ಕೊಪ್ಪಳ: ‘ರಾಜ್ಯದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಅನಧಿಕೃತ ಚರ್ಚ್‌ಗಳಿದ್ದು ಅವುಗಳನ್ನು ಸರ್ಕಾರ ತೆರವು ಮಾಡದಿದ್ದರೆ ನಾವೇ ತಂಡ ಕಟ್ಟಿಕೊಂಡು ಬುಲ್ಡೋಜರ್ ಮೂಲಕ ತೆರವು ಮಾಡುತ್ತೇವೆ’ ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಜನರ ಬಡತನ ಬಂಡವಾಳ ಮಾಡಿಕೊಂಡು ರಾಜ್ಯದ ತಾಂಡಗಳಲ್ಲಿ ಲಂಬಾಣಿ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ. ಇದರ ವಿರುದ್ಧ ದೊಡ್ಡ ಹೋರಾಟ ನಡೆಯಬೇಕು. ಜನರ ಮುಗ್ದತೆಯನ್ನು ಕ್ರಿಶ್ಚಿಯನ್ನರು ಬಳಸಿಕೊಳ್ಳುತ್ತಿದ್ದಾರೆ. ಮತಾಂತರ ದೇಶಕ್ಕೆ ಅಂಟಿಕೊಂಡ ದೊಡ್ಡ ವೈರಸ್’ ಎಂದರು.
ಓಲೈಕೆ: ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ ಧೋರಣೆ ನಡೆಸಿ ಮುಸ್ಲಿಮರ ಓಲೈಕೆಯಲ್ಲಿ ತೊಡಗಿದೆ. ಆ ಪಕ್ಷದವರು ಯಾವಾಗಲೂ ಬಾಬರ್ ಪರವಾಗಿ ನಿಂತವರು. ಬಜೆಟ್‌ನಲ್ಲಿ ಚರ್ಚ್ ಮತ್ತು ಮಂಗಳೂರಿನ ಹಜ್ ಭವನಕ್ಕೆ ನೂರಾರು ಕೋಟಿ ರೂಪಾಯಿ ಘೋಷಿಸಿದ್ದಾರೆ. 100 ರಾಮ ಮಂದಿರಗಳನ್ನು ಅಭಿವೃದ್ಧಿ ಪಡಿಸುವುದಾಗಿ ಹೇಳಿದರೂ ಅದಕ್ಕಾಗಿ ನಯಾಪೈಸೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ರಾಮಮಂದಿರದ ಆನಂದ ಸಹಿಸಲು ಕಾಂಗ್ರೆಸ್‌ನವರಿಗೆ ಸಾಧ್ಯವಾಗುತ್ತಿಲ್ಲ. ದೇಶದಲ್ಲಿ ಕಾಂಗ್ರೆಸ್ ನಿರ್ನಾಮವಾಗುತ್ತದೆ. ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ಜಾಗದಲ್ಲಿಯೇ ರಾಮಮಂದಿರ ನಿರ್ಮಾಣ ಮಾಡಲಾಗಿದೆ. ರಾಮನ ವಿರುದ್ಧವಾಗಿ ಯಾರೇ ಮಾತನಾಡಿದರೂ ಅವರಿಗೆ ರಾಮನ ಶಾಪ ತಟ್ಟುತ್ತದೆ’ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಕೆ.ಎಸ್. ಆಸ್ಪತ್ರೆಯ ವೈದ್ಯ ಬಸವರಾಜ ಕೆ. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.