ADVERTISEMENT

‘ದಿ ರಾಮೇಶ್ವರ ಕೆಫೆ’ ಬಾಂಬ್‌ ಸ್ಪೋಟ ಪ್ರಕರಣ: ವೇಷ ಮರೆಸಿಕೊಂಡು ಶಂಕಿತರ ಓಡಾಟ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2024, 15:35 IST
Last Updated 29 ಮಾರ್ಚ್ 2024, 15:35 IST
ಮುಸಾವೀರ್‌ ಹುಸೇನ್‌ ಶಾಜೀದ್‌
ಮುಸಾವೀರ್‌ ಹುಸೇನ್‌ ಶಾಜೀದ್‌   

ಬೆಂಗಳೂರು: ‘ದಿ ರಾಮೇಶ್ವರ ಕೆಫೆ’ ಬಾಂಬ್‌ ಸ್ಫೋಟ ಪ್ರಕರಣದ ತನಿಖೆ ಚುರುಕುಗೊಳಿಸಿರುವ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ತಲೆಮರೆಸಿಕೊಂಡಿರುವ ಇಬ್ಬರು ಶಂಕಿತರ ಸುಳಿವು ನೀಡಿದವರಿಗೆ ಪ್ರತ್ಯೇಕವಾಗಿ ₹10 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದೆ.

ಶಂಕಿತರಾದ ಮುಸಾವೀರ್‌ ಹುಸೇನ್‌ ಶಾಜೀದ್‌ ಹಾಗೂ ಅಬ್ದುಲ್‌ ಮತೀನ್‌ ಅಹ್ಮದ್‌ ತಾಹಾ ಅವರಿರುವ ಸ್ಥಳದ ಬಗ್ಗೆ ಮಾಹಿತಿ ನೀಡಿದರೆ ಬಹುಮಾನ ನೀಡಲಾಗುವುದು. ಶಂಕಿತರ ಸುಳಿವು ಕೊಟ್ಟವರ ಹೆಸರನ್ನು ಗೋಪ್ಯವಾಗಿಡಲಾಗುವುದು ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

‘ಸದ್ಯದ ಎನ್‌ಐಎ ತನಿಖೆಯಲ್ಲಿ, ತೀರ್ಥಹಳ್ಳಿಯ ಶಂಕಿತ ಮುಸಾವೀರ್‌ ಹುಸೇನ್‌ ಶಾಜೀದ್‌ ಎಂಬಾತನೇ ಮಾರ್ಚ್‌ 1ರಂದು ಬ್ಯಾಗ್‌ನಲ್ಲಿ ದಿ ರಾಮೇಶ್ವರ ಕೆಫೆಗೆ ಬಾಂಬ್‌ ತಂದಿಟ್ಟಿದ್ದ ಎಂಬುದು ಗೊತ್ತಾಗಿದೆ. ಈತನ ಕೃತ್ಯಕ್ಕೆ ತೀರ್ಥಹಳ್ಳಿಯ ಇನ್ನೊಬ್ಬ ಶಂಕಿತ ಅಬ್ದುಲ್‌ ಮತೀನ್‌ ಅಹ್ಮದ್ ತಾಹಾ ಸಹಕಾರ ನೀಡಿದ್ದ. ಇವರು ನಡೆಸಿದ್ದ ಕೃತ್ಯಕ್ಕೆ ತನಿಖೆ ವೇಳೆ ಪುರಾವೆಗಳು ಸಿಕ್ಕಿವೆ. ಅಲ್ಲದೇ ಬಂಧಿತ ಪ್ರಮುಖ ಸಂಚುಕೋರ ಮುಜಮೀಲ್‌ ಶರೀಫ್‌ ವಿಚಾರಣೆಯ ವೇಳೆ ನೀಡಿದ ಮಾಹಿತಿ ಆಧರಿಸಿ, ಇಬ್ಬರ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

‘ಮುಸಾವೀರ್‌ ಹುಸೇನ್‌ ಶಾಜೀದ್‌ಗೆ ಅಂದಾಜು 30 ವರ್ಷ ಇರಬಹುದು. ಈತ ಕಟುಮಸ್ತಾದ ದೇಹ ಹೊಂದಿದ್ದು, ಸುಮಾರು 6 ಅಡಿ 2 ಇಂಚು ಎತ್ತರವಿದ್ದಾನೆ. ಮಹಮ್ಮದ್‌ ಜುನೇದ್‌ ಸೈಯದ್‌ ಹೆಸರಿನಲ್ಲಿ ನಕಲಿ ಚಾಲನಾ ಪರವಾನಗಿ ಹೊಂದಿದ್ದಾನೆ. ಇನ್ನೂ ಹಲವು ನಕಲಿ ದಾಖಲಾತಿ ತಯಾರಿಸಿಕೊಂಡಿದ್ದಾನೆ. ಜೀನ್ಸ್‌ ಪ್ಯಾಂಟ್‌, ಟೀ ಶರ್ಟ್‌, ಸ್ಮಾರ್ಟ್‌ ವಾಚ್‌, ಮಾಸ್ಕ್‌ ಧರಿಸಿ ಓಡಾಟ ನಡೆಸುತ್ತಿದ್ದಾನೆ. ಕೆಲವೊಮ್ಮೆ ವಿಗ್‌ ಹಾಗೂ ನಕಲಿ ಗಡ್ಡ ವೇಷದಲ್ಲಿ ಓಡಾಟ ನಡೆಸುತ್ತಿದ್ದಾನೆ. ಕಡಿಮೆ ದರದ ಹೋಟೆಲ್‌ ಹಾಗೂ ಪುರುಷರ ಹಾಸ್ಟೆಲ್‌ಗಳಲ್ಲಿ ವಾಸ್ತವ್ಯ ಮಾಡುತ್ತಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

‘ಅಬ್ದುಲ್‌ ಮತೀನ್‌ ಅಹ್ಮದ್ ತಾಹಾ ಎಂಬಾತನಿಗೂ ಅಂದಾಜು 30 ವರ್ಷ ಇರಬಹುದು. ಸಾಧಾರಣ ಮೈಕಟ್ಟು ಹೊಂದಿದ್ದು, 5 ಅಡಿ 5 ಇಂಚು ಎತ್ತರವಿದ್ದಾನೆ. ಮುಂಭಾಗದಲ್ಲಿ ತಲೆಕೂದಲು ಇಲ್ಲ. ವಿಘ್ನೇಶ್‌ ಹೆಸರಿನಲ್ಲಿ ಆಧಾರ್‌ ಕಾರ್ಡ್‌ ಹೊಂದಿದ್ದಾನೆ. ಉಳಿದ ಕೆಲವು ದಾಖಲೆಗಳನ್ನು ಹಿಂದೂ ಯುವಕರ ಹೆಸರಿನಲ್ಲಿ ನಕಲಿ ಆಗಿ ತಯಾರಿಸಿಕೊಂಡಿದ್ದಾನೆ. ಹೆಚ್ಚಾಗಿ ಹಾಸ್ಟೆಲ್‌ಗಳಲ್ಲಿ ಮಾಸ್ತವ್ಯ ಮಾಡುತ್ತಿದ್ದಾನೆ. ಇಬ್ಬರು ಹೊರಗೆ ಓಡಾಟ ನಡೆಸುವಾಗ ನಾನಾ ವೇಷ ಧರಿಸುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಇಬ್ಬರು ಶಂಕಿತರ ಸುಳಿವು ಲಭಿಸಿದ ಕೂಡಲೇ 080–29510900, 8904241100 ಹಾಗೂ ಇ–ಮೇಲ್‌ ವಿಳಾಸ info.blr.nia@gov.inಗೆ ಮಾಹಿತಿ ನೀಡಬಹುದು ಅಥವಾ ವಿಳಾಸ: ರಾಷ್ಟ್ರೀಯ ತನಿಖಾ ದಳ, 3ನೇ ಮಹಡಿ, ಬಿಎಸ್‌ಎನ್‌ಎಲ್ ಟೆಲಿಫೋನ್ ಎಕ್ಸ್‌‌ಚೆಂಜ್, 80 ಅಡಿ ರಸ್ತೆ, ಎಚ್‌ಎಎಲ್ 2ನೇ ಹಂತ, ಇಂದಿರಾನಗರ, ಬೆಂಗಳೂರು 08 –ಇಲ್ಲಿಗೆ ಕಳುಹಿಸಬಹುದು ಎಂದು ಅಧಿಕಾರಿಗಳು ಕೋರಿದ್ದಾರೆ.

ಅಬ್ದುಲ್‌ ಮಥೀನ್‌ ಅಹ್ಮದ್‌ ತಾಹಾ

ಎನ್‌ಐಎ ಕಸ್ಟಡಿಗೆ ಪ್ರಮುಖ ಸಂಚುಕೋರ

ಬಂಧಿತ ಚಿಕ್ಕಮಗಳೂರಿನ ಮೂಡಿಗೆರೆ ಮುಜವೀರ್‌ ಶರೀಫ್‌ನನ್ನು ನಗರದ ಎನ್‌ಐಎ ವಿಶೇಷ ನ್ಯಾಯಾಲಯವು ಏಳು ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ನೀಡಿ ಆದೇಶಿಸಿದೆ. ಕಸ್ಟಡಿಗೆ ಪಡೆದಿರುವ ತನಿಖಾಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ. ಕೆಫೆ ಸ್ಫೋಟದ ಪ್ರಮುಖ ಆರೋಪಿಗೆ ಬಾಂಬ್ ತಯಾರಿಸಲು ಅಗತ್ಯವಾದ ಕಚ್ಚಾ ಸಾಮಗ್ರಿಗಳನ್ನು ಸಾಗಿಸಿರುವ ಜತೆಗೆ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಮಾಹಿತಿ ತನಿಖಾ ತಂಡಕ್ಕೆ ಲಭ್ಯವಾಗಿದೆ‌. ಹೀಗಾಗಿ ಹೆಚ್ಚಿನ ವಿಚಾರಣೆಗೆ ಅನುಮತಿ ನೀಡುವಂತೆ ಮಾಡಿಕೊಂಡ ಮನವಿ ಪುರಸ್ಕರಿಸಿದ ನ್ಯಾಯಾಲಯ ಶಂಕಿತನನ್ನು ಎನ್‌ಐಎ ಕಸ್ಟಡಿಗೆ ನೀಡಿದೆ. ‘ಕಳೆದ ಆರು ತಿಂಗಳ ಹಿಂದೆ ಬೆಂಗಳೂರು ತೊರೆದು ಮೂಡಿಗೆರೆಯ ಅಂಗಡಿಯೊಂದರಲ್ಲಿ ಈತ ಕೆಲಸ ಮಾಡುತ್ತಿದ್ದ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾಮಿಲ್ ಇಬ್ಬರು ಎಸ್ಸೆಸ್ಸೆಲ್ಸಿ ತನಕ ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡಿದ್ದರು’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.