ADVERTISEMENT

ತೆರಿಗೆ ಅನ್ಯಾಯದ ಕೂಗೆತ್ತಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಅಕ್ಟೋಬರ್ 2024, 15:05 IST
Last Updated 12 ಅಕ್ಟೋಬರ್ 2024, 15:05 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

ಬೆಂಗಳೂರು: ‘ಕೇಂದ್ರದ ಎನ್‌ಡಿಎ ಸರ್ಕಾರದ ತೆರಿಗೆ ಅನ್ಯಾಯದ ವಿರುದ್ಧ ಜಾತಿ-ಧರ್ಮ, ಪಕ್ಷ-ಪಂಥದ ಭೇದವಿಲ್ಲದೆ ಎಲ್ಲ ಕನ್ನಡಿಗರೂ ಧ್ವನಿ ಎತ್ತುವ ಶಪಥ ಮಾಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಕೇಂದ್ರ ಸರ್ಕಾರ ತೆರಿಗೆ ಪಾಲಿನ ಹಂಚಿಕೆ ಕುರಿತ ‘ಪ್ರಜಾವಾಣಿ’ಯ ಮುಖ‍‍‍ಪುಟದ ವರದಿಯನ್ನು ಟ್ಯಾಗ್‌ ಮಾಡಿ ತಮ್ಮ ಅಧಿಕೃತ ‘ಎಕ್ಸ್‌’ ಖಾತೆಯಲ್ಲಿ, ನಾಡಿಗೆ ಅನ್ಯಾಯವಾಗಿದೆ ಎಂದು ಕಿಡಿಕಾರಿದ್ದಾರೆ.

ADVERTISEMENT

‘ಒಕ್ಕೂಟ ವ್ಯವಸ್ಥೆಯೆಡೆಗೆ ಗೌರವವನ್ನು ಕರ್ನಾಟಕ ಉಳಿಸಿಕೊಂಡೇ, ತನ್ನ ನ್ಯಾಯಯುತ ಪಾಲು ಪಡೆಯಲು ಹೇಗೆ ಮುಂದುವರೆಯಬೇಕು ಎನ್ನುವ ಚರ್ಚೆ ಸಾರ್ವಜನಿಕವಾಗಿ ನಡೆಯಬೇಕಿದೆ. ಇಂತಹ ಒಂದು ರಚನಾತ್ಮಕ ಚರ್ಚೆ ವಿಜಯದಶಮಿಯ ದಿನದಿಂದಲೇ ಶುರುವಾಗಲಿ’ ಎಂದಿದ್ದಾರೆ.

‘ತೆರಿಗೆ ಪಾಲಿನ ಹಂಚಿಕೆಯಲ್ಲಿ ರಾಜ್ಯಕ್ಕೆ ಮತ್ತೆ ಅನ್ಯಾಯ ಮಾಡಲಾಗಿದೆ. 28 ರಾಜ್ಯಗಳಿಗೆ ಬಿಡುಗಡೆ ಮಾಡಿರುವ ₹1,78,193 ಕೋಟಿಯಲ್ಲಿ ಕರ್ನಾಟಕಕ್ಕೆ ನೀಡಿರುವುದು ಕೇವಲ ₹6,498 ಕೋಟಿ (ಶೇ 3.64). ಈ ಅನ್ಯಾಯದ ವಿರುದ್ಧ ಎಲ್ಲರೂ ಒಟ್ಟಾಗಿ ನಿಲ್ಲುವ ಪ್ರಮಾಣ ಮಾಡಬೇಕು. ಕರ್ನಾಟಕವನ್ನು ಕಡೆಗಣಿಸುವಂತಹ ಅನ್ಯಾಯವನ್ನು ನಾವೇನು ಮಾಡಿದ್ದೇವೆ ಎಂದು ಪ್ರತಿಯೊಬ್ಬ ಸ್ವಾಭಿಮಾನಿ ಕನ್ನಡಿಗನೂ ಪ್ರಶ್ನಿಸಬೇಕು’ ಎಂದಿದ್ದಾರೆ.

‘ಬಿಮಾರ್‌ (ರೋಗಗ್ರಸ್ತ) ರಾಜ್ಯಗಳೆಂದೇ ಕುಖ್ಯಾತಿ ಪಡೆದಿರುವ ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ ಮತ್ತು ರಾಜಸ್ಥಾನಕ್ಕೆ ಹೆಚ್ಚಿನ ತೆರಿಗೆ ಪಾಲು ನೀಡಲಾಗಿದೆ. ದುರಾಡಳಿತ ಮತ್ತು ಭ್ರಷ್ಟಾಚಾರದಿಂದ ಅಭಿವೃದ್ಧಿ ಪಥದಲ್ಲಿ ಹಿಮ್ಮುಖವಾಗಿ ಸಾಗುತ್ತಿರುವ ಆ ರಾಜ್ಯಗಳಿಗಾಗಿ ಕನ್ನಡಿಗರ ಬೆವರ ಗಳಿಕೆ ಏಕೆ ಪೋಲಾಗಬೇಕು’ ಎಂದು ಅವರು ಪ್ರಶ್ನಿಸಿದ್ದಾರೆ.

