ಬೆಂಗಳೂರು: ಪ್ರಸಕ್ತ ಸಾಲಿನ ಜೂನ್ ಮತ್ತು ಜುಲೈ ತಿಂಗಳಲ್ಲಿ (ಎರಡು ತಿಂಗಳು) ಪ್ರತಿ ಶಾಲಾ ವಿದ್ಯಾರ್ಥಿಗೆ ಆಹಾರಧಾನ್ಯದ ಜೊತೆಗೆ ತಲಾ ಅರ್ಧ ಕಿಲೋ ಕೆನೆಭರಿತ ಹಾಲಿನ ಪುಡಿ ವಿತರಿಸುವ ‘ಕ್ಷೀರ ಭಾಗ್ಯ ಯೋಜನೆ’ ಅನುಷ್ಠಾನಗೊಳಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.
ಈ ಯೋಜನೆಯಡಿ 30 ಜಿಲ್ಲೆಗಳ ಒಟ್ಟು 56,64,873 ಮಕ್ಕಳಿಗೆ ಹಾಲಿನ ಪುಡಿ ವಿತರಣೆ ಆಗಲಿದೆ. ಒಟ್ಟು ₹ 163.71 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಶಿಕ್ಷಣ ಇಲಾಖೆಗೆ ನೀಡಿದ ವಾರ್ಷಿಕ ಅನುದಾನದಲ್ಲಿ ಜಿಲ್ಲಾ ವಲಯಕ್ಕೆ ವೇತನೇತರ ವೆಚ್ಚಕ್ಕೆ ಹಂಚಿಕೆಯಾದ ಅನುದಾನದಲ್ಲಿ ₹ 117.97 ಕೋಟಿ, ಪರಿಶಿಷ್ಟ ಜಾತಿ ಉಪ ಯೋಜನೆಯಿಂದ (ಎಸ್‌ಸಿಪಿ) ₹ 21.82 ಕೋಟಿ, ಪರಿಶಿಷ್ಟ ಪಂಗಡಗಳ ಉಪ ಯೋಜನೆಯಿಂದ (ಟಿಎಸ್‌ಪಿ) 23.91 ಕೋಟಿ ಬಳಕೆಯಾಗಲಿದೆ.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಳದಿಂದ (ಕೆಎಂಎಫ್) ಹಾಲಿನ ಪುಡಿ ಖರೀದಿಸಿ ವಿತರಿಸಲು ನಿರ್ಧರಿಸಲಾಗಿದೆ. ಕೆಎಂಎಫ್ ಹಾಲಿನ ಪುಡಿ ದರವನ್ನು ಪ್ರತಿ ಕಿಲೋಗೆ ₹ 275 (ಜಿಎಎಸ್‌ಟಿ) ಪ್ರತ್ಯೇಕ ನಿಗದಿಪಡಿಸಿದೆ.
ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು, ಅಡುಗೆ ಸಿಬ್ಬಂದಿ ಮಕ್ಕಳ ಹೆಸರು, ತರಗತಿಯನ್ನು ನಮೂದಿಸಿ, ಪೋಷಕರಿಂದ ಸ್ವೀಕೃತಿ ಸಹಿ ಪಡೆದು ಹಾಲಿನ ಪುಡಿ ವಿತರಿಸಬೇಕು. ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರೊಬ್ಬರು ಹಾಜರಿರಬೇಕು ಮತ್ತು ಅವರ ಸಹಿಯನ್ನೂ ಪಡೆಯಬೇಕು ಎಂದು
ಸ್ಪಷ್ಟಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.