ADVERTISEMENT

ದಿ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ: ಶಂಕಿತರಿಬ್ಬರು ಎನ್‌ಐಎ ಕಸ್ಟಡಿಗೆ

​ಪ್ರಜಾವಾಣಿ ವಾರ್ತೆ
Published 24 ಮೇ 2024, 15:36 IST
Last Updated 24 ಮೇ 2024, 15:36 IST
ದಿ ರಾಮೇಶ್ವರಂ ಕೆಫೆ
ದಿ ರಾಮೇಶ್ವರಂ ಕೆಫೆ   

ಬೆಂಗಳೂರು: ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೆ ಸಂಬಂಧಪಟ್ಟಂತೆ ದೇಶದ 11 ಸ್ಥಳಗಳ ಮೇಲೆ ಇತ್ತೀಚೆಗೆ ದಾಳಿ ಮಾಡಿದ್ದ ಎನ್‌ಐಎ ಅಧಿಕಾರಿಗಳು, ಪ್ರಕರಣದ ಶಂಕಿತರಾದ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್ ಅಹಮ್ಮದ್ ತಾಹಾನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮಾರ್ಚ್ 1ರಂದು ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಇಬ್ಬರನ್ನೂ ಏಪ್ರಿಲ್ 12ರಂದು ಕೊಲ್ಕತ್ತಾ ಬಳಿ ಬಂಧಿಸಲಾಗಿತ್ತು. ನ್ಯಾಯಾಂಗ ಬಂಧನದಲ್ಲಿದ್ದ ಅವರಿಬ್ಬರನ್ನು ಎನ್‌ಐಎ ಅಧಿಕಾರಿಗಳು, ಇದೀಗ ಪುನಃ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

‘ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದಲ್ಲಿ ವಿದೇಶಿ ಹ್ಯಾಂಡ್ಲರ್ ಪ್ರಮುಖ ಆರೋಪಿ. ಆತನ ಸೂಚನೆಯಂತೆ ಬಾಂಬ್ ಸ್ಫೋಟ ನಡೆದಿದೆ. ಬಂಧಿತ ಶಂಕಿತರು ಸಹ ವಿದೇಶಿ ಹ್ಯಾಂಡ್ಲರ್ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ, ಆತ ಯಾವ ದೇಶದಲ್ಲಿದ್ದಾನೆ? ಆತನ ಹೆಸರು ಏನು ಎಂಬುದು ಯಾರಿಗೂ ಗೊತ್ತಿಲ್ಲ. ಇದನ್ನು ಪತ್ತೆ ಮಾಡಲು ತನಿಖೆ ಮುಂದುವರಿಸಲಾಗಿದೆ. ಇದರ ಭಾಗವಾಗಿಯೇ, 11 ಶಂಕಿತರ ಸ್ಥಳಗಳ ಮೇಲೆ ಇತ್ತೀಚೆಗೆ ದಾಳಿ ಮಾಡಲಾಯಿತು’ ಎಂದು ತನಿಖಾ ಸಂಸ್ಥೆ ಮೂಲಗಳು ಹೇಳಿವೆ.

ADVERTISEMENT

‘11 ಶಂಕಿತರು, ಬಾಂಬ್ ಸ್ಫೋಟದ ಸಂಚು ಹಾಗೂ ಇತರೆ ಕೆಲಸಕ್ಕೆ ಹಣಕಾಸು ನೆರವು ನೀಡಿದ್ದಾರೆ. ಇವರಲ್ಲಿ ಕೆಲವರು, ವಿದೇಶಿ ಹ್ಯಾಂಡ್ಲರ್ ಜೊತೆ ಒಡನಾಟವಿಟ್ಟುಕೊಂಡಿದ್ದರು. ಅಂಥ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಅವರ ಹೇಳಿಕೆ ಪಡೆದು, ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ತಿಳಿಸಿವೆ.

‘11 ಶಂಕಿತರ ಪೈಕಿ ಕೆಲವರ ಹೇಳಿಕೆಯಲ್ಲಿ ಹೊಸ ಸಂಗತಿಗಳು ಪತ್ತೆಯಾಗಿವೆ. ಇದೇ ಕಾರಣಕ್ಕೆ, ನ್ಯಾಯಾಂಗ ಬಂಧನದಲ್ಲಿದ್ದ ಮುಸಾವೀರ್ ಹಾಗೂ ಅಬ್ದುಲ್ ತಾಹಾನನ್ನು ಮೇ 23ರಿಂದ ಮೇ 27ರವರೆಗೆ ಕಸ್ಟಡಿಗೆ ಪಡೆಯಲಾಗಿದೆ. ವಶಕ್ಕೆ ಪಡೆದವರು ಹಾಗೂ ಇಬ್ಬರೂ ಶಂಕಿತರನ್ನು ಮುಖಾಮುಖಿ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.