‘ತೆರಿಗೆ ಹಂಚಿಕೆಗಾಗಿ ನಿಗದಿ ಮಾಡಿರುವ ಮಾನದಂಡದಲ್ಲಿಯೇ ಕೇಂದ್ರ ಸರ್ಕಾರದ ಪ್ರಗತಿ ವಿರೋಧಿ ಧೋರಣೆ ಕಾಣುತ್ತದೆ. ಅಭಿವೃದ್ಧಿಶೀಲ ರಾಜ್ಯಗಳನ್ನು ಶಿಕ್ಷಿಸಿ, ದುರಾಡಳಿತ ನಡೆಸುತ್ತಿರುವ ರಾಜ್ಯಗಳನ್ನು ಪುರಸ್ಕರಿಸುವ ತೆರಿಗೆ ಹಂಚಿಕೆ ಮಾನದಂಡವನ್ನೇ ಬದಲಾಯಿಸಬೇಕಿದೆ. ಈ ಕುರಿತು  ಒತ್ತಾಯಿಸುತ್ತಲೇ ಬಂದಿದ್ದೇವೆ. ಆದರೂ, ಕೇಂದ್ರ ಸರ್ಕಾರ ಕಿವುಡಾಗಿದೆ’ ಎಂದಿದ್ದಾರೆ.

‘ಕೇಂದ್ರ ಸರ್ಕಾರದ ತಾರತಮ್ಯ ಧೋರಣೆಯು ಕರ್ನಾಟಕ ಸೇರಿದಂತೆ ಭಾರತದ ದಕ್ಷಿಣದ ರಾಜ್ಯಗಳನ್ನು ನಿರಂತರವಾಗಿ ಅನ್ಯಾಯದ ಶೂಲಕ್ಕೆ ದೂಡಿದೆ. ಯೋಜನಾ ಆಯೋಗವನ್ನು ರದ್ದುಗೊಳಿಸಿ, ರಾಜ್ಯ ಸರ್ಕಾರಗಳಿಗೆ ಧ್ವನಿಯೇ ಇಲ್ಲದ ರೀತಿ ನೀತಿ ಆಯೋಗ ರಚಿಸಲಾಯಿತು. 15ನೇ ಹಣಕಾಸು ಆಯೋಗದ ಮಾರ್ಗಸೂಚಿ ಅಂಶಗಳಲ್ಲೂ ಬದಲಾವಣೆ ಮಾಡಿತು. ಅತಿವೃಷ್ಟಿ, ಅನಾವೃಷ್ಟಿ ನೆರವು ನೀಡಲೂ ಕೇಂದ್ರ ಸತಾಯಿಸುತ್ತಿದೆ’ ಎಂದು ದೂರಿದ್ದಾರೆ.

ಮುಖ್ಯಮಂತ್ರಿ ವಾದ ಸರಣಿ...

ಕರ್ನಾಟಕಕ್ಕೆ ₹79,770 ಕೋಟಿ ನಷ್ಟ

14ನೇ ಹಣಕಾಸು ಆಯೋಗ ಕರ್ನಾಟಕದ ತೆರಿಗೆ ಪಾಲು ಶೇ 4.713 ಎಂದು ನಿಗದಿಪಡಿಸಿತ್ತು. ಈಗಿನ 15ನೇ ಹಣಕಾಸು ಆಯೋಗ ಈ ಪಾಲನ್ನು ಕಡಿಮೆಗೊಳಿಸಿ ಶೇ 3.647ಕ್ಕೆ ಇಳಿಸಿದೆ. ಇದರಿಂದ 2021-26ರ ವರೆಗಿನ ಐದು ವರ್ಷಗಳಲ್ಲಿ ತೆರಿಗೆ ಪಾಲಿನಲ್ಲಿ ಅಂದಾಜು ₹62,275 ಕೋಟಿಯನ್ನು ಕರ್ನಾಟಕ ಕಳೆದುಕೊಂಡಿದೆ.

ಈ ಅನ್ಯಾಯವನ್ನು ಪರಿಗಣಿಸಿದ್ದ ಹಣಕಾಸು ಆಯೋಗ ವಿಶೇಷ ಅನುದಾನದ ರೂಪದಲ್ಲಿ ₹5,495 ಕೋಟಿ ನೀಡುವಂತೆ ಶಿಫಾರಸು ಮಾಡಿತ್ತು. ಅದನ್ನೂ ನೀಡದೆ ಕೇಂದ್ರ ಅನ್ಯಾಯ ಎಸಗಿದೆ. ಈ ಎಲ್ಲ ನಷ್ಟಗಳನ್ನು ಸೇರಿಸಿದರೆ 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕ ರಾಜ್ಯಕ್ಕೆ ₹79,770 ಕೋಟಿ ನಷ್ಟವಾಗಿದೆ.

₹48 ಲಕ್ಷ ಕೋಟಿಗೇರಿದರೂ ಸಿಗುವುದು₹44 ಸಾವಿರ ಕೋಟಿ

2018-19ರಲ್ಲಿ ಕೇಂದ್ರ ಬಜೆಟ್‌ ₹24.42 ಲಕ್ಷ ಕೋಟಿಯಷ್ಟಿತ್ತು. ಆಗ ರಾಜ್ಯಕ್ಕೆ ₹46,288 ಕೋಟಿ ಸಿಕ್ಕಿತ್ತು. 2024–25ರ ವೇಳೆಗೆ ಕೇಂದ್ರ ಬಜೆಟ್ ದುಪ್ಪಟ್ಟಾಗಿ ₹48.20 ಲಕ್ಷ ಕೋಟಿಗೆ ಏರಿಕೆಯಾಗಿದೆ. ಆದರೆ ರಾಜ್ಯಕ್ಕೆ ಸಿಗುತ್ತಿರುವ ಪಾಲು ₹44,485 ಕೋಟಿ ಇಳಿಕೆಯಾಗಿದ್ದು, ಅನುದಾನದ ರೂಪದಲ್ಲಿ ಹೆಚ್ಚುವರಿ ₹15,299 ಕೋಟಿ ಸಿಗುತ್ತಿದೆ ಅಷ್ಟೆ. ಕೇಂದ್ರದ ಬಜೆಟ್‌ ಏರಿಕೆಯಾದ ಮಟ್ಟದಲ್ಲೇ ತೆರಿಗೆ ಪಾಲು ಹಂಚಿದ್ದರೆ, ರಾಜ್ಯಕ್ಕೆ ಕನಿಷ್ಠ ₹1 ಲಕ್ಷ ಕೋಟಿ ಸಿಗಬೇಕಿತ್ತು. ಆದರೆ ರಾಜ್ಯದ ಈ ಹಕ್ಕನ್ನು ಕಸಿದುಕೊಳ್ಳಲಾಗಿದೆ.

₹59,274 ಕೋಟಿ ಖೋತಾ

ದೇಶದ ಒಟ್ಟು ಜಿಎಸ್‌ಟಿಯಲ್ಲಿ ಶೇ 17ರಷ್ಟು ರಾಜ್ಯದಲ್ಲೇ ಸಂಗ್ರಹವಾಗುತ್ತಿದ್ದು, ತೆರಿಗೆ ಸಂಗ್ರಹಿಸುವ ಕೊಡುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಜಿಎಸ್‌ಟಿಯ ಅವೈಜ್ಞಾನಿಕ ಅನುಷ್ಠಾನ
ದಿಂದಾಗಿ ಕರ್ನಾಟಕವು 2017-18ರಿಂದ 2023-24ರ ವರೆಗೆ ಸುಮಾರು ₹59,274 ಕೋಟಿ ಕಳೆದುಕೊಂಡಿದೆ.

ದೇಶದ ಒಟ್ಟು ತೆರಿಗೆ ಸಂಗ್ರಹಕ್ಕೆ ಕರ್ನಾಟಕ ₹4 ಲಕ್ಷ ಕೋಟಿ ನೀಡುತ್ತಿದ್ದರೂ ತೆರಿಗೆ ಹಂಚಿಕೆ ರೂಪದಲ್ಲಿ ನಮಗೆ ಸಿಗುತ್ತಿರುವ ಪಾಲು ₹45,000 ಕೋಟಿ ಮಾತ್ರ. ಇದರ ಜೊತೆಗೆ ಅನುದಾನದ ರೂಪದಲ್ಲಿ ಅಂದಾಜು ₹15,000 ಕೋಟಿ ಸೇರಿರುತ್ತದೆ. ವಾಪಸ್ ಬರುತ್ತಿರುವ ಮೊತ್ತ ಲೆಕ್ಕಹಾಕಿದರೆ, ನಾವು ಕೊಡುತ್ತಿರುವ ಪ್ರತಿರೂಪಾಯಿಗೆ 15 ಪೈಸೆ ಮಾತ್ರ ರಾಜ್ಯಕ್ಕೆ ಸಿಗುತ್ತಿದೆ.

  • ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶಕ್ಕೆ ಹೆಚ್ಚು ಪಾಲು ಏಕೆ?

  • ರೋಗಗ್ರಸ್ತ ರಾಜ್ಯಗಳಿಗಾಗಿ ಕನ್ನಡಿಗನ ಬೆವರ ಗಳಿಕೆ ಪೋಲು

  • ಕೇಂದ್ರದ ಅನ್ಯಾಯವನ್ನು ಎಷ್ಟು ದಿನ ಸಹಿಸಿಕೊಳ್ಳಲು ಸಾಧ್ಯ?

  •  ತೆರಿಗೆ ಹಂಚಿಕೆ ಮಾನದಂಡವನ್ನೇ ಬದಲಾಯಿಸಿ

  • ಅತಿವೃಷ್ಟಿ, ಅನಾವೃಷ್ಟಿ ನೆರವಿಗೂ ಸತಾಯಿಸುವ ಕೇಂದ್ರ

  • ನ್ಯಾಯಯುತ ಪಾಲಿನ ದಾರಿಯ ಹುಡುಕಾಟಕ್ಕೆ ಚರ್ಚೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.