ADVERTISEMENT

ರಂಗ ಶಿಕ್ಷಕರ ನೇಮಕಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 21:43 IST
Last Updated 12 ಜೂನ್ 2021, 21:43 IST

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ರಂಗ ಶಿಕ್ಷಕರ ನೇಮಕಾತಿಗೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ರಂಗಕರ್ಮಿಗಳು ಒತ್ತಾಯಿಸಿದ್ದಾರೆ.

‌ವಿಶ್ವೇಶ್ವರ ಹೆಗಡೆ ಕಾಗೇರಿ ಶಿಕ್ಷಣ ಸಚಿವರಾಗಿದ್ದಾಗ 2008ರಲ್ಲಿ ರಂಗ ಶಿಕ್ಷಕರ ನೇಮಕಾತಿ ನಡೆದಿತ್ತು. ಬಳಿಕ ನೇಮಕಾತಿ ಪ್ರಕ್ರಿಯೆ ನಡೆದಿರಲಿಲ್ಲ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಕರ್ನಾಟಕ ನಾಟಕ ಅಕಾಡೆಮಿ ಬಳಿಕ ಬಂದ ಸರ್ಕಾರಗಳಿಗೆ ಮನವಿ ಸಲ್ಲಿಸಿತ್ತು. ಈಗ ಸಹ ಶಿಕ್ಷಕರು, ದೈಹಿಕ ಶಿಕ್ಷಕರು ಸಂಗೀತ ಶಿಕ್ಷಕರು, ಚಿತ್ರಕಲಾ ಶಿಕ್ಷಕರ ನೇಮಕಾತಿಗೆ ಕರಡು ಅಧಿಸೂಚನೆಯನ್ನು ತಯಾರಿಸುತ್ತಿರುವ ಕಾರಣ ‘ರಂಗ ಶಿಕ್ಷಕರನ್ನು ಕೂಡ ಸೇರಿಸಿ, ಅಧಿಸೂಚನೆಯನ್ನು ಹೊರಡಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ಕ್ರಮಕೈಗೊಳ್ಳಬೇಕು’ ಎಂಬ ಆಗ್ರಹ ರಂಗಭೂಮಿ ವಲಯದಲ್ಲಿ ಕೇಳಿಬಂದಿದೆ.

ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರ್ಗಿ ಹೆಚ್ಚುವರಿ ಆಯುಕ್ತರು ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆಯನ್ನು ತಯಾರಿಸಿ, ಸಲ್ಲಿಸುವಂತೆ ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬೀದರ್ ಹಾಗೂ ಬಳ್ಳಾರಿಯ ಉಪನಿರ್ದೇಶಕರಿಗೆ ಸೂಚಿಸಿದ್ದಾರೆ. ಇದರಲ್ಲಿ ರಂಗ ಶಿಕ್ಷಕರನ್ನು ಕೂಡ ಸೇರ್ಪಡೆ ಮಾಡಬೇಕೆಂದು ರಂಗಕರ್ಮಿಗಳಾದ ಶ್ರೀನಿವಾಸ ಜಿ. ಕಪ್ಪಣ್ಣ, ಜೆ. ಲೋಕೇಶ್, ನಾಗರಾಜಮೂರ್ತಿ, ಶಶಿಧರ್ ಭಾರಿಘಾಟ್ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.

ADVERTISEMENT

‘ರಂಗ ಶಿಕ್ಷಣವು ಮೌಲ್ಯಾಧಾರಿತ ಶಿಕ್ಷಣದ ಬೆಳವಣಿಗೆಗೆ ಸಹಕಾರಿಯಾಗಲಿದೆ. ದೃಶ್ಯಕಲೆ, ಅಭಿನಯ ಕಲೆಯ ಮೂಲಕ ತರಬೇತಿ ನೀಡಿದಲ್ಲಿ ಅದು ಮಕ್ಕಳ ಗ್ರಹಿಕೆಯ ಸಾಮರ್ಥ್ಯ, ಸಂವಹನ ಕೌಶಲವನ್ನು ವೃದ್ಧಿಸುತ್ತದೆ. ಸರ್ಕಾರವು ರಂಗ ಶಿಕ್ಷಕರ ನೇಮಕಾತಿಗೆ ಕ್ರಮಕೈಗೊಳ್ಳಬೇಕು’ ಎಂದು ಕರ್ನಾಟಕ ನಾಟಕ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಜೆ. ಲೋಕೇಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.