ADVERTISEMENT

ಆಭರಣಕ್ಕಾಗಿ ಕೆರೆ ನೀರು ಖಾಲಿ!

ಪರಿಸರಪ್ರಿಯರ ಮಧ್ಯಪ್ರವೇಶದಿಂದ ಉಳಿಯಿತು ಜೀವಜಲ

ಆರ್.ಜಿತೇಂದ್ರ
Published 12 ಡಿಸೆಂಬರ್ 2020, 19:46 IST
Last Updated 12 ಡಿಸೆಂಬರ್ 2020, 19:46 IST
ಬಿಳಗುಂಬದ ಹಲಗೇಗೌಡನ ಕೆರೆ
ಬಿಳಗುಂಬದ ಹಲಗೇಗೌಡನ ಕೆರೆ   
""

ರಾಮನಗರ: ಕೆರೆಯಲ್ಲಿ ಎಸೆದ ಚಿನ್ನದ ಆಭರಣ ಹುಡುಕುವ ಸಲುವಾಗಿ ಇಡೀ ಕೆರೆಯ ನೀರನ್ನೇ ಖಾಲಿ ಮಾಡಿಸಲು ಹೊರಟ ಘಟನೆ ತಾಲ್ಲೂಕಿನ ಬಿಳಗುಂಬ ಗ್ರಾಮದಲ್ಲಿ ನಡೆದಿದೆ. ಪರಿಸರಪ್ರಿಯರ ಮಧ್ಯಪ್ರವೇಶದಿಂದ ಕೆರೆ ನೀರು ಖಾಲಿಯಾಗುವುದು ತಪ್ಪಿದೆ.

ಗ್ರಾಮದ ನಿವಾಸಿ ಭಗವಂತ ಎಂಬುವರ ಪತ್ನಿ ಸವಿತಾ ಇದೇ 9ರಂದು ಬಿಳಗುಂಬದ ಹಲಗೇಗೌಡನ ಕೆರೆಗೆ ಚಿನ್ನದ ಸರ ಸೇರಿದಂತೆ ಕೆಲವು ಆಭರಣಗಳನ್ನು ಎಸೆದಿದ್ದಾಗಿ ಮನೆಯವರಿಗೆ ಹೇಳಿದ್ದರು. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಕೆರೆಯ ಬಳಿ ಹುಡುಕಾಡಿದ್ದಾರೆ. ಕಡೆಗೆ ಆಭರಣ ಸಿಗದ ಕಾರಣ ಗ್ರಾಮಸ್ಥರನ್ನು ಸಭೆ ಸೇರಿಸಿದ್ದಾರೆ. ಕೆರೆ ನೀರು ಖಾಲಿ ಮಾಡಿಸಿ ಆಭರಣ ಹುಡುಕಿಕೊಳ್ಳುವಂತೆ ಮುಖಂಡರು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಇದೇ 10ರಂದು ಸಂಜೆ 2–3 ಟ್ರ್ಯಾಕ್ಟರ್ ಬಳಸಿ ಮೋಟಾರ್‌ ಮೂಲಕ ಕೆರೆ ನೀರನ್ನು ಹೊರಗೆ ಚೆಲ್ಲುವ ಕಾರ್ಯ ಆರಂಭವಾಗಿದೆ. ಸುದ್ದಿ ತಿಳಿಯುತ್ತಲೇ ಸ್ಥಳೀಯ ಪರಿಸರವಾದಿ ಬಿ.ಟಿ. ರಾಜೇಂದ್ರ ಈ ಕಾರ್ಯವನ್ನು ತಡೆದಿದ್ದಾರೆ. ನಂತರ ಗ್ರಾ.ಪಂ. ಪಿಡಿಒ ಹಾಗೂ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಜಿಲ್ಲಾಧಿಕಾರಿಗೂ ದೂರು ನೀಡಿದ್ದಾರೆ. ವಿಷಯ ಗಂಭೀರ ಆಗುತ್ತಲೇ ಅಧಿಕಾರಿಗಳು ಮಧ್ಯಪ್ರವೇಶಿಸಿದ್ದು, ನೀರು ಹೊರ ಚೆಲ್ಲುತ್ತಿದ್ದ ಟ್ರ್ಯಾಕ್ಟರ್‌ಗಳು ಅಲ್ಲಿಂದ ತೆರಳಿವೆ. ಅಷ್ಟರಲ್ಲಿ ಒಂದಿಷ್ಟು ಪ್ರಮಾಣದ ನೀರು ಹೊರಚೆಲ್ಲಿಯಾಗಿತ್ತು.

ADVERTISEMENT
ರಾತ್ರಿ ವೇಳೆ ನೀರನ್ನು ಹೊರಚೆಲ್ಲುತ್ತಿರುವ ಟ್ರ್ಯಾಕ್ಟರ್

ಎಷ್ಟು ಬಂಗಾರ?: ಸವಿತಾ ಕೆರೆಯಲ್ಲಿ ಬಂಗಾರ ಎಸೆದದ್ದು ನಿಜವೇ? ಅದರ ತೂಕ ಎಷ್ಟು? ಎಂಬ ಸಂಗತಿ ಸದ್ಯ ಚರ್ಚೆಗೆ ಗ್ರಾಸವಾಗಿದೆ. ಮನೆಯವರೊಡನೆ ಜಗಳ ಮಾಡಿಕೊಂಡ ಸವಿತಾ ಮನೆಯಲ್ಲಿದ್ದ ಸುಮಾರು 200–250 ಗ್ರಾಂ ಬಂಗಾರವನ್ನೂ ಕೆರೆಗೆ ಎಸೆದಿದ್ದಾರೆ ಎಂದು ಹೇಳಲಾಗುತ್ತಿದೆ. ಮಹಿಳೆ ದಿನಕ್ಕೊಂದು ಹೇಳಿಕೆ ನೀಡುತ್ತಿರುವುದು ಗ್ರಾಮಸ್ಥರಲ್ಲಿ ಗೊಂದಲ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.