ಬೆಂಗಳೂರು: ‘ದಿನದ 24 ಗಂಟೆಗಳ ಕಾಲ ಹೋಟೆಲ್ ತೆರೆಯಲು ಅವಕಾಶ ನೀಡಬೇಕು. ಹೋಟೆಲ್ ಉದ್ಯಮಕ್ಕೆ ಕೈಗಾರಿಕೆ ಸ್ಥಾನಮಾನ ನೀಡಬೇಕು’ ಎಂದು ಆಗ್ರಹಿಸಿ ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ಪ್ರತಿನಿಧಿಗಳು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಹೋಟೆಲು ಉದ್ಯಮದ ಅಗತ್ಯಗಳ ಬಗ್ಗೆ ವಿವರಿಸಿದ ಸಂಘದ ಪ್ರತಿನಿಧಿಗಳು, ‘ಸುಲಲಿತ ವ್ಯವಹಾರ (ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್) ನಡೆಸಲು ಅನುಕೂಲ ಆಗುವಂತೆ ಶಾಶ್ವತ ಪರವಾನಗಿ ನೀಡಬೇಕು. 24X7 ತೆರೆದಿಡಲು ಅನುಮತಿ ನೀಡಿದರೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಪೊಲೀಸರು, ವೈದ್ಯಕೀಯ ಸಿಬ್ಬಂದಿ, ಆಟೊ ಮತ್ತು ಟ್ಯಾಕ್ಸಿ ಚಾಲಕರು ಮುಂತಾದ ಅಗತ್ಯ ಸೇವೆಯಡಿ ಕಾರ್ಯನಿರ್ವಹಿಸುವವರಿಗೆ ಅನುಕೂಲ ಆಗಲಿದೆ. ಬಸ್, ರೈಲು, ವಿಮಾನದ ಮೂಲಕ ರಾತ್ರಿ ಬಂದಿಳಿಯುವವರಿಗೂ ಉಪಯುಕ್ತವಾಗಲಿದೆ’ ಎಂದು ವಿವರಿಸಿದ್ದಾರೆ.
ಸಂಘದ ಅಧ್ಯಕ್ಷ ಪಿ.ಸಿ. ರಾವ್, ಉಪಾಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ, ಪ್ರಧಾನ ಕಾರ್ಯದರ್ಶಿ ವೀರೇಂದ್ರ ಎನ್. ಕಾಮತ್, ಜಂಟಿ ಕಾರ್ಯದರ್ಶಿಗಳಾದ ರಾಕೇಶ್, ಶಾಕೀರ್, ಎಚ್.ಎಸ್. ಪ್ರಭಾಕರ್, ಕೃಷ್ಣರಾಜು ಮತ್ತಿತರರು ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.