ಮಡಿಕೇರಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಫೆ.6ರಂದು ಮಡಿಕೇರಿಗೆ ಭೇಟಿ ನೀಡುತ್ತಿದ್ದು, ಅವರು ಸಂಚರಿಸುವ ಮಾರ್ಗದಲ್ಲಿ ಅಂಗಡಿ, ಹೋಟೆಲ್ ಹಾಗೂ ಮನೆಯ ಮುಂಬಾಗಿಲು ಸಹ ಬಂದ್ ಮಾಡಬೇಕು ಎಂದು ಕೊಡಗು ಜಿಲ್ಲಾಡಳಿತವು ಸೂಚನೆ ನೀಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದೆ.
ರಾಷ್ಟ್ರಪತಿ ಅವರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಮೈದಾನ ಅಥವಾ ಗಾಲ್ಫ್ ಮೈದಾನದ ಹೆಲಿಪ್ಯಾಡ್‌ಗೆ ಬಂದಿಳಿಯುವ ಸಾಧ್ಯತೆಯಿದ್ದು ಆ ಮಾರ್ಗದ ರಸ್ತೆ ಬದಿಯ ಮನೆಗಳ ಪ್ರವೇಶದ ಬಾಗಿಲು ರಸ್ತೆಗೆ ಮುಖ ಮಾಡಿದ್ದರೆ, ರಾಷ್ಟ್ರಪತಿ ಸಂಚರಿಸುವ ವೇಳೆ ನಿವಾಸಿಗಳು ಮನೆಯ ಮುಂಬಾಗಿಲು ಬಂದ್ ಮಾಡಬೇಕು. ಹಿಂದಿನ ಬಾಗಿಲಿನಿಂದ ಓಡಾಟ ನಡೆಸಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ. ಇದಕ್ಕೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಕೆಲವು ಮನೆಗಳಿಗೆ ನಗರಸಭೆ ನೋಟಿಸ್ ನೀಡಲೂ ಮುಂದಾಗಿದೆ.
‘ರಾಷ್ಟ್ರಪತಿ ಸಂಚರಿಸುವ ಮಾರ್ಗವನ್ನು ಅಂದೇ ಬೆಳಿಗ್ಗೆ ಧ್ವನಿವರ್ಧಕದ ಮೂಲಕ ತಿಳಿಸಲಾಗುವುದು. ರಾಷ್ಟ್ರಪತಿ ಭೇಟಿ ವೇಳೆ ಶಿಷ್ಟಾಚಾರ ಪಾಲಿಸುವುದು ನಮ್ಮ ಕೆಲಸ’ ಎಂದು ಎಂದು ನಗರಸಭೆ ಪೌರಾಯುಕ್ತ ರಾಮದಾಸ್ ತಿಳಿಸಿದ್ದಾರೆ.
‘ರಾಷ್ಟ್ರಪತಿ ಸಂಚರಿಸುವ ರಸ್ತೆಯ ಬದಿಯ ಮನೆಗಳ ಮುಂದಿನ ಬಾಗಿಲು ಮುಚ್ಚಬೇಕಂತೆ. ಈ ಹಿಂದೆಯೂ ಕೊಡಗು ಜಿಲ್ಲೆಗೆ ಅಬ್ದುಲ್ ಕಲಾಂ ಬಂದಿದ್ದರು. ಆಗ ಈ ನಿಯಮ ಇರಲಿಲ್ಲ’ ಎಂದು ಸಿದ್ದಾಪುರದ ನಿವಾಸಿ ಅಜೀಜ್ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ. ಅದಕ್ಕೆ ಹಲವರು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.