ಬೆಂಗಳೂರು: ಪ್ರಮುಖ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ‘ಸೀಟ್ ಬ್ಲಾಕಿಂಗ್’ ದಂಧೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಪ್ರವೇಶ ಪಡೆಯದ 2,348 ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೋಟಿಸ್ ನೀಡಿದೆ.
ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ಸಿಇಟಿಯಲ್ಲಿ ಉನ್ನತ ರ್‍ಯಾಂಕ್ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳು ಎರಡನೇ ಸುತ್ತು ಪೂರ್ಣಗೊಳ್ಳುವವರೆಗೂ ಸೀಟು ಹಿಡಿದಿಟ್ಟುಕೊಂಡು ಕೊನೆಯ ಸುತ್ತಿನ ನಂತರ ತಮಗೆ ಹಂಚಿಕೆಯಾದ ಪ್ರಮುಖ ಕಾಲೇಜಿಗಳಿಗೆ ಪ್ರವೇಶ ಪಡೆಯದೇ ಇತರೆ ವಿದ್ಯಾರ್ಥಿಗಳಿಗೆ ನಷ್ಟ ಮಾಡಿದ್ದಾರೆ.
‘ಸೀಟು ಹಂಚಿಕೆ ನಂತರ ಶುಲ್ಕ ಕಟ್ಟದವರು, ಶುಲ್ಕ ಕಟ್ಟಿಯೂ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳದವರು ಹಾಗೂ ಅಪೂರ್ಣ ಶುಲ್ಕ ಕಟ್ಟಿದವರನ್ನು ಮೂರು ವಿಭಾಗಗಳಾಗಿ ಪ್ರತ್ಯೇಕಿಸಿ ನೋಟಿಸ್ ನೀಡಲಾಗಿದೆ’ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಹೇಗೆ ಸೀಟ್ ಬ್ಲಾಕಿಂಗ್?:
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಈ ಬಾರಿ ಕಂಪ್ಯೂಟರ್ ಸೈನ್ಸ್, ಕೃತಕ ಬುದ್ಧಿಮತ್ತೆ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಸೇರಿದಂತೆ ಕೆಲ ಕೋರ್ಸ್‌ಗಳಿಗೆ ಬಹಳ ಬೇಡಿಕೆ ಇದ್ದು, ಆಡಳಿತ ಮಂಡಳಿ ಕೋಟಾದ ಸೀಟುಗಳಿಗೆ ₹60 ಲಕ್ಷದವರೆಗೂ ಹಣ ಪಡೆಯಲಾಗಿದೆ. ಇಂತಹ ಕಾಲೇಜುಗಳಲ್ಲಿ ಬೇಡಿಕೆ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡರೂ ವಿದ್ಯಾರ್ಥಿಗಳು ಪ್ರವೇಶ ಪಡೆದಿಲ್ಲ.
ಸರ್ಕಾರ ಮತ್ತು ಅನುದಾನರಹಿತ ಎಂಜಿನಿಯರಿಂಗ್ ಕಾಲೇಜುಗಳ ಸಂಘದ ನಡುವಿನ ಒಪ್ಪಂದದ ಪ್ರಕಾರ ಎರಡನೇ ಸುತ್ತಿನ ಮುಂದುವರಿದ ಸೀಟು ಹಂಚಿಕೆ, ಪ್ರವೇಶ ಪ್ರಕ್ರಿಯೆ ನಂತರ ಬಾಕಿ ಉಳಿದ ಸೀಟುಗಳನ್ನು ಆಯಾ ಕಾಲೇಜುಗಳಿಗೆ ಬಿಟ್ಟು ಕೊಡಬೇಕಿದೆ. ಹಾಗಾಗಿ, ಉಳಿದ ಸೀಟುಗಳನ್ನು ಕಾಲೇಜುಗಳ ಆಡಳಿತ ಮಂಡಳಿಗಳು ಅಧಿಕ ಹಣಕ್ಕೆ ನೀಡುತ್ತವೆ.
ಒಪ್ಪಂದದ ಇಂತಹ ಅಂಶಗಳನ್ನು ಬಳಸಿಕೊಂಡ ಕೆಲ ಕಾಲೇಜುಗಳು ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಸಿಗದೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ತರಬೇತಿ ಪಡೆಯುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಬಳಸಿಕೊಂಡು ಸೀಟ್ ಬ್ಲಾಕಿಂಗ್ ವ್ಯವಹಾರ ನಡೆಸುತ್ತಿರಬಹುದು ಎಂದು ಕೆಇಎ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಬಿಎಂಎಸ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗವೊಂದರಲ್ಲೇ 35 ಸೀಟುಗಳು ಉಳಿದಿವೆ. ರಾಜ್ಯದ ವಿವಿಧ ಕಾಲೇಜುಗಳಲ್ಲಿ ಒಟ್ಟು 16,004 ಎಂಜಿನಿಯರಿಂಗ್ ಸೀಟುಗಳು ಉಳಿದಿವೆ. ಹೆಚ್ಚಿನ ಬೇಡಿಕೆ ಇರುವ ಕೋರ್ಸ್‌ಗಳಲ್ಲೂ 20ಕ್ಕೂ ಹೆಚ್ಚು ಸೀಟು ಉಳಿದ ಇಂತಹ ಹಲವು ಕಾಲೇಜುಗಳನ್ನು ಪಟ್ಟಿ ಮಾಡಲಾಗಿದೆ.
ನಾಲ್ಕು ವರ್ಷಗಳ ನಿರ್ಬಂಧಕ್ಕೆ ಚಿಂತನೆ
‘ಸೀಟ್ ಬ್ಲಾಕ್ ಮಾಡಿಸಿ ಪ್ರವೇಶ ಪಡೆಯದವರನ್ನು ಮೂರು ಭಾಗಗಳಾಗಿ ಪ್ರತ್ಯೇಕಿಸಿ ನೋಟಿಸ್ ನೀಡಲಾಗಿದೆ. ಉತ್ತರಕ್ಕೆ ಮೂರು ದಿನಗಳ ಗಡುವು ಕೊಡಲಾಗಿದೆ. ಉದ್ದೇಶಪೂರ್ವಕವಾಗಿ ತಪ್ಪು ಎಸಗಿದವರಿಗೆ ನಾಲ್ಕು ವರ್ಷಗಳು ರಾಜ್ಯದ ಯಾವುದೇ ಎಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆಯದಂತೆ ನಿರ್ಬಂಧ ವಿಧಿಸಲು ಚಿಂತನೆ ನಡೆದಿದೆ’ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಹೇಳಿದ್ದಾರೆ.
ಬೇಡಿಕೆಯ ಕೋರ್ಸ್;ಉಳಿಕೆ ಸೀಟು
ಕಂಪ್ಯೂಟರ್ ಸೈನ್ಸ್;637
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್;1,520
ವಾಸ್ತುಶಿಲ್ಪ ಶಾಸ್ತ್ರ;569
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.