ADVERTISEMENT

ರಾಜ್ಯದ ಶೇ 23 ಪ್ರದೇಶದಲ್ಲಿ ಅಂತರ್ಜಲ ಅತಿ ಬಳಕೆ; ಪ್ರತಿಕ್ರಿಯೆ ಕೇಳಿದ ಎನ್‌ಜಿಟಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2023, 0:30 IST
Last Updated 29 ನವೆಂಬರ್ 2023, 0:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಭಾರತದಲ್ಲಿ ಪಾತಾಳಕ್ಕೆ ಇಳಿಯುತ್ತಿರುವ ಅಂತರ್ಜಲ ಮಟ್ಟವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪ್ರಧಾನ ಪೀಠವು, ಕರ್ನಾಟಕ ಸೇರಿದಂತೆ 19 ರಾಜ್ಯ ಸರ್ಕಾರಗಳು, ಕೇಂದ್ರ ಅಂತರ್ಜಲ ಮಂಡಳಿ, ಜಲಶಕ್ತಿ ಸಚಿವಾಲಯ ಹಾಗೂ ಪರಿಸರ ಸಚಿವಾಲಯದಿಂದ ಪ್ರತಿಕ್ರಿಯೆ ಕೇಳಿದೆ. 

ಸ್ವಯಂಪ್ರೇರಿತ ‍‍ಪ್ರಕರಣ ದಾಖಲಿಸಿಕೊಂಡಿರುವ ನ್ಯಾಯಮೂರ್ತಿ ಪ್ರಕಾಶ್‌ ಶ್ರೀವಾಸ್ತವ ಹಾಗೂ ತಜ್ಞ ಸದಸ್ಯ ಎ.ಸೆಂಥಿಲ್‌ ವೇಲ್‌ ಅವರನ್ನು ಒಳಗೊಂಡ ಪೀಠ, ‘ಸಮಸ್ಯೆ ಗಂಭೀರವಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದೆ.

ADVERTISEMENT

ಈ ನಡುವೆ, ನ್ಯಾಯಪೀಠಕ್ಕೆ ವರದಿ ಸಲ್ಲಿಸಿರುವ ಕೇಂದ್ರ ಅಂತರ್ಜಲ ಮಂಡಳಿ, ‘ಕರ್ನಾಟಕದಲ್ಲಿ 1,70,647 ಚದರ ಕಿ.ಮೀ. ಅಂತರ್ಜಲ ಮರುಪೂರಣಕ್ಕೆ ಯೋಗ್ಯವಾದ ಪ್ರದೇಶವಿದೆ. ಆದರೆ, 39,352.66 ಚದರ ಕಿ.ಮೀ. ಪ್ರದೇಶದಲ್ಲಿ ಅಂತರ್ಜಲದ ಅತಿಯಾದ ಬಳಕೆಯಾಗಿದೆ. 6,580 ಪ್ರದೇಶದಲ್ಲಿ ಸಮಸ್ಯೆ ಗಂಭೀರವಾಗಿದೆ. ಒಟ್ಟಾರೆಯಾಗಿ, ರಾಜ್ಯದ ಎಲ್ಲ ಕಡೆಗಳಲ್ಲಿ ಅಂತರ್ಜಲದ ಹೊರೆ ತೆಗೆಯುವಿಕೆ ಪ್ರಮಾಣ ಗಣನೀಯವಾಗಿ ಹೆಚ್ಚಿದೆ’ ಎಂದು ಹೇಳಿದೆ. 

‘ವಿಶ್ವಸಂಸ್ಥೆಯ ಸಂಶೋಧನಾ ವರದಿಯೊಂದರ ಪ್ರಕಾರ, ಭಾರತದಲ್ಲಿ ಅಂತರ್ಜಲ ಮಟ್ಟವು 2025ರ ವೇಳೆಗೆ ಭಾರಿ ಕಡಿಮೆಯಾಗಲಿದೆ. ಸಂಶೋಧನೆಗಳ ಪ್ರಕಾರ, ಭಾರತದಲ್ಲಿನ ಇಂಡೋ-ಗಂಗಾ ಜಲಾನಯನ ಪ್ರದೇಶದ ಕೆಲವು ಪ್ರದೇಶಗಳು ಈಗಾಗಲೇ ಅಂತರ್ಜಲ ಕುಸಿತದ ತುದಿಯನ್ನು ಮೀರಿವೆ. 2025ರ ವೇಳೆಗೆ ಸಂಪೂರ್ಣ ವಾಯವ್ಯ ಪ್ರದೇಶದಲ್ಲಿ ಅಂತರ್ಜಲ ಲಭ್ಯತೆ ಭಾರಿ ಕಡಿಮೆಯಾಗಲಿದೆ. ಸಂಶೋಧನಾ ವರದಿಯಲ್ಲಿ ಸೂಚಿಸಿರುವ ಎಲ್ಲ ಶಿಫಾರಸುಗಳನ್ನು ಸರ್ಕಾರ ಜಾರಿಗೆ ತಂದಿದೆ ಎಂದು ಅಂತರ್ಜಲ ಮಂಡಳಿ ಹೇಳಿದೆ. ಆದರೆ, ವಾಸ್ತವ ಸ್ಥಿತಿ ಭಿನ್ನವಾಗಿದೆ. ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಕೆಲವೊಂದು ಪ್ರದೇಶಗಳಲ್ಲಿ ಅಂತರ್ಜಲದ ವ್ಯಾಪಕ ಬಳಕೆಯಾಗಿದೆ. ಇದು ಕಳವಳಕಾರಿ ಬೆಳವಣಿಗೆ’ ಎಂದು ಪೀಠ ಅಭಿಪ್ರಾಯಪಟ್ಟಿದೆ. ಪ್ರಕರಣದ ವಿಚಾರಣೆಯನ್ನು 2024ರ ಫೆಬ್ರುವರಿ 24ಕ್ಕೆ ಮುಂದೂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.