ADVERTISEMENT

ದೊಡ್ಡಬಳ್ಳಾಪುರ: ಹೊಸ ಜೇಡ ಪ್ರಭೇದಕ್ಕೆ ‘ತೆಂಕಣ ಜಯಮಂಗಲಿ’ ಹೆಸರು

ಜಯಮಂಗಲಿ ನದಿ ಉಗಮ ಸ್ಥಾನದಲ್ಲಿ ಹೊಸ ಪ್ರಬೇಧ ಪತ್ತೆ

ನಟರಾಜ ನಾಗಸಂದ್ರ
Published 12 ಅಕ್ಟೋಬರ್ 2024, 23:30 IST
Last Updated 12 ಅಕ್ಟೋಬರ್ 2024, 23:30 IST
ದೇವರಾಯನದುರ್ಗದಲ್ಲಿ ಪತ್ತೆ ಮಾಡಲಾಗಿರುವ ‘ತೆಂಕಣ ಜಯಮಂಗಲಿ’ ಹೊಸ ಪ್ರಬೇಧದ ಜೇಡ
ದೇವರಾಯನದುರ್ಗದಲ್ಲಿ ಪತ್ತೆ ಮಾಡಲಾಗಿರುವ ‘ತೆಂಕಣ ಜಯಮಂಗಲಿ’ ಹೊಸ ಪ್ರಬೇಧದ ಜೇಡ   

ದೊಡ್ಡಬಳ್ಳಾಪುರ: ತುಮಕೂರು ಜಿಲ್ಲೆಯ ದೇವರಾಯನದುರ್ಗ ಬೆಟ್ಟದ ಜಯಮಂಗಲಿ ನದಿಯ ಉಗಮ ಸ್ಥಾನದ ಸುತ್ತಮುತ್ತ ಒಂದೂವರೆ ವರ್ಷಗಳ ಹಿಂದೆ ಆರಂಭವಾದ ಸಂಶೋಧನೆ ವೇಳೆ ಜೇಡದ ಹೊಸ ಪ್ರಭೇದ ಪತ್ತೆಯಾಗಿದೆ.

ಈ ಜೇಡವನ್ನು ಸ್ಥಳೀಯ ಹೆಸರಿನಿಂದಲೇ ಗುರುತಿಸಬೇಕು ಎನ್ನುವ ಉದ್ದೇಶದಿಂದ ‘ತೆಂಕಣ ಜಯಮಂಗಲಿ’ ಎಂದು ಹೆಸರಿಡಲಾಗಿದೆ. ‘ಝೂಕೀಸ್‌’ ಅಂತರರಾಷ್ಟ್ರೀಯ ಜೀವವಿಜ್ಞಾನ ನಿಯತಕಾಲಿಕೆಯ ಅಕ್ಟೋಬರ್ 11ರ ಸಂಚಿಕೆಯಲ್ಲಿ ಈ ಕುರಿತ ಸಂಶೋಧನಾ ಬರಹ ಪ್ರಕಟವಾಗಿದೆ. 

ದೇವರಾಯನದುರ್ಗ ಬೆಟ್ಟದ ತಪ್ಪಲಿನ ಹಳೇಕೋಟೆ ಗ್ರಾಮದ ಇರವೆ ಹೊಲದ ಬಳಿ ಸಂಶೋಧನಾ ತಂಡ ಹಲವು ಜೇಡ ಪ್ರಭೇದಗಳ ಮಾದರಿಗಳನ್ನು ಸಂಗ್ರಹಿಸಿತ್ತು. ಅದರಲ್ಲಿ ಇದು ಕೂಡ ಒಂದು.  

ADVERTISEMENT

‘ಎಷ್ಟೋ ಕೀಟ, ಜೇಡಗಳು ಇಂಗ್ಲಿಷ್‌, ಲ್ಯಾಟಿನ್ ಹೆಸರುಗಳನ್ನು ಹೊಂದಿದ್ದು, ಉಚ್ಚರಿಸಲು ಹಾಗೂ ನೆನಪಿಡಲು ಕಷ್ಟ. ಈ ಕಾರಣದಿಂದಾಗಿ ಈ ಜೇಡವನ್ನು ತೆಂಕಣ ಜಯಮಂಗಲಿ ಎನ್ನುವ ಹೆಸರಿನಿಂದ ಪರಿಚಯಿಸಿದ್ದೇವೆ’ ಎನ್ನುತ್ತಾರೆ ಸಂಶೋಧನಾ ತಂಡದಲ್ಲಿದ್ದ ಜೇಡ ತಜ್ಞರಾದ ವೈ.ಟಿ.ಲೋಹಿತ್‌, ಬಿ.ಜಿ.ನಿಶಾ, ಚಿನ್ಮಯ್ ಸಿ.ಮಳಿಯೆ.  

ವಿಜ್ಞಾನಿಗಳಾದ ಜಾನ್ ಕೆಲಬ್, ಕಿರಣ್ ಮರಾಠೆ, ಕೃಷ್ಣಮೇಘ ಕುಂಟೆ ಮತ್ತು ಕೆನಡಾದ ವೈನೆ ಮ್ಯಾಡಿಸನ್ ಕೂಡ ಈ ಸಂಶೋಧನೆಗೆ ಕೈ ಜೋಡಿಸಿದ್ದಾರೆ.

ಬೆಂಗಳೂರಿನ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ (ಎನ್‌ಸಿಬಿಎಸ್‌) ಮತ್ತು ಯೂನಿವರ್ಸಿಟಿ ಆಫ್ ಬ್ರಿಟಿಷ್ ಕೊಲಂಬಿಯಾ ಲ್ಯಾಬ್‌ ಸಹಯೋಗದಲ್ಲಿ ಈ ಸಂಶೋಧನೆಯನ್ನು ಹೊರ ಪ್ರಪಂಚಕ್ಕೆ ಪರಿಚಸಿದ್ದೇವೆ ಎಂದು ತಂಡದ ಸದಸ್ಯರು ‘ಪ್ರಜಾವಾಣಿ’ಗೆ ತಿಳಿಸಿದರು.

ದೇವರಾಯನದುರ್ಗದಲ್ಲಿ ಪತ್ತೆ ಮಾಡಲಾಗಿರುವ ‘ತೆಂಕಣ ಜಯಮಂಗಲಿ’ ಹೊಸ ಪ್ರಬೇಧದ ಜೇಡ
ದೇವರಾಯನದುರ್ಗದಲ್ಲಿ ಪತ್ತೆ ಮಾಡಲಾಗಿರುವ ‘ತೆಂಕಣ ಜಯಮಂಗಲಿ’ ಹೊಸ ಪ್ರಬೇಧದ ಜೇಡ

ಹೊಂದಾಣಿಕೆ ಆಗದ ಡಿಎನ್‌ಎ

ಈಗಾಗಲೇ ಪತ್ತೆ ಮಾಡಲಾದ ಹಲವಾರು ಜೇಡಗಳ ವಂಶವಾಹಿ (ಡಿಎನ್‌ಎ) ಜತೆ ಪ್ರಯೋಗಾಲಯದಲ್ಲಿ ಈ ಜೇಡವನ್ನು ಹೋಲಿಕೆ ಮಾಡಿ ನೋಡಲಾಗಿದೆ. ಜೇಡಗಳ ಡಿಎನ್‌ಎ ಜತೆ ಇದು ಹೊಂದಾಣಿಕೆ ಆಗಿಲ್ಲ. ಹಾಗೆಯೇ ಈ ಜೇಡದ ಮೈಬಣ್ಣ ದೇಹದ ವಿನ್ಯಾಸ ಕೂಡ ಇತರ ಜೇಡಗಳಿಗಿಂತ ಭಿನ್ನವಾಗಿದೆ. ಇಂತಹ ವಿಭಿನ್ನ ಹೋಲಿಕೆಗಳ ಆಧಾರದ ಮೇಲೆ ಇದನ್ನು ಹೊಸ ಪ್ರಭೇದದ ಜೇಡ ಎಂದು ಗುರುತಿಸಲಾಗಿದೆ. ಈ ಕುರಿತ ಸಂಶೋಧನಾ ಬರಹ ಅಂತರರಾಷ್ಟ್ರೀಯ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಇದಕ್ಕೆ ವಿಶ್ವದ ಇತರ ವಿಜ್ಞಾನಿಗಳ ಸಲಹೆ ಪ್ರತಿಕ್ರಿಯಿ ವ್ಯಕ್ತವಾದ ನಂತರ ‘ತೆಂಕಣ ಜಯಮಂಗಲಿ’ ಜೇಡ ಹೇಗೆ ವಿಭಿನ್ನ ಅನ್ನುವುದು ಮತ್ತಷ್ಟು ನಿಖರವಾಗಲಿದೆ ಎನ್ನುತ್ತದೆ ಸಂಶೋಧಕರ ತಂಡ.

ದೇವರಾಯನದುರ್ಗ ಪ್ರದೇಶವು ಜೀವವೈವಿಧ್ಯವನ್ನು ಪೋಷಿಸುತ್ತ ಬಂದಿದೆ. ಈ ಹೊಸ ಪ್ರಭೇದದ ಜೇಡದಂತೆ ವಿಜ್ಞಾನಕ್ಕೆ ಪರಿಚಯವಿಲ್ಲದ ಇನ್ನೂ ಅನೇಕ ಜೀವಿಗಳು ಈ ಬೆಟ್ಟದ ಸುತ್ತಮುತ್ತ ಇವೆ.
–ವೈ.ಟಿ.ಲೋಹಿತ್‌, ಜೇಡಗಳ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.