ADVERTISEMENT

ಭೂಕಬಳಿಕೆ ಕಾಯ್ದೆ ನಗರ ಪ್ರದೇಶಗಳಿಗೆ ಮಾತ್ರ ಅನ್ವಯ: ರೈತ ನಿರಾಳ

ವಿಶೇಷ ನ್ಯಾಯಾಲಯ ವ್ಯಾಪ್ತಿ ನಗರ ಪ್ರದೇಶಗಳಿಗೆ ಮಾತ್ರ ಅನ್ವಯ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2022, 19:46 IST
Last Updated 25 ಆಗಸ್ಟ್ 2022, 19:46 IST
   

ಬೆಂಗಳೂರು: ಭೂಕಬಳಿಕೆ ಕಾಯ್ದೆ ಇನ್ನು ಮುಂದೆ ಮಹಾನಗರಪಾಲಿಕೆ ಮತ್ತುನಗರಗಳ ವ್ಯಾಪ್ತಿಗೆ ಮಾತ್ರ ಅನ್ವಯವಾಗಲಿದ್ದು, ಗ್ರಾಮಾಂತರ ಪ್ರದೇಶವನ್ನು ಹೊರಗಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಸರ್ಕಾರಿ ಭೂಮಿ ಕಬಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಉದ್ದೇಶದಿಂದ 2011ರಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ‘ಕರ್ನಾಟಕ ಭೂಕಬಳಿಕೆ(ನಿಷೇಧ) ಕಾಯ್ದೆ’ಗೆ ತಿದ್ದುಪಡಿ ತರಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಕಾಯ್ದೆಯ ‘ಸೆಕ್ಷನ್‌ 2 ಡಿ’ ಗೆ ತಿದ್ದು‍‍‍ಪಡಿ ತರಲು ಸಮ್ಮತಿ ಕೊಟ್ಟಿದೆ.

ತಿದ್ದುಪಡಿ ಜಾರಿಗೊಂಡ ಬಳಿಕ, ಗ್ರಾಮೀಣ ಪ್ರದೇಶದ ರೈತರ ಭೂಕಬಳಿಕೆ ಪ್ರಕರಣಗಳು ನ್ಯಾಯಾಲಯದ ವ್ಯಾಪ್ತಿಗೆ ಒಳಪಡುವುದಿಲ್ಲ. ರೈತರು ಅನಗತ್ಯವಾಗಿ ಭೂಕಬಳಿಕೆ ವಿಶೇಷ ನ್ಯಾಯಾಲಯಕ್ಕೆ ಅಲೆಯುವುದು ತಪ್ಪುತ್ತದೆ. ಒತ್ತುವರಿಗೆ ಸಂಬಂಧಿಸಿದಂತೆ ಯಾವುದೇ ತಕರಾರು
ಗಳು ಇದ್ದರೆ ಕಂದಾಯ ಇಲಾಖೆಯೇ ಅದನ್ನು ಪರಿಶೀಲಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಲಿದೆ.

ADVERTISEMENT

ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು. ಭೂಕಬಳಿಕೆ ನಿಷೇಧ ಕಾಯ್ದೆ ತಂದಾಗ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಒಂದು ವಿಶೇಷ ನ್ಯಾಯಾಲ
ಯವನ್ನು ಸ್ಥಾಪಿಸಲಾಗಿತ್ತು. ಸ‌ಣ್ಣ ಪುಟ್ಟ ಒತ್ತುವರಿ ಪ್ರಕರಣಗಳಿಗೆ ಸಂಬಂಧಿ
ಸಿದಂತೆ ರೈತರು ವಿಶೇಷ ನ್ಯಾಯಾಲಯಕ್ಕೆ ಬರಬೇಕಾಗಿತ್ತು. ರೈತರು ಇದರಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು ಎಂದು ಹೇಳಿದರು.

ಮಡಿದ ಯೋಧರ ಕುಟುಂಬಕ್ಕೆ ನೌಕರಿ

ಸೇನಾ ಕರ್ತವ್ಯದಲ್ಲಿದ್ದಾಗ ಪ್ರಾಣತ್ಯಾಗ ಮಾಡಿದ ಯೋಧರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿಯನ್ನು ನೀಡಲು ಸರ್ಕಾರ ತೀರ್ಮಾನಿಸಿದೆ. ಆದರೆ ಅಂತಹ ಕುಟುಂಬಗಳಿಗೆ ₹25 ಲಕ್ಷ ಎಕ್ಸ್‌ಗ್ರೇಷಿಯಾ ಕೊಡುವುದಿಲ್ಲ. ನಿವೇಶನ ಅಥವಾ ಭೂಮಿ ನೀಡಬೇಕು ಎಂಬ ಬೇಡಿಕೆ ಇತ್ತು. ಇವೆಲ್ಲವುದರ ಬದಲಿಗೆ ಸರ್ಕಾರಿ ಉದ್ಯೋಗ ನೀಡುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿದೆ. ರಾಜ್ಯದಲ್ಲಿ ಇಂತಹ 400 ಕುಟುಂಬಗಳಿದ್ದು, 200 ಮಂದಿ ಅರ್ಹತೆ ಹೊಂದಿದ್ದಾರೆ.

ಕೃಷಿ ಕಾರ್ಮಿಕರ ಮಕ್ಕಳಿಗೂ ವಿದ್ಯಾನಿಧಿ

ಮುಖ್ಯಮಂತ್ರಿಯವರ ರೈತ ವಿದ್ಯಾನಿಧಿ ಯೋಜನೆಯನ್ನು ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ವಿಸ್ತರಿಸಲು ತೀರ್ಮಾನಿಸಲಾಗಿದೆ.

‘ಡಿ’ ಗ್ರೂಪ್‌ ಆಯ್ಕೆಗೆ ಸಂದರ್ಶನ ಇಲ್ಲ

ರಾಜ್ಯ ಸರ್ಕಾರದ ‘ಡಿ’ ಗ್ರೂಪ್‌ ನೌಕರರ ಹುದ್ದೆಗಳಿಗೆ ಕೆಪಿಎಸ್‌ಸಿ ನಡೆಸುವ ನೇಮಕಾತಿಗಳಿಗೆ ಇನ್ನು ಮುಂದೆ ಸಂದರ್ಶನ (ವೈವಾ) ಇರುವುದಿಲ್ಲ. ಇದಕ್ಕಾಗಿ ಕರ್ನಾಟಕ ಲೋಕಸೇವಾ ಆಯೋಗದ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದ್ದು, ಕೇವಲ ಲಿಖಿತ ಪರೀಕ್ಷೆ ನಡೆಸಿ ಅದರ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.

ಸೆ 12 ರಿಂದ ಅಧಿವೇಶನ

ಸೆಪ್ಟೆಂಬರ್‌ 12 ರಿಂದ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ನಡೆಯಲಿದೆ. ಒಟ್ಟು 10 ದಿನಗಳ ಕಾಲ ಅಧಿವೇಶನ ನಡೆಯಲಿವೆ.

8 ಜಿಲ್ಲೆಗೆ ಹೊಸ ವಿಶ್ವವಿದ್ಯಾಲಯ

ಹೊಸದಾಗಿ ಎಂಟು ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಚಾಮರಾಜನಗರ, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಬಾಗಲಕೋಟೆ, ಬೀದರ್ ಮತ್ತು ಮಂಡ್ಯ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಹಾದಿ ಸುಗಮವಾಗಿದೆ. ಮಂಡ್ಯ ವಿಶ್ವವಿದ್ಯಾಲಯ ಹೊರತುಪಡಿಸಿ ಉಳಿದ 7 ವಿಶ್ವವಿದ್ಯಾಲಯಗಳ ಆರಂಭವನ್ನು ಈ ವರ್ಷದ ಬಜೆಟ್‌ನಲ್ಲಿ ಘೋಷಿಸಲಾಗಿತ್ತು.

ಈಗಾಗಲೇ ತಲಾ ₹ 2 ಕೋಟಿಯಂತೆ ಒಟ್ಟು ₹ 14 ಕೋಟಿ ಒದಗಿಸಲಾಗಿದೆ. ಮಂಡ್ಯದ ಸರ್ಕಾರಿ ಕಾಲೇಜನ್ನು ಪೂರ್ಣ ಪ್ರಮಾಣದ ವಿಶ್ವವಿದ್ಯಾಲ
ಯವಾಗಿ ಮಾಡುವ ತೀರ್ಮಾನವನ್ನು ಈಚೆಗೆ ಕೈಗೊಳ್ಳಲಾಗಿತ್ತು. ಅದಕ್ಕೆ ಸಂಪುಟ ಘಟನೋತ್ತರ ಅನುಮೋದನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.