಂಡು ಸೌಹಾರ್ದವಾಗಿ ಪ್ರಕರಣ ಬಗೆಹರಿಸಿಕೊಳ್ಳಿ. ಅಕಸ್ಮಾತ್ ನಾನು ಅವರಿಗೆ ಜೈಲು ಶಿಕ್ಷೆಯನ್ನು ಒಂದೇ ದಿನಕ್ಕೆ ಸೀಮಿತಗೊಳಿಸಿ ದರೆ ನಿಮ್ಮ ಆಸ್ತಿಯೇ ಕೈಬಿಡುತ್ತದೆ, ಯೋಚಿಸಿ’ ಎಂದು ಸೂಚಿಸಿ ವಿಚಾರಣೆ ಮುಂದೂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.