ಬೆಂಗಳೂರು: ಕಂದಾಯ ಸಚಿವರೂ ಆಗಿರುವ ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣ ಬೈರೇಗೌಡ ಅವರು ವೀರಣ್ಣನಪಾಳ್ಯದ ಬಳಿಯ ರಸ್ತೆ ಗುಂಡಿ ಮುಚ್ಚುವಂತೆ ಬಿಬಿಎಂಪಿ ಹಾಗೂ ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ತಮ್ಮ ‘ಎಕ್ಸ್’ ಖಾತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸಾರ್ವಜನಿಕರೊಬ್ಬರು ಕಳುಹಿಸಿದ್ದ ವಿಡಿಯೊ ತುಣುಕನ್ನು ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದ ಸಚಿವರು, ‘ಬಿಬಿಎಂಪಿ ಆಯುಕ್ತರಾಗಲೀ ಅಥವಾ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಾಗಲೀ ದಯವಿಟ್ಟು ಗುಂಡಿಯನ್ನು ಮುಚ್ಚಿ ರಸ್ತೆ ರಿಪೇರಿ ಮಾಡಿ’ ಎಂದು ಮನವಿ ಮಾಡಿದ್ದಾರೆ.
ಸಚಿವರೇ ಮನವಿ ಮಾಡಿಕೊಂಡಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಸಚಿವರು ಬುಧವಾರ ರಾತ್ರಿ 8.20ರಲ್ಲಿ ವಿಡಿಯೊ ಪೋಸ್ಟ್ ಮಾಡಿದ್ದು, ‘ಇದನ್ನು ಸಾರ್ವಜನಿಕರು ನನಗೆ ಕಳುಹಿಸಿದ್ದಾರೆ. ಸರಿಪಡಿಸಿ, ಸಮಸ್ಯೆಯನ್ನು ಪರಿಹರಿಸಿ’ ಎಂದು ಕೋರಿದ್ದರು.
ಕೆಲವೇ ಗಂಟೆಗಳಲ್ಲಿ ಈ ಸಂದೇಶಕ್ಕೆ ನೂರಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯೆ ನೀಡಿದ್ದು, ಅಧಿಕಾರಿಗಳನ್ನು ಬೇಡಿಕೊಳ್ಳುವಷ್ಟು ಸಚಿವರು ಅಸಾಹಯಕರಾಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಕಾರ್ತಿಕ್ ಎಂಬುವವರು, ‘ಇದು ಬಿಬಿಎಂಪಿ ಅಥವಾ ಬಿಎಂಆರ್‌ಸಿಎಲ್ ಜವಾಬ್ದಾರಿ ಆಗಿದ್ದರೂ, ಸಚಿವರಾಗಿ ನಿಮಗೆ ಯಾವುದೇ ಅಧಿಕಾರವಿಲ್ಲವೆ? ಪರಿಶೀಲಿಸಲು ಸಾಧ್ಯವಿಲ್ಲವೆ? ಒಬ್ಬ ಪ್ರಜೆ ಈ ರೀತಿ ಪೋಸ್ಟ್ ಮಾಡಿದರೆ ಒಪ್ಪಬಹುದು. ಸಚಿವರೇ ಹೀಗೆ ಮಾಡುವುದು ನಗೆಪಾಟಲು’ ಎಂದಿದ್ದಾರೆ.
‘ಸಚಿವರಾಗಿದ್ದರೂ ಅಸಹಾಯಕತೆಯಿಂದ ಗುಂಡಿ ಮುಚ್ಚಿ ಎಂದು ಅಂಗಲಾಚುವ ದೈನೇಸಿ ಸ್ಥಿತಿ ಬಂದಿರುವುದು ಕಾಂಗ್ರೆಸ್‌ನ ದುರವಸ್ಥೆ, ದುರಾಡಳಿತಕ್ಕೆ ಸಾಕ್ಷಿ. ಗುಂಡಿ ಮುಚ್ಚಿ ಎಂದು ನೇರವಾಗಿ ಹೇಳಲು ಹಣ ಇಲ್ಲ. ಅದಕ್ಕೆ ‘ಎಕ್ಸ್’ನಲ್ಲಿ ಅಂಗಲಾಚುತ್ತಿದ್ದಾರೆ’ ಎಂದು ಸಮವ್ ಲೇವಡಿ ಮಾಡಿದ್ದಾರೆ.
‘ಸಚಿವರು ತಮ್ಮದೇ ಸರ್ಕಾರದ ಅಧಿಕಾರಿಗಳನ್ನು ಇಷ್ಟರಮಟ್ಟಿಗೆ ಬೇಡಿಕೊಳ್ಳಬೇಕು ಎಂದರೆ, ಇನ್ನು ಸಾಮಾನ್ಯ ಜನರನ್ನು ಅಧಿಕಾರಿಗಳು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದು ಗೊತ್ತಾಗುತ್ತದೆ’ ಎಂದು ಚೇತನ್ ವಾಲಿ ಎಂಬವರು ಪ್ರತಿಕ್ರಿಯಿಸಿದ್ದಾರೆ.
ಸಚಿವರು ತಮ್ಮ ಪೋಸ್ಟ್ ಅನ್ನು ‘@bbmpcommr’ ಅಥವಾ ‘@BMRCL’ ಹ್ಯಾಂಡಲ್‌ಗಳಿಗೆ ಟ್ಯಾಗ್ ಮಾಡಿದ್ದರು. ಇದರಲ್ಲಿ ಬಿಬಿಎಂಪಿ ಆಯುಕ್ತರ ಹೆಸರಿನ ಹ್ಯಾಂಡಲ್ ಮಾತ್ರ ಅಧಿಕೃತವಾದುದು. ‘@BMRCL’ ಹ್ಯಾಂಡಲ್ ಮಹಿಳೆಯೊಬ್ಬರ ವೈಯಕ್ತಿಕ ಖಾತೆಗೆ ಸಂಬಂಧಿಸಿದ್ದಾಗಿದೆ. ಈ ಖಾತೆಯಲ್ಲಿ ಈಚಿನ ವರ್ಷಗಳಲ್ಲಿ ನಿಷ್ಕ್ರಿಯವಾಗಿತ್ತು. ತಪ್ಪಾದ ಹ್ಯಾಂಡಲ್‌ಗೆ ಟ್ಯಾಗ್ ಮಾಡಿದ್ದರ ಬಗ್ಗೆಯೂ ಸಾರ್ವಜನಿಕರು ಲೇವಡಿ ಮಾಡಿದ್ದಾರೆ. ಸಚಿವರು ಟ್ವೀಟ್ ಮಾಡಿ ಒಂದು ದಿನ ಕಳೆದರೂ ಬಿಬಿಎಂಪಿ ಆಯುಕ್ತರ ಖಾತೆ ಅಥವಾ ಬಿಎಂಆರ್‌ಸಿಎಲ್ ಖಾತೆಯಿಂದಾಗಲೀ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದನ್ನೂ ಗಮನಿಸಿರುವ ಸಾರ್ವಜನಿಕರು ‘ಈ ಪೋಸ್ಟ್‌ಗೆ ಈವರೆಗೆ ಸಂಬಂಧಿತರ ಪ್ರತಿಕ್ರಿಯೆ ಬಂದಂತೆ ಕಾಣುತ್ತಿಲ್ಲ. ಸಚಿವರ ಸಮಯ ವ್ಯರ್ಥ ಅಷ್ಟೆ’ ಎಂದಿದ್ದಾರೆ.
‘ನಗರದ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಅತ್ಯಂತ ಅಸಹಾಯಕರಾಗಿ ಬಿಬಿಎಂಪಿ ಮತ್ತು ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಬೇಡಿಕೊಂಡಿದ್ದಾರೆ. ಅವರ ಪೋಸ್ಟ್ ನೋಡಿದರೆ ಕಾಂಗ್ರೆಸ್ ಸರ್ಕಾರದ ದರಿದ್ರ ಸ್ಥಿತಿ ನೆನೆದು ಮರುಕವಾಗುತ್ತದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿದ್ದಾರೆ. ಈ ಕುರಿತು ‘ಎಕ್ಸ್’ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು ‘ಆದೇಶ ಮಾಡಿ ಕೆಲಸ ಮಾಡಿಸಬೇಕಾದ ಸ್ಥಾನದಲ್ಲಿರುವ ತಾವು ಬಿಬಿಎಂಪಿ ಅಧಿಕಾರಿಗಳಿಗೆ ಇಷ್ಟೊಂದು ಅಸಹಾಯಕರಾಗಿ ಅಂಗಲಾಚುತ್ತಿದ್ದೀರಲ್ಲ ಬೆಂಗಳೂರು ಅಭಿವೃದ್ಧಿ ಸಚಿವರು ತಮ್ಮ ಕೆಲಸ ಮಾಡುತ್ತಿಲ್ಲ ಎಂದು ಪರೋಕ್ಷವಾಗಿ ಟಾಂಗ್ ಕೊಡುತ್ತಿದ್ದೀರಾ ಅಥವಾ ಇದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಬಹಿರಂಗ ಬಂಡಾಯದ ಮುನ್ಸೂಚನೆಯೆ’ ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.