ADVERTISEMENT

ತುಂಗಭದ್ರಾ ಅವಘಡ: ಗೇಟ್‌ ಅಳವಡಿಸುವ ಸಾಹಸದ ಕೆಲಸ ಆರಂಭ

ತುಂಗಭದ್ರಾ ಜಲಾಶಯದ ಮೇಲೆ ಬೃಹತ್‌ ಕ್ರೇನ್‌ಗಳಿಂದ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 23:32 IST
Last Updated 14 ಆಗಸ್ಟ್ 2024, 23:32 IST
ಕೊಪ್ಪಳ ಜಿಲ್ಲೆಯ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್‌ ಬಳಿ ಗೇಟ್‌ ಮರಳಿ ಅಳವಡಿಸಲು ತಂದಿರುವ ಬೃಹತ್‌ ಕ್ರೇನ್‌ಗಳು – ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ
ಕೊಪ್ಪಳ ಜಿಲ್ಲೆಯ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್‌ ಬಳಿ ಗೇಟ್‌ ಮರಳಿ ಅಳವಡಿಸಲು ತಂದಿರುವ ಬೃಹತ್‌ ಕ್ರೇನ್‌ಗಳು – ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ   

ಕೊಪ್ಪಳ/ಹೊಸಪೇಟೆ: ಐದು ದಿನಗಳ ಹಿಂದೆ ಕೊಚ್ಚಿ ಹೋಗಿರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್‌ ಜಾಗಕ್ಕೆ ಮತ್ತೊಂದು ಹೊಸ ‘ಸ್ಟಾಪ್‌ ಲಾಗ್ ಗೇಟ್‌’ ಅಳವಡಿಸುವ ಪ್ರಕ್ರಿಯೆ ಬುಧವಾರ ಆರಂಭವಾಗಿದೆ.

ಇದಕ್ಕಾಗಿ ತಲಾ 80 ಟನ್‌ ತೂಕವಿರುವ ಬೃಹತ್‌ ಗಾತ್ರದ ಎರಡು ಕ್ರೇನ್‌ಗಳನ್ನು ಅಣೆಕಟ್ಟೆಯ ಸೇತುವೆ ಮೇಲೆ ನಿಲ್ಲಿಸಲಾಗಿದೆ. ನಾಲ್ಕು ಅಡಿ ಎತ್ತರದ ಕಬ್ಬಿಣದ ನಾಲ್ಕು ಸೆಟ್‌ಗಳನ್ನು ಆರಂಭದಲ್ಲಿ ಜೋಡಿಸಲಾಗುತ್ತದೆ. ಕೊಪ್ಪಳ ತಾಲ್ಲೂಕಿನ ಹೊಸಳ್ಳಿ, ಹೊಸಪೇಟೆ ಸಮೀಪದ ಸಂಕ್ಲಾಪುರ ಮತ್ತು ತೋರಣಗಲ್‌ನ ಜಿಂದಾಲ್‌ ಕಂಪನಿಗಳಲ್ಲಿ ತಲಾ ಮೂರು ಎಲಿಮೆಂಟ್‌ಗಳನ್ನು ತಯಾರಿಸಲಾಗುತ್ತಿದೆ.

ತುಂಗಭದ್ರಾ ಮಂಡಳಿಯ ಅಧಿಕಾರಿಗಳು ಬುಧವಾರ ದಿನಪೂರ್ತಿ ಈ ಮೂರೂ ಕಂಪನಿಗಳಿಗೆ ಮೇಲಿಂದ ಮೇಲೆ ಭೇಟಿ ನೀಡಿ ತ್ವರಿತವಾಗಿ ಕೆಲಸ ಮುಗಿಸುವಂತೆ ತಿಳಿಸಿದರು. ಈ ಮೂರರಲ್ಲಿಯೂ ಈಗ ತಲಾ ಒಂದು ಎಲಿಮೆಂಟ್‌ ಸಿದ್ಧಗೊಂಡಿದ್ದು, ಬುಧವಾರ ಹೊಸ ಕ್ರಸ್ಟ್‌ಗೇಟ್‌ ಅಳವಡಿಸುವ ಪ್ರಕ್ರಿಯೆ ಶುರುವಾಗಿದೆ.

ADVERTISEMENT

ಇದಕ್ಕೂ ಪೂರ್ವದಲ್ಲಿ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಉಸ್ತುವಾರಿ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ನಿರ್ವಿಘ್ನವಾಗಿ ಗೇಟ್‌ ಜೋಡಣೆ ಕಾರ್ಯ ನಡೆಯಲಿ ಎಂದು ಪ್ರಾರ್ಥಿಸಿ ಜಲಾಶಯದ 19ನೇ ಗೇಟ್‌ ಮುಂಭಾಗದಲ್ಲಿಯೇ ಪೂಜೆ ನೆರವೇರಿಸಿದರು.

‘ಜವಾಬ್ದಾರಿ ವಹಿಸಿದ್ದ ಕಂಪನಿಗಳು ಎಲಿಮೆಂಟ್‌ಗಳನ್ನು ತಯಾರಿಸಿವೆ. ಗೇಟ್‌ ಬಳಿ ಅಪಾಯಕ್ಕೆ ಆಹ್ವಾನವಿಲ್ಲದಂತೆ ಹೇಗೆ ಕೆಲಸ ಮಾಡಬೇಕು ಎನ್ನುವುದರ ಬಗ್ಗೆ ಅಧಿಕಾರಿಗಳು ಮತ್ತು ತಜ್ಞರ ಜೊತೆ ಸಮಾಲೋಚಿಸಲಾಗಿದೆ. ಬುಧವಾರ ಗೇಟ್‌ ಅಳವಡಿಕೆ ಪ್ರಕ್ರಿಯೆ ಆರಂಭವಾಗಿದೆ’ ಎಂದು ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರವೇಶ ನಿರ್ಬಂಧ:

ಪ್ರತಿ ವರ್ಷ ಆಗಸ್ಟ್‌ 15ರಂದು ದೊಡ್ಡ ಸಂಖ್ಯೆಯಲ್ಲಿ ಜನ ಜಲಾಶಯಕ್ಕೆ ಭೇಟಿ ನೀಡಿ ನೀರಿನ ಅಲೆಗಳನ್ನು ಕಣ್ತುಂಬಿಕೊಳ್ಳುತ್ತಿದ್ದರು. ಈಗ ಗೇಟ್‌ ಅಳವಡಿಕೆ ಕಾರ್ಯ ನಡೆಯುತ್ತಿರುವ ಕಾರಣ ಜಲಾಶಯದ ಕೆಳಭಾಗದಿಂದಲೇ ಸಾರ್ವಜನಿಕರ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಅಗತ್ಯ ಪೊಲೀಸರು ಮತ್ತು ಅಧಿಕಾರಿಗಳು ಮಾತ್ರವೇ ಜಲಾಶಯದ ಸೇತುವೆ ಮೇಲೆ ಓಡಾಟಕ್ಕೆ ಅವಕಾಶ ನೀಡಲಾಗಿದೆ.

ಗೇಟ್‌ ಅಳವಡಿಕೆ ಕಾರ್ಯಾಚರಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಜಲಾಶಯದಿಂದ ಕೊನೆಯಲ್ಲಿ 1,00,055 ಕ್ಯುಸೆಕ್ ನೀರು ಹೊರಬಿಡಲಾಗಿದೆ.

ಸಾಹಸದ ಕೆಲಸ: ಕನ್ನಯ್ಯ ನಾಯ್ಡು

‘ಕೆರೆ ಕಟ್ಟೆಗಳಲ್ಲಿ ನೀರು ತುಂಬಿದಾಗಲೇ ತಾತ್ಕಾಲಿಕ ಗೇಟ್ ಹಾಕುವುದು ಕಷ್ಟ. ಇನ್ನು ಬೃಹತ್‌ ಜಲಾಶಯವೊಂದಕ್ಕೆ 60 ಅಡಿ ಎತ್ತರದಲ್ಲಿ ಗೇಟ್‌ ಹಾಕುವುದು ಸಾಹಸದ ಕೆಲಸವೇ ಸರಿ’ ಎಂದು ಜಲಾಶಯಗಳ ಗೇಟ್‌ ಪರಿಣತ ಮತ್ತು ಸುರಕ್ಷತಾ ಎಂಜಿನಿಯರ್‌ ಕನ್ನಯ್ಯ ನಾಯ್ಡು ಅಭಿಪ್ರಾಯಪಟ್ಟರು. 

ಮಾಧ್ಯಮಗಳ ಜತೆ ಮಾತನಾಡಿದ ಅವರು ‘ಎರಡು ಬದಿಯಲ್ಲಿ ಕ್ರೇನ್‌ಗಳನ್ನು ನಿಲ್ಲಿಸಿ ತಾತ್ಕಾಲಿಕ ಗೇಟ್ ಇರಿಸಲು ಸದ್ಯ ಪ್ರಯತ್ನಿಸುತ್ತಿದ್ದೇವೆ. ಮೊದಲು ನಾಲ್ಕು ಅಡಿ ಎತ್ತರದ ತಾತ್ಕಾಲಿಕ ಗೇಟ್ ಅನ್ನು ನಿಲ್ಲಿಸುತ್ತೇವೆ. ನಂತರ 8 ಅಡಿ ಎತ್ತರದ ಮತ್ತೊಂದು ತಾತ್ಕಾಲಿಕ ಗೇಟ್ ಅನ್ನು ಇರಿಸುತ್ತೇವೆ. ಹೀಗೆ 12 ಅಡಿ ಎತ್ತರದವರೆಗೆ ಗೇಟ್‌ ಅಳವಡಿಸುವಲ್ಲಿ ಯಶಸ್ಸು ಕಂಡರೂ ಅಣೆಕಟ್ಟಿನ ಬಹುಪಾಲು ನೀರನ್ನು ನಿಲ್ಲಿಸಲು ಸಾಧ್ಯವಾಗುತ್ತದೆ. ಆದರೆ ಪ್ರವಾಹದ ರೀತಿಯಲ್ಲಿ ಹರಿವು ಇರುವ ಈ ಸಂದರ್ಭದಲ್ಲಿ ಇದೆಲ್ಲವೂ ಸವಾಲಿನ ಕೆಲಸ. ಸದ್ಯ ಜಲಾಶಯದ ಇನ್ನಿತರೆ ಗೇಟ್‌ಗಳು ಉತ್ತಮ ಸ್ಥಿತಿಯಲ್ಲಿದ್ದರೂ ಮತ್ತೊಮ್ಮೆ ಅವುಗಳನ್ನು ಪರಿಶೀಲಿಸುವಂತೆ ತಜ್ಞರಿಗೆ ಸಲಹೆ ನೀಡಿದ್ದೇನೆ’ ಎಂದು ಹೇಳಿದರು.

‘ಮೂರ್ನಾಲ್ಕು ದಿನಗಳಲ್ಲಿ ಪೂರ್ಣಗೊಳ್ಳುವ ವಿಶ್ವಾಸ’

ಕೊಪ್ಪಳ: ಮನುಷ್ಯ ಯಂತ್ರಗಳ ಮೇಲೆಯೇ ಅವಲಂಬಿತನಾಗಿರುವ ಕಾರಣ ಈ ಘಟನೆ ನಡೆದಿದೆ. ಅಪಾರ ಪ್ರಮಾಣದಲ್ಲಿ ನೀರು ಪೋಲಾಗಿದೆ. ಸರ್ಕಾರ ತ್ವರಿತಗತಿಯಲ್ಲಿ ಕ್ರಮ ಕೈಗೊಂಡಿದ್ದು ಮೂರ್ನಾಲ್ಕು ದಿನಗಳಲ್ಲಿ ಗೇಟ್‌ ಅಳವಡಿಕೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು. ಗೇಟ್‌ ಸ್ಥಳ ವೀಕ್ಷಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ ‘ಮತ್ತೆ ಮಳೆಯಾಗಿ ಉತ್ತಮ ಒಳಹರಿವು ಹೆಚ್ಚಾಗುವ ವಿಶ್ವಾಸವಿದೆ. ಜಲಾಶಯ ನಿರ್ವಹಣೆಗೆ ಸರ್ಕಾರ ಉತ್ತಮವಾಗಿಯೇ ಕ್ರಮ ಕೈಗೊಳ್ಳುತ್ತಿದೆ’ ಎಂದರು.

ಗೇಟ್‌ ಅಳವಡಿಕೆಯಂಥ ಸಾಹಸದ ಮತ್ತು ಅತ್ಯಂತ ಅಪಾಯಕಾರಿಯಾದ ಕೆಲಸವನ್ನು ಆರಂಭಿಸಿದ್ದೇವೆ. ಜಲಾಶಯಕ್ಕೆ ಬಾರದೇ ಎಲ್ಲರೂ ಸಹಕಾರ ನೀಡಿದರೆ ಕೆಲಸ ಸುಗಮವಾಗುತ್ತದೆ.
ಒ.ಆರ್.ಕೆ.ರೆಡ್ಡಿ, ತುಂಗಭದ್ರಾ ಮಂಡಳಿ ಕಾರ್ಯದರ್ಶಿ
ಕಿತ್ತುಹೋಗಿರುವ ಗೇಟ್‌ ದುರಸ್ತಿಗೊಳಿಸಲು ತುಂಗಭದ್ರಾ ಜಲಾಶಯದ 29 ಕ್ರಸ್ಟ್‌ಗೇಟುಗಳ ಮೂಲಕವೂ ನೀರು ಹೊರಹಾಕುವ ಕಾರ್ಯ ಬುಧವಾರವೂ ಮುಂದುವರಿದಿತ್ತು –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ
ತುಂಗಭದ್ರಾ ಅಣೆಕಟ್ಟಿನ ಮೇಲೆ ಸಿದ್ಧವಾಗಿ ನಿಂತಿರುವ ಕ್ರೇನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